Dasara Drone Show: ಮೈಸೂರು ದಸರಾ ಮೆರುಗು ಹೆಚ್ಚಿಸಿದ ಡ್ರೋನ್ ಶೋ
ಈ ಬಾರಿ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ದಸರಾ ವೈಭವ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಮೈಸೂರು ದಸರಾ ಅಂಗವಾಗಿ ಡ್ರೋನ್ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು. ಸಾವಿರಾರು ಜನ ಆಗಸದಲ್ಲಿ ಡ್ರೋಣ್ ಚಿತ್ತಾರವನ್ನು ಕಣ್ತುಂಬಿಕೊಂಡರು. ಅಂಬಾರಿಯಿಂದ, ಕರ್ನಾಟಕ ಭೂಪಟದವರೆಗೆ ಹಲವು ಚಿತ್ತಾರಗಳು ಆಗಸದಲ್ಲಿ ಮೂಡಿಬಂದವು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದ ವತಿಯಿಂದ ದಸರಾ ಹಿನ್ನೆಲೆಯಲ್ಲಿ ಡ್ರೋನ್ ಪ್ರದರ್ಶನ ಆಯೋಜಿಸಲಾಗಿತ್ತು. ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಶೋ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಚಾಲನೆ ನೀಡಿದರು.

1500 ಡ್ರೋನ್ ಗಳು ಏಕಕಾಲದಲ್ಲಿ ಆಕಾಶದಲ್ಲಿ ಹಲವು ಬಗೆಯ ಕಲಾಕೃತಿಗಳನ್ನು ರಚಿಸಿದವು. ಬಾಟ್ ಲ್ಯಾಬ್ ಡೈನಮಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಈ ಡ್ರೋನ್ ಪ್ರದರ್ಶನ ಆಯೋಜಿಸಲಾಗಿತ್ತು. ರಾತ್ರಿ 8:45ರ ಸುಮಾರಿಗೆ ಆರಂಭವಾದ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸುವ ಮೂಲಕ ನೆರೆದಿದ್ದ ಜನರಿಗೆ ರೋಚಕ ಅನುಭವ ನೀಡಿತು.
ಇದೇ ಮೊದಲ ಬಾರಿಗೆ ನಡೆದ ದಸರಾ ಡ್ರೋನ್ ಪ್ರದರ್ಶನವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.
ಗಾಯಕ ರಾಜೇಶ್ ಕೃಷ್ಣನ್ ಮೋಡಿ
ಡ್ರೋನ್ ಪ್ರದರ್ಶನ ಆರಂಭಕ್ಕೂ ಮುನ್ನ ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ರಾಜೇಶ್ ಕೃಷ್ಣನ್, ಹಲವು ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.












Click it and Unblock the Notifications