ದ್ವೇಷವನ್ನು ಹರಡಿ ಎಂದು ಯಾವ ಧರ್ಮಗ್ರಂಥದಲ್ಲೂ ಬರೆದಿಲ್ಲ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ
ಭಾರತ ದೇಶದಲ್ಲಿ ಅಲ್ಪ ಸಂಖ್ಯಾತ ಸಮುದಾಯವು ಬಹುಸಂಖ್ಯಾತ ಸಮುದಾಯದ ಮೇಲೆ ನಂಬಿಕೆ ಇಟ್ಟು ಬದುಕುತ್ತಿದ್ದಾರೆ. ಅಲ್ಪ ಸಂಖ್ಯಾತರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ ಮತ್ತು ಜವಬ್ದಾರಿಯಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಆದರೆ ಪ್ರಸ್ತುತ ಕೋಮುವಾದದ ನೆರಳು ಭಾರತದ ಪ್ರಜಾಪ್ರಭುತ್ವದ ಮೇಲೆ ತನ್ನ ಕಬಂಧ ಬಾಹು ಚಾಚುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ, ಉರ್ದು ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವ ಧರ್ಮವು ಕೂಡ ಅಧರ್ಮ, ಅನೀತಿಯನ್ನು ಬೋಧಿಸಿಲ್ಲ. ದ್ವೇಷವನ್ನು ಹರಡಿ ಎಂದು ಯಾವ ಧರ್ಮಗ್ರಂಥದಲ್ಲೂ ಬರೆದಿಲ್ಲ, ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧರ್ಮದ ಹೆಸರಿನಲ್ಲಿ ಬೇರೆಯವರ ಮೇಲೆ ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಮ್ಮ ಸಂವಿಧಾನ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಎಲ್ಲರಲ್ಲೂ ನಾವು ಭಾರತೀಯರು ಎನ್ನುವ ಮನಸ್ಥಿತಿ ಬರಬೇಕು. ಸಂವಿಧಾನದ ಆಶಯಕ್ಕೆ ನಾವು ಬದ್ಧರಾಗಿರಬೇಕು, ಜೀವನದ ಮೌಲ್ಯಗಳ ಮೇಲೆ ಧರ್ಮಗಳನ್ನು ಸೃಷ್ಠಿಸಲಾಗಿದೆ. ಹಾಗಾಗಿ ಮನುಷ್ಯರಾದವರು ಸಾಮರಸ್ಯ, ಸಹಬಾಳ್ವೆಯಿಂದ ಬಾಳಬೇಕು ಎಂದರು.
ಸಂವಿಧಾನ ರಕ್ಷಣೆ ನಮ್ಮ ಜವಾಬ್ದಾರಿ
ದೇಶದ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಸಂವಿಧಾನದ ಆಶಯಗಳನ್ನು ಗೌರವಿಸುವವರಿಗೆ ಎಲ್ಲರೂ ಬೆಂಬಲ ಕೊಡಬೇಕು. ರಾಜಕೀಯ ಸ್ವಾತಂತ್ರ್ಯದಿಂದ ಏಳಿಗೆ ಸಾಧ್ಯವಿಲ್ಲ. ಎಲ್ಲರಿಗೂ ಆರ್ಥಿಕ ಸ್ವಾವಲಂಬನೆ ಅಗತ್ಯವಿದೆ. ಎಲ್ಲಾ ನಾಗರೀಕರಿಗೂ ಶಿಕ್ಷಣದ ಸವಲತ್ತು ಸಿಗಬೇಕು. ಅದಕ್ಕಾಗಿಯೇ ಸಿಎಂ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಎಲ್ಲಾ ವರ್ಗದ ಜನತೆಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಅವರು ಮಾತನಾಡಿ, ಸಮಾಜ ನಮ್ಮ ಜೊತೆಗಿದೆ, ನಾವೂ ಕೂಡ ಸಮಾಜದ ಜೊತೆ ಇರುವುದನ್ನು ರೂಢಿಸಿಕೊಳ್ಳಬೇಕು. ಯಾರು ಅನ್ಯಧರ್ಮಕ್ಕೆ ಗೌರವ ಕೊಡುವುದಿಲ್ಲ, ಅವರು ಎಂದಿಗೂ ತಮ್ಮ ಧರ್ಮವನ್ನು ರಕ್ಷಣೆ ಮಾಡಿಕೊಳ್ಳಲಾರರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಾಮಾಜಿಕ ಕಾಂಗ್ರೆಸ್‌ನ ಧ್ಯೇಯ, ಹಿಂದುಳಿದ ವರ್ಗದವರು, ಶೋಷಿತರು, ಅಲ್ಪಸಂಖ್ಯಾತರ ಏಳಿಗೆಗಾಗಿ, ಸಾಮಾಜಿಕ ರಕ್ಷಣೆಗಾಗಿ ಶ್ರಮಿಸುತ್ತೇವೆ ಎಂದರು.












Click it and Unblock the Notifications