ಮೈಸೂರು ದಸರಾ-2020ರ ವೆಚ್ಚದ ಲೆಕ್ಕ ಕೊಟ್ಟ ಸಚಿವ ಎಸ್.ಟಿ ಸೋಮಶೇಖರ್
ಮೈಸೂರು, ನವೆಂಬರ್ 1: ವಿಶ್ವವಿಖ್ಯಾತ ಮೈಸೂರು ಸರಳ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಬಂದಿರುವ ಹಣ ಮತ್ತು ಆಗಿರುವ ವೆಚ್ಚದ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾನುವಾರ ನೀಡಿದರು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ ನಂತರ 10 ಕೋಟಿ ರೂ. ಬಿಡುಗಡೆ ಮಾಡಿತ್ತು. ಮೈಸೂರು ಸರಳ ದಸರಾಗೆ 2,05,83,167 ರೂ. ಖರ್ಚಾಗಿದೆ ಎಂದು ಸಚಿವರು ಲೆಕ್ಕ ಕೊಟ್ಟರು.
ಇದರಲ್ಲಿ ಹೆಚ್ಚು ಎಂದರೆ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ ಹಾಗೂ ಕಲಾವಿದರಿಗೆ 44 ಲಕ್ಷ ರೂ. ಹಣ ವೆಚ್ಚವಾಗಿದೆ. ದಸರಾ ಆನೆಗಳ ನಿರ್ವಹಣೆಗೆ 35 ಲಕ್ಷ ರೂ., ಇದ್ದ ಎರಡೇ ಎರಡು ವೇದಿಕೆಗೆ 41 ಲಕ್ಷ ರೂ., ರಾಜವಂಶಸ್ಥರಿಗೆ ಗೌರವ ಧನವಾಗಿ 40 ಲಕ್ಷ ರೂ. ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಇದರ ಜತೆಗೆ ಶ್ರೀರಂಗಪಟ್ಟಣ ದಸರಾಗೆ 50 ಲಕ್ಷ ರೂ. ಮತ್ತು ಚಾಮರಾಜನಗರ ದಸರಾಗೆ 36 ಲಕ್ಷ ರುಪಾಯಿ ವೆಚ್ಚವಾಗಿದ್ದು, ಒಟ್ಟು 2,91,83,167 ರೂ. ಹಣ ಖರ್ಚಾಗಿದೆ ಎಂದು ಮಾಹಿತಿ ನೀಡಿದ ಅವರು, ಯಾವುದೇ ಹೊಸ ವೆಚ್ಚ ಮಾಡಿಲ್ಲ, ಈ ಹಿಂದೆ ಮಾಡಿರುವ ವೆಚ್ಚವನ್ನಷ್ಟೆ ಮಾಡಿದ್ದೇವೆ ಎಂದರು.
ಮೈಸೂರು ಜಿಲ್ಲಾಡಳಿತ 23 ವಿಭಾಗಕ್ಕೆ ಹಣ ಖರ್ಚು ಮಾಡಿದೆ. ರಾಜವಂಶಸ್ಥರಿಗೆ ಗೌರವ ಧನ ನೀಡುವುದು ಸಹ ನಾನು ಹೊಸದಾಗಿ ಆರಂಭಿಸಿಲ್ಲ. ಎಲ್ಲವನ್ನು ಹಳೆ ಸಂಪ್ರದಾಯದಂತೆ ನಡೆಸಿದ್ದೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ರಾಜ್ಯ ಸರ್ಕಾರದಿಂದ ದಸರಾಗೆ 10 ಕೋಟಿ ರೂ. ಬಿಡುಗಡೆ ಆಗಿತ್ತು. ಮುಡಾ ಸಹ 5 ಕೋಟಿ ರೂ. ಹಣ ನೀಡಲಿದೆ. ಬಾಕಿ ಹಣವನ್ನು ಏನು ಮಾಡಬೇಕು ಅಂತ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದು ಕೆಲಸ ಮಾಡುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.












Click it and Unblock the Notifications