ಸಿಎಂ ಬದಲಾವಣೆ ಕಟೀಲ್ ಗುಂಪಿನ ಕೆಲಸ ; ಧ್ರುವನಾರಾಯಣ್
ಮೈಸೂರು, ಜನವರಿ 31; " ನಳಿನ್ ಕುಮಾರ್ ಕಟೀಲ್ ಒಬ್ಬ ಪೆದ್ದನ ರೀತಿ ಮಾತನಾಡುತ್ತಾರೆ. ಒಬ್ಬ ರಾಜ್ಯಾಧ್ಯಕ್ಷನಾಗಿ ಗಂಭೀರತೆ ಇಲ್ಲದೆ ಹೇಳಿಕೆ ಕೊಡುತ್ತಾರೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಧ್ರುವನಾರಾಯಣ್, "ಬಿಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರದ್ದೇ ಒಂದು ಗುಂಪಿದೆ. ಸಿಎಂ ಬದಲಾವಣೆ, ಯತ್ನಾಳ್ ಹೇಳಿಕೆಗಳೆಲ್ಲಾ ಆ ಗುಂಪಿನಂದಲೇ ಬರುವುದು" ಎಂದರು.
"ಯತ್ನಾಳ್ ಆ ರೀತಿ ಹೇಳಿಕೆ ನೀಡಿದರೂ ಅವರ ಮೇಲೆ ಕ್ರಮ ಯಾಕೆ ಕೈಗೊಳ್ಳುವುದಿಲ್ಲ. ಬಿಜೆಪಿಯಲ್ಲೇ ವಿರೋಧ ಪಕ್ಷದವರಂತೆ ಮಾತನಾಡುವ ವ್ಯಕ್ತಿಗಳಿದ್ದಾರೆ. ಅವರೆಲ್ಲರಿಗೂ ನಳಿನ್ ಕುಮಾರ್ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ" ಎಂದು ದೂರಿದರು.

"ಯಡಿಯೂರಪ್ಪ ಬಗ್ಗೆ ಮಾತನಾಡಿದರೂ ಕ್ರಮ ಇಲ್ಲ ಎಂದರೆ ಏನರ್ಥ?. ಇಂತಹ ಕೆಟ್ಟ ಸರ್ಕಾರವನ್ನು ಯಾವತ್ತೂ ನೋಡಿಲ್ಲ. ಸಂಪುಟದಲ್ಲಿ ಸಾಮರಸ್ಯವಿಲ್ಲ. ಮಂತ್ರಿಗಳ ಖಾತೆ ಕ್ಷಣ ಕ್ಷಣಕ್ಕೆ ಬದಲಾಗುತ್ತೆ. ಕೊಟ್ಟ ಖಾತೆಗಳಲ್ಲಿ ಪ್ರಗತಿ ತೋರಿಸಬೇಕು. ಒಳ್ಳೆ ಆಡಳಿತ ತೋರುವಲ್ಲಿ ಸಿಎಂ ವಿಫಲವಾಗಿದ್ದಾರೆ" ಎಂದು ಆರೋಪಿಸಿದರು.
"ಒಳ್ಳೆ ಆಡಳಿತ ಕೊಡುವ ಅವಕಾಶವನ್ನು ಬಿಜೆಪಿ ಕಳೆದು ಕೊಂಡಿದೆ. ಜೆಡಿಎಸ್ ಕೂಡ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದೆ. ಕಾಂಗ್ರೆಸ್ ನಿಂದ ಒಂದು ಅಂಶವೂ ಜೆಡಿಎಸ್‌ಗೆ ಅನ್ಯಾಯವಾಗಿಲ್ಲ" ಎಂದು ಸ್ಪಷ್ಟಪಡಿಸಿದರು.
"ಶಾಸಕರ ವಿಶ್ವಾಸ ಗಳಿಸಿದ್ದರೆ ಎಚ್. ಡಿ. ಕುಮಾರಸ್ವಾಮಿ ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಿದ್ದರು. ಜೆಡಿಎಸ್ ಹಾಗೂ ಬಿಜೆಪಿ ಇಬ್ಬರು ಸಹ ಗೋಲ್ಡನ್ ಅವಕಾಶ ಕಳೆದುಕೊಂಡಿದ್ದಾರೆ" ಎಂದು ಹೇಳಿದರು.












Click it and Unblock the Notifications