ಅಯೋಧ್ಯೆ ರಾಮನ ವಿಗ್ರಹಕ್ಕೆ ಶಿಲೆ ದೊರೆತ ಹಾರೋಹಳ್ಳಿಗೆ ಭಕ್ತರ ದೌಡು: ಕಲ್ಲಿದ್ದ ಜಮೀನಿನಲ್ಲಿ ವಿಶೇಷ ಪೂಜೆ
ಮೈಸೂರು, ಜನವರಿ 18: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾ(ಬಾಲರಾಮ) ಮೂರ್ತಿ ಕೆತ್ತನೆಗೆ ಬಳಸಲಾದ ಕೃಷ್ಣಶಿಲೆ ದೊರೆತ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗ್ರಾಮ ಇದೀಗ ದೇಶ ವಿದೇಶಗಳಲ್ಲಿ ಪ್ರಸಿದ್ಧಿಗೆ ಬಂದಿದ್ದು, ಕಲ್ಲು ದೊರೆತ ಸ್ಥಳವೀಗ ಪವಿತ್ರ ಸ್ಥಳವಾಗಿ, ಜನರಿಂದ ಪೂಜಿಸಲ್ಪಡುತ್ತಿರುವುದು ವಿಶೇಷವಾಗಿದೆ.
ಅಯೋಧ್ಯೆಯಲ್ಲಿನ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ರಾಮಲಲ್ಲಾ ಮೂರ್ತಿಯನ್ನು ಕೆತ್ತಿದವರು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎಂಬ ಸುದ್ದಿ ಹೊರ ಬರುತ್ತಿದ್ದಂತೆಯೇ ಮೈಸೂರಿನವರು ಮಾತ್ರವಲ್ಲದೆ, ಇಡೀ ಕನ್ನಡಿಗರು ಖುಷಿ ಪಟ್ಟಿದ್ದರು. ಅಷ್ಟೇ ಅಲ್ಲದೆ ಮೂರ್ತಿಯನ್ನು ಕೆತ್ತಲು ಬಳಸಿದ ಶಿಲೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗ್ರಾಮದಿಂದ ಕೊಂಡೊಯ್ದ ಶಿಲೆ ಎಂಬುದು ತಿಳಿದಾಗ ಅಚ್ಚರಿಯ ಮೇಲೆ ಅಚ್ಚರಿಯಾಗಿತ್ತು.

ಅಯೋಧ್ಯೆಗೆ ಹಾರೋಹಳ್ಳಿಯ ಶಿಲೆಯನ್ನು ಆಯ್ಕೆ ಮಾಡಿ ಅದನ್ನು ಕೊಂಡೊಯ್ಯುವ ಪ್ರಕ್ರಿಯೆ ನಡೆಸಿದ್ದು ಆರು ತಿಂಗಳ ಹಿಂದೆ. ಆದರೆ ಇಂತಹದೊಂದು ಮಹತ್ವದಾದ ಕಾರ್ಯ ನಡೆಯುತ್ತಿದೆ ಎಂಬ ಸಣ್ಣ ಸುಳಿವನ್ನೂ ಕೂಡ ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಎಲ್ಲವೂ ಗೌಪ್ಯವಾಗಿಯೇ ನಡೆದಿತ್ತು. ಅದು ಬಹಿರಂಗಗೊಳ್ಳುವ ಹೊತ್ತಿಗೆ ನಿಬ್ಬೆರಗಾಗುವ ಸರದಿ ಎಲ್ಲರದ್ದಾಗಿತ್ತು.
ಭಕ್ತಿಭಾವದ ಕೇಂದ್ರವಾದ ಹಾರೋಹಳ್ಳಿ
ಕೆಲವು ದಿನಗಳ ಹಿಂದೆ ರಾಮಲಲ್ಲಾ ಮೂರ್ತಿಯನ್ನು ನಿರ್ಮಿಸಿದ ಶಿಲ್ಪಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎಂಬುದು ಹೊರಗೆ ಬರುತ್ತಿದ್ದಂತೆಯೇ ಶಿಲೆಯ ಎಲ್ಲಿಯದು ಎಂಬ ವಿಷಯ ಬಹಿರಂಗವಾಗಿತ್ತು. ಆಗಲೇ ಹಾರೋಹಳ್ಳಿ ಮುನ್ನಲೆಗೆ ಬಂದಿತ್ತಲ್ಲದೆ. ಜನ ಅತ್ತ ದೌಡಾಯಿಸಲು ಆರಂಭಿಸಿದ್ದರು. ಅಷ್ಟೇ ಅಲ್ಲದೆ ಶಿಲೆ ದೊರೆತ ಜಮೀನನ್ನು ಪೂಜ್ಯ ಭಾವನೆಯಿಂದ ನೋಡಲು ಆರಂಭಿಸಿದ್ದರು.

ಇದೀಗ ಹಾರೋಹಳ್ಳಿ ವಿಶ್ವವಿಖ್ಯಾತಿಯಾಗಿದ್ದು, ಇಲ್ಲಿನ ಕೃಷ್ಣ ಶಿಲೆಗೂ ಬೇಡಿಕೆ ಬರಲಾರಂಭಿಸಿದೆ. ಜೊತೆಗೆ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಲಾದ ಕೃಷ್ಣ ಶಿಲೆ ದೊರೆತ ರೈತ ಹನುಮಯ್ಯ ಅವರ ಜಮೀನಿನತ್ತ ಜನ ಹೆಜ್ಜೆ ಹಾಕುವಂತೆ ಮಾಡಿದೆ. ಈ ನಡುವೆ ಮೈಸೂರು ಅರಮನೆ ರಾಜಪುರೋಹಿತ ಪ್ರಹ್ಲಾದ್ ರಾವ್ ಮತ್ತು ತಂಡ ಬುಧವಾರ ಸ್ಥಳಕ್ಕೆ ಆಗಮಿಸಿ ಸಂಜೆ 5.40ರ ಗೋಧೂಳಿ ಲಗ್ನದಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ನಡೆಸಿ ಯಾವುದೇ ವಿಘ್ನಗಳಿಲ್ಲದಂತೆ ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಅರಮನೆ ರಾಜಪುರೋಹಿತರಿಂದ ಪೂಜೆ
ಗಣಿ ಗುತ್ತಿಗೆದಾರ ಗುಜ್ಜೇಗೌಡನಪುರ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಹಾರೋಹಳ್ಳಿ ಹಾಗೂ ಗುಜ್ಜೇಗೌಡನಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ರಾಮ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಪೂಜಾ ಕೈಂಕರ್ಯದ ವೇಳೆ ರಾಮದೇವರ ಫೋಟೋಗೆ ವಿಶೇಷ ಅಲಂಕಾರ ಮಾಡಿ ಹೋಮ, ರಾಮ ಭಜನೆ ಸೇರಿದಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.

ಪೂಜಾ ಸಮಯದಲ್ಲಿ ಸೇರಿದ್ದ ರಾಮಭಕ್ತರು ಜೈ ಶ್ರೀರಾಮ್ ಜಯ ಘೋಷಣೆ ಕೂಗಿ ಸಂಭ್ರಮಿಸಿದರು. ಪೂಜಾ ಕಾರ್ಯಕ್ರಮ ಮುಗಿದ ಬಳಿಕ ನೇರದಿದ್ದ ರಾಮ ಭಕ್ತರಿಗೆ ಪಾನಕ, ಮಜ್ಜಿಗೆ, ಸಿಹಿ ವಿತರಿಸಲಾಯಿತು. ಈ ಸಂದರ್ಭ ಜಮೀನಿನ ಮಾಲೀಕ ರಾಮದಾಸ್ ಅವರ ಮಗ ರವಿಕುಮಾರ್, ಗಣಿ ಗುತ್ತಿಗೆದಾರ ಶ್ರೀನಿವಾಸ್, ಮುಖಂಡರಾದ ಚನ್ನಕೇಶವ, ಮಧುಕೇಶವಗೌಡ, ವೆಂಕಟೇಶ್ ಸೇರಿದಂತೆ ನೂರಾರು ರಾಮ ಭಕ್ತರು ನೆರೆದಿದ್ದರು.
ಜಮೀನಿನ ಮಾಲೀಕರ ಪುತ್ರ ಹೇಳಿದ್ದೇನು?
ಈ ವೇಳೆ ಜಮೀನಿನ ಮಾಲೀಕರಾದ ತಾಲೂಕಿನ ಹಾರೋಹಳ್ಳಿ ಗ್ರಾಮದ ಹನುಮಯ್ಯ ಅವರ ಪುತ್ರ ರಾಮದಾಸ್ ಮಾತನಾಡಿ, ಅಯೋಧ್ಯೆಯಲ್ಲಿ ಇದೇ ಜ.22 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ಮೂರ್ತಿ ನಮ್ಮ ಜಮೀನಿನಲ್ಲಿ ದೊರೆತ ಶಿಲೆಯಿಂದ ಕೆತ್ತನೆಯಾಗಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಜೊತೆಗೆ ರಾಮಲಲ್ಲಾ ಮೂರ್ತಿ ಕೆತ್ತನೆಗೆ ತಮ್ಮ ಜಮೀನಿನ ಶಿಲೆಯನ್ನು ಹೇಗೆ ಆಯ್ಕೆ ಮಾಡಲಾಯಿತು ಎಂಬುದರ ಬಗ್ಗೆ ಮಾಹಿತಿ ನೀಡಿದ ಅವರು, ತಮ್ಮ ಜಮೀನಿನಲ್ಲಿ ವ್ಯವಸಾಯಕ್ಕೆ ಕಲ್ಲು ಅಡ್ಡಲಾಗಿತ್ತು. ಹೀಗಾಗಿ ಅದನ್ನು ಜೆಸಿಬಿ ಯಂತ್ರದಿಂದ ಹೊರ ತೆಗೆಸಿದ್ದೆವು. ಮೊದಲಿಗೆ ಕೊಪ್ಪಳದ ಶಿಲ್ಪಿ ಪ್ರಕಾಶ್ ಅವರು ಬಂದು ಅಂಜನೇಯ ಮೂರ್ತಿ ಕೆತ್ತನೆಗೆ ಪರಿಶೀಲಿಸಿ ತಾವು ಕೆತ್ತನೆ ಮಾಡುವ ಅಂಜನೇಯ ಮೂರ್ತಿಗೆ ಉದ್ದ ಅಗಲ ಸಾಲದು ಎಂದು ಹೇಳಿ ಸ್ಥಳದಲ್ಲೇ ಒಂದು ಸಣ್ಣ ಗಾತ್ರದ ಆಂಜನೇಯ ಮೂರ್ತಿ ಕೆತ್ತನೆ ಮಾಡಿ ತೆರಳಿದ್ದರು.
ಗೌಪ್ಯವಾಗಿಯೇ ನಡೆದಿದ್ದ ಪ್ರಕ್ರಿಯೆ
ಇದಾದ ನಂತರ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲು ರಾಮಲಲ್ಲಾ ಮೂರ್ತಿಯನ್ನು ಕೆತ್ತಲು ಸೂಕ್ತ ಶಿಲೆಗಾಗಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಹುಡುಕಾಟ ನಡೆಸುತ್ತಿದ್ದರು. ಈ ವಿಷಯ ತಿಳಿದ ಇನ್ನೊಬ್ಬ ಶಿಲ್ಪಿ ಸುರೇಂದ್ರ ಅವರಿಗೆ ತಿಳಿದ ಕಾರಣ ಅವರು ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಶಿಲೆ ತೋರಿಸಿದ್ದರು. ಅದನ್ನು ನೋಡಿ ಅವರು ಒಪ್ಪಿಕೊಂಡಿದ್ದರು. ಆ ನಂತರ ಅಯೋಧ್ಯೆ ಟ್ರಸ್ಟ್‌ನ ಗರುಗಳ ಗಮನಕ್ಕೆ ತರಲಾಗಿ ಅವರು ಅಲ್ಲಿಂದ ಹಾರೋಹಳ್ಳಿಯ ತಮ್ಮ ಜಮೀನಿಗೆ ಬಂದು ಶಿಲೆಯನ್ನು ಪರಿಶೀಲಿಸಿ ಇದು ಅಪರೂಪದ ಕೃಷ್ಣ ಶಿಲೆ ಎಂದು ತಿಳಿದು ಸಂತಸ ಪಟ್ಟಿದ್ದರು.
ಆ ನಂತರ ಅದನ್ನು ಅಯೋಧ್ಯೆಗೆ ಕೊಂಡೊಯ್ಯಲಾಯಿತು. ಅದೇ ಶಿಲೆಯಿಂದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ (ಬಾಲರಾಮ) ಮೂರ್ತಿಯೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದ್ದು, ಶ್ರೀರಾಮನೇ ನಮ್ಮ ಜಮೀನಿನಲ್ಲಿದ್ದ ಎನ್ನುವ ಭಾವನೆ ನಮ್ಮ ಕುಟುಂಬ ಸೇರಿದಂತೆ ಸುತ್ತ ಮುತ್ತಲ ಗ್ರಾಮದ ಜನರಲ್ಲಿ ಮೂಡಿದ್ದು ಪ್ರತಿನಿತ್ಯ ನೂರಾರು ಜನರು ಬಂದು ಶಿಲೆ ಸಿಕ್ಕ ಸ್ಥಳಕ್ಕೆ ಆಗಮಿಸಿ ನಮಸ್ಕಾರ ಮಾಡಿ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಜನರಿಂದ ಭಕ್ತಿ ಭಾವದ ಪ್ರಾರ್ಥನೆ
ಸದ್ಯ ಹಾರೋಹಳ್ಳಿ ಗ್ರಾಮವು ರಾಮಭಕ್ತರನ್ನು ಸೆಳೆಯುತ್ತಿದ್ದು, ಅಯೋಧ್ಯೆಗೆ ಹೋಗಲು ಸಾಧ್ಯವಾಗದ ಜನರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಇಲ್ಲಿ ರಾಮನ ಶಕ್ತಿ ಅಡಗಿದ್ದು ಅದರಿಂದಲೇ ಮೂರ್ತಿ ಆಯ್ಕೆಯಾಗಿದೆ ನಂಬಿಕೆಯೂ ಜನರಲ್ಲಿದೆ. ಹೀಗಾಗಿಯೇ ಜನ ಕುತೂಹಲದಿಂದ ಬರುತ್ತಿದ್ದು, ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
-
ಹನುಮ ಜಯಂತಿ ಮುನ್ನವೇ ಅಯೋಧ್ಯೆಗೆ ಗೌತಮ್ ಅದಾನಿ ಭೇಟಿ: ಪ್ರಾಚೀನ ಗುರುಕುಲಕ್ಕೆ AI ಲ್ಯಾಬ್ ಘೋಷಣೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications