ಬಂಡೀಪುರದಲ್ಲಿ ಸೇವ್ ಜಟಾಯು ಸಮೀಕ್ಷೆ: ಈಜಿಪ್ಟಿಯನ್ ರಣಹದ್ದು ಪತ್ತೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ 2023ರ ರಣಹದ್ದಿನ ಸರ್ವೇಕ್ಷಣೆಯಲ್ಲಿ ಕೇವಲ ಒಂದು ಈಜಿಪ್ಟಿಯನ್ ರಣಹದ್ದು ಕಾಣಿಸಿಕೊಂಡಿದೆ.
ಮೈಸೂರು, ಫೆಬ್ರವರಿ 27: ಕರ್ನಾಟಕ ಅರಣ್ಯ ಇಲಾಖೆ ಹಾಗೂ ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಷನ್(ಡಬ್ಲ್ಯೂಸಿಎಫ್) ಸಹಭಾಗಿತ್ವದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ 2023ರ ರಣಹದ್ದಿನ ಸರ್ವೇಕ್ಷಣೆಯಲ್ಲಿ ಕೇವಲ ಒಂದು ಈಜಿಪ್ಟಿಯನ್ ರಣಹದ್ದು ಕಾಣಿಸಿಕೊಂಡಿದೆ.
ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ನಾಲ್ಕು ಬಗೆಯ ರಣ ಹದ್ದುಗಳಿವೆ. ಅವುಗಳ ಪೈಕಿ ಸಮೀಕ್ಷೆಯಲ್ಲಿ 61 ಬಿಳಿ ಬೆನ್ನಿನ ರಣಹದ್ದು, 13 ಭಾರತೀಯ ರಣಹದ್ದು, 30 ಕೆಂಪು ತಲೆಯ ರಣಹದ್ದು ಕಂಡುಬಂದಿವೆ. 1 ಈಜಿಪ್ಟಿಯನ್ ರಣಹದ್ದು ಕಂಡುಬಂದಿದೆ. ಇದು ನಗರವಾಸಿಯಾಗಿರುವ ಕಾರಣ ಅರಣ್ಯ ಪ್ರದೇಶದಲ್ಲಿ ವಿರಳ ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಮಾಯಣದ ಜಟಾಯುವಿನ ಸಂತತಿಯ ಈ ರಣಹದ್ದುಗಳು ಪರಿಸರದಲ್ಲಿ ಸರ್ವೋಚ್ಚ ನೈಸರ್ಗಿಕ ಸ್ವಚ್ಛತಾ ಕರ್ಮಿಗಳು. ಇವುಗಳು ಸತ್ತ ಪ್ರಾಣಿಯ ಮಾಂಸವನ್ನು ತಿನ್ನುತ್ತವೆ. ಯಾವುದೇ ವಿಧವಾದ ವೈರಾಣು, ಬ್ಯಾಕ್ಟೀರಿಯಾ ಅಥವ ಸೂಕ್ಷ್ಮಾಣುಗಳನ್ನು ಜೀರ್ಣಿಸಿಕೊಳ್ಳಲು ಸಮರ್ಥವಾಗಿವೆ. ಹಾಗಾಗಿ ಸತ್ತ ಪ್ರಾಣಿಗಳ ಮೂಲಕ ಬದುಕಿರುವ ಇನ್ನಿತರ ಪ್ರಾಣಿಗಳಿಗೆ ಹರಡಬಹುದಾದ ಸೋಂಕುಗಳನ್ನು ನಿಗ್ರಹಿಸುವಲ್ಲಿ ಇವುಗಳ ಕೊಡುಗೆ ಅಪಾರ ಎಂದು ತಿಳಿಸಿದ್ದಾರೆ.
ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ತರವಾದ ಕಾರ್ಯ ನಿರ್ವಹಿಸುವ ರಣಹದ್ದುಗಳು ಈ ಹಿಂದೆ ಎಲ್ಲೆಡೆ ಹೇರಳವಾಗಿ ಕಂಡು ಬರುತ್ತಿದ್ದವು. ಆದರೆ ಈಗ ಇವುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಶೇ. 99ರಷ್ಟು ನಶಿಸಿವೆ. ಸಂರಕ್ಷಿಸಲು ಪಕ್ಷಿತಜ್ಞರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ ಉಳಿದಿರುವ ರಣ ಹದ್ದುಗಳಿಗೆ ನೀಲಗಿರಿ ಬಯೋಸ್ಪಿಯರ್ ರಿಸರ್ವ್ ಸೂಕ್ತವಾದ ಆವಾಸಸ್ಥಾನ. ರಣಹದ್ದುಗಳಿಗೆ ಈ ಜಾಗವು ಸೂಕ್ತವಾದ ಸಂತಾನೋತ್ಪತ್ತಿ ಮಾಡುವ ಕಾಡುಗಳಲ್ಲಿ ಪ್ರಮುಖವಾಗಿದೆ ಎಂದು ಡಬ್ಲ್ಯೂಸಿಎಫ್ ಮುಖ್ಯಸ್ಥ ಡಾ.ರಾಜಕುಮಾರ್ ದೇವರಾಜ್ ಅರಸ್ ಹೇಳಿದ್ದಾರೆ.
ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ನಶಿಸುವ ಹಂತ ತಲುಪಿರುವುದರಿಂದ ಎಚ್ಚೆತ್ತ ಅರಣ್ಯ ಸಚಿವಾಲಯವು ರಣಹದ್ದುಗಳ ಸರ್ವೇಗೆ ಮುಂದಾಗಿದೆ. ಅಳಿವಿನಂಚಿನಲ್ಲಿರುವ ಜಟಾಯುಗಳನ್ನು ಉಳಿಸಿಕೊಳ್ಳಲೇ ಬೇಕಾದ ತುರ್ತು ಎದುರಿಗಿರುವ ಹಿನ್ನೆಲೆಯಲ್ಲಿ ನೀಲಗಿರಿ ಶ್ರೇಣಿಯಲ್ಲಿ ಫೆಬ್ರವರಿ 25 ಹಾಗೂ 26 ರಂದು ಸರ್ವೇ ನಡೆದಿದೆ. ಬಂಡೀಪುರದಲ್ಲಿ ರಣಹದ್ದು ಸರ್ವೇಕ್ಷಣೆ ಬಗ್ಗೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದ್ದು, ಇದೀಗ ಸರ್ವೇ ಸಂಪೂರ್ಣಗೊಂಡಿದೆ.












Click it and Unblock the Notifications