ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ವಿಶೇಷ; ಮೈಸೂರು ದಸರಾ ಗಜಪಡೆಯ ದಿನಚರಿ ಹೇಗಿದೆ ಗೊತ್ತಾ?

By ಬಿ. ಎಂ. ಲವ ಕುಮಾರ್
|
Google Oneindia Kannada News

ಮೈಸೂರು, ಆಗಸ್ಟ್ 17; ಗಜಪಡೆ ಅರಮನೆ ಪ್ರವೇಶಿಸಿದ ಬಳಿಕ ಐತಿಹಾಸಿಕ ಮೈಸೂರು ದಸರಾಕ್ಕೆ ಕಳೆ ಬಂದಿದೆ. ಈಗಾಗಲೇ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಜಂಬೂಸವಾರಿಗೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಹಾಗಾದರೆ ಈ ಗಜಪಡೆಗಳ ದಿನಚರಿ ಹೇಗಿರಬಹುದು? ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.

ಅಕ್ಟೋಬರ್ 5ರಂದು ದಸರಾ ಜಂಬೂಸವಾರಿ ನಡೆಯಲಿದ್ದು, ಅದನ್ನು ಯಶಸ್ವಿಯಾಗಿ ನಡೆಸಬೇಕಾದರೆ ಈಗಿನಿಂದಲೇ ತಯಾರಿ ಅಗತ್ಯವಾಗಿದೆ. ಏಕೆಂದರೆ ಲಕ್ಷಾಂತರ ಮಂದಿ ಆಗಮಿಸುವ ದಸರಾ ಮೆರವಣಿಗೆಯ ಕೇಂದ್ರ ಬಿಂದು ಜಂಬೂಸವಾರಿ.

ಮೈಸೂರು ದಸರಾ ಸಂಭ್ರಮ: ತೂಕ ಪರೀಕ್ಷೆಯಲ್ಲಿ ಯಾವ ಆನೆ ಬಲಶಾಲಿ?ಮೈಸೂರು ದಸರಾ ಸಂಭ್ರಮ: ತೂಕ ಪರೀಕ್ಷೆಯಲ್ಲಿ ಯಾವ ಆನೆ ಬಲಶಾಲಿ?

ಆನೆ ಚಿನ್ನದ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುವುದು ಅದರಲ್ಲೂ ಶಿಸ್ತುಬದ್ಧವಾಗಿ ಜನಜಂಗುಳಿಗೆ ಜಗ್ಗದೇ, ಸದ್ದಿಗೆ ಬೆದರದೇ ಮುನ್ನೆಡೆಯುವುದು ಸಾಮಾನ್ಯದ ಮಾತಲ್ಲ. ಅದಕ್ಕಾಗಿ ದಸರಾಗೆ ಕೆಲವು ತಿಂಗಳು ಬಾಕಿ ಇರವಾಗಲೇ ತಯಾರಿ ಆರಂಭವಾಗುತ್ತದೆ.

Mysuru Dasara 2022: ದಸರಾ ಮಹೋತ್ಸವ: ಅರಮನೆ ಪ್ರವೇಶಿಸಿದ ಗಜಪಡೆ Mysuru Dasara 2022: ದಸರಾ ಮಹೋತ್ಸವ: ಅರಮನೆ ಪ್ರವೇಶಿಸಿದ ಗಜಪಡೆ

2022ರ ಮೈಸೂರು ದಸರಾ ಸಿದ್ಧತೆ ಆರಂಭಗೊಂಡಿದೆ. ಅಂಬಾರಿ ಹೊರಲಿರುವ 'ಅಭಿಮನ್ಯು' ನೇತೃತ್ವದಲ್ಲಿ ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಅರ್ಜುನ, ಧನಂಜಯ, ಕಾವೇರಿ, ಚೈತ್ರಾ, ಲಕ್ಷ್ಮಿ ಆನೆಗಳು ಮೈಸೂರು ಅರಮನೆ ಪ್ರವೇಶಿಸಿದ್ದು, ತಾಲೀಮು ಆರಂಭಿಸಿವೆ.

 ದಸರಾ ಮಹೋತ್ಸವಕ್ಕೆ ತಯಾರಿ: ಮಾವುತರು, ಕಾವಾಡಿಗರಿಗೆ 42 ಶೆಡ್ ನಿರ್ಮಾಣ ದಸರಾ ಮಹೋತ್ಸವಕ್ಕೆ ತಯಾರಿ: ಮಾವುತರು, ಕಾವಾಡಿಗರಿಗೆ 42 ಶೆಡ್ ನಿರ್ಮಾಣ

ಜಂಬೂ ಸವಾರಿಗೆ ಈಗಿನಿಂದಲೇ ಸಿದ್ಧತೆ

ಜಂಬೂ ಸವಾರಿಗೆ ಈಗಿನಿಂದಲೇ ಸಿದ್ಧತೆ

ಒಂದು ದಿನದ ಜಂಬೂಸವಾರಿ ಯಶಸ್ವಿಯಾಗಿ ನಡೆಯಬೇಕೆಂದರೆ ಅದರ ಹಿಂದೆ ಹಲವರ ಪರಿಶ್ರಮ ಮತ್ತು ಗಜಪಡೆಯ ಕಠಿಣ ತಾಲೀಮು ಇದ್ದೇ ಇರುತ್ತದೆ. ಹೀಗಾಗಿಯೇ ಮೊದಲ ತಂಡದಲ್ಲಿ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಒಂಬತ್ತು ಆನೆಗಳನ್ನು ಸರ್ವ ರೀತಿಯಲ್ಲಿಯೂ ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಸದ್ಯ ಗಜಪಡೆಗಳಿಗೆ ಒಣ ತಾಲೀಮು ಆರಂಭವಾಗಿದೆ. ಬೆಳಗ್ಗೆ ಮತ್ತು ಸಂಜೆ ಆನೆಗಳು ಅರಮನೆ ಆವರಣದಿಂದ ಬನ್ನಿಮಂಟಪದ ತನಕ ಜಂಬೂಸವಾರಿ ತೆರಳುವ ಮಾರ್ಗದಲ್ಲಿ ಸುಮಾರು ಐದೂವರೆ ಕಿ. ಮೀ. ತೆರಳಿ ಹಿಂತಿರುಗಲಿವೆ. ಯಾವುದೇ ಭಾರ ಹೊರದೆ ಒಂದರ ಹಿಂದೆ ಒಂದರಂತೆ ಸಾಗಲಿವೆ. ಇದನ್ನು ಒಣ ತಾಲೀಮು ಎಂದು ಕರೆಯಲಾಗುತ್ತದೆ. ಇದು ಬೇರೆ ಬೇರೆ ಶಿಬಿರಗಳಿಂದ ಆಗಮಿಸಿರುವ ಆನೆಗಳಿಗೆ ಪರಸ್ಪರ ಪರಿಚಯ ಮಾಡಿಕೊಡುವ ಮತ್ತು ಮಾರ್ಗವನ್ನು ತಿಳಿಸುವ ತಾಲೀಮು ಆಗಿದೆ.

ದಿನಕ್ಕೆರಡು ಬಾರಿ ಪೌಷ್ಠಿಕ ಆಹಾರ

ದಿನಕ್ಕೆರಡು ಬಾರಿ ಪೌಷ್ಠಿಕ ಆಹಾರ

ಬೇರೆ, ಬೇರೆ ಆನೆಶಿಬಿರಗಳಿಂದ ಆಗಮಿಸಿರುವ ಆನೆಗಳನ್ನು ದಷ್ಟಪುಷ್ಠಗೊಳಿಸಿ ಭಾರ ಹೊರಲು ಅಣಿಗೊಳಿಸುವ ಕೆಲಸವೂ ಈಗಿನಿಂದಲೇ ಶುರುವಾಗಿದೆ. ಸದ್ಯ ಗಜಪಡೆಯ ದಿನಚರಿ ಮತ್ತು ಅವುಗಳ ಆಹಾರ ವ್ಯವಸ್ಥೆ ಹೇಗಿರಲಿದೆ? ಎಂಬುದನ್ನು ನೋಡಿದ್ದೇ ಆದರೆ ಪ್ರತಿಯೊಂದರಲ್ಲೂ ಶಿಸ್ತು ಮತ್ತು ಕಾಳಜಿ ಎದ್ದು ಕಾಣಿಸುತ್ತದೆ.

ಪ್ರತಿಯೊಂದು ಆನೆಗೂ ಪೌಷ್ಠಿಕ ಆಹಾರ ನೀಡಿ ಅವುಗಳನ್ನು ದೈಹಿಕವಾಗಿ ಸಮರ್ಥಗೊಳಿಸಬೇಕಾಗುತ್ತದೆ. ಹೀಗಾಗಿ ಅವುಗಳ ಆಹಾರದ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರತಿದಿನ ಮಾಮೂಲಿ ಆಹಾರದೊಂದಿಗೆ ಬೆಳಗ್ಗೆ ಮತ್ತು ಸಂಜೆ ಹೀಗೆ ಎರಡು ಬಾರಿ ಪೌಷ್ಠಿಕ ಆಹಾರ ನೀಡಲಾಗುತ್ತದೆ.

ಮುಂಜಾನೆಯಿಂದಲೇ ಕಾರ್ಯ ಆರಂಭ

ಮುಂಜಾನೆಯಿಂದಲೇ ಕಾರ್ಯ ಆರಂಭ

ಸಾಕಾನೆಗಳೊಂದಿಗೆ ಬೀಡು ಬಿಟ್ಟು ಅವುಗಳ ಪಾಲನೆ ಫೋಷಣೆ ಮಾಡುತ್ತಿರುವ ಮಾವುತ ಮತ್ತು ಕಾವಾಡಿಗಳು ಬೆಳಿಗ್ಗೆ 5 ಗಂಟೆಯಿಂದಲೇ ತಮ್ಮ ದಿನಚರಿಯನ್ನು ಆರಂಭಿಸುತ್ತಾರೆ. ಪ್ರತಿದಿನ ಮುಂಜಾನೆಯೇ ಆನೆಗಳಿಗೆ 5.30ಕ್ಕೆ ಮತ್ತು ಸಂಜೆ 4 ಗಂಟೆಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಈ ಆಹಾರವನ್ನು ರಾತ್ರಿಯೇ ಬೇಯಿಸಿ ಸಿದ್ದ ಮಾಡಿ ಇಡಲಾಗುತ್ತದೆ. ಪ್ರತಿ ಆನೆಗೂ 15ರಿಂದ 20 ಕೆಜಿ ಪೌಷ್ಠಿಕ ಆಹಾರವನ್ನು ನೀಡಿದರೆ ಅಂಬಾರಿ ಹೊರುವ ಅಭಿಮನ್ಯುಗೆ ಮಾತ್ರ 25 ರಿಂದ 30 ಕೆಜಿಯಷ್ಟು ನೀಡಲಾಗುತ್ತದೆ. ಈ ಪೌಷ್ಠಿಕ ಆಹಾರವು ಗಜಪಡೆಯಲ್ಲಿ ಶಕ್ತಿ ತುಂಬಿ ಮೈಕಟ್ಟನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಇಷ್ಟಕ್ಕೂ ಪೌಷ್ಠಿಕ ಆಹಾರ ಪದಾರ್ಥ ಎಂದರೇನು?, ಅದು ಹೇಗಿರುತ್ತದೆ? ಎಂಬುದನ್ನು ನೋಡುತ್ತಾ ಹೋದರೆ. ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಲಕ್ಕಿ, ಈರುಳ್ಳಿ ಬೇಯಿಸಿ ಮಿಶ್ರಣ ಮಾಡಿ, ಬೀಟ್ರೋಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳನ್ನು ಸೇರಿಸಿ ಅದಕ್ಕೊಂದಿಷ್ಟು ಬೆಣ್ಣೆ ಹಾಕಿ ತಯಾರು ಮಾಡಲಾಗುತ್ತದೆ.

ವಿಶೇಷ ಆಹಾರದ ತಯಾರಿ ಹೇಗಿದೆ?

ವಿಶೇಷ ಆಹಾರದ ತಯಾರಿ ಹೇಗಿದೆ?

ಪ್ರತಿ ದಿನ ಬೆಳಗ್ಗೆ 10.30ಕ್ಕೆ ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಅಡುಗೆ ಮನೆಯಲ್ಲಿ ಆನೆಗಳಿಗೆ ವಿಶೇಷ ಆಹಾರಗಳ ತಯಾರಿ ನಡೆಯುತ್ತದೆ. ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಉದ್ದಿನ ಕಾಳು, ಗೋಧಿ ಬೇಯಿಸಲಾಗುತ್ತದೆ. ಬಳಿಕ ಆ ಪಾತ್ರೆಗೆ ಹಸಿರು ಕಾಳು, ಕುಸುಲಕ್ಕಿ ಹಾಗೂ ಈರುಳ್ಳಿಯನ್ನು ಬೆರೆಸಿ ಬೇಯಿಸಲಾಗುತ್ತದೆ. ಬೇಯಿಸಿದ ಧಾನ್ಯಗಳನ್ನು ಟ್ರೇಗೆ ಹಾಕಿ ಮುದ್ದೆಯಾಗಿ ಕಟ್ಟಿ ಸಂಜೆ ಆನೆಗಳು ತಾಲೀಮಿಗೆ ಮೊದಲು ನೀಡಲಾಗುತ್ತದೆ.

ಸಂಜೆ ತಾಲೀಮು ಮುಗಿಸಿ ಬಂದ ನಂತರ ರಾತ್ರಿ 7ಕ್ಕೆ ಮತ್ತೊಮ್ಮೆ ಆಹಾರ ಪದಾರ್ಥಗಳನ್ನು ಬೇಯಿಸಲಾಗುತ್ತದೆ. ರಾತ್ರಿ 9 ಗಂಟೆ ನಂತರ ಬೇಯಿಸಿದ ಆಹಾರ ಪದಾರ್ಥವನ್ನು ದಾಸ್ತಾನು ಕೊಠಡಿಯಲ್ಲಿಟ್ಟು ಬೀಗ ಹಾಕಿ ಸುರಕ್ಷಿತವಾಗಿಡಲಾಗುತ್ತದೆ. ಆ ಆಹಾರವನ್ನು ಮುಂಜಾನೆ 5ಕ್ಕೆ ಪಾತ್ರೆಯಿಂದ ತೆಗೆದು ಮುದ್ದೆ ಕಟ್ಟಿ ಬೆಳಿಗ್ಗೆ 5.30 ರಿಂದಲೇ ಆನೆಗಳಿಗೆ ನೀಡುವ ಕೆಲಸ ಆರಂಭವಾಗುತ್ತದೆ. ಸುಮಾರು ಒಂದು ಗಂಟೆಯೊಳಗೆ ಆಹಾರ ನೀಡುವ ಕಾರ್ಯ ಮುಗಿಯುತ್ತದೆ. ಆ ನಂತರ ತಾಲೀಮಿಗೆ ಆನೆಗಳನ್ನು ಕರೆದೊಯ್ಯಲಾಗುತ್ತದೆ.

ಮಧ್ಯಾಹ್ನದ ಆಹಾರವಾಗಿ ಕುಸುರೆ

ಮಧ್ಯಾಹ್ನದ ಆಹಾರವಾಗಿ ಕುಸುರೆ

ಇನ್ನು ಮಧ್ಯಾಹ್ನದ ಆಹಾರ ಹೇಗಿರುತ್ತದೆ ಎಂದರೆ ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿ ಇಂಡಿ, ಉಪ್ಪನ್ನು ಮಿಶ್ರಣ ಮಾಡಿದ ಆಹಾರ ಪದಾರ್ಥವನ್ನು ಭತ್ತದ ಹುಲ್ಲಿನಲ್ಲಿ ಗಂಟು ಕಟ್ಟಲಾಗುತ್ತದೆ. ಇದನ್ನು ಕುಸುರೆ ಎಂದು ಕರೆಯಲಾಗುತ್ತದೆ. ಈ ಕುಸುರೆಯನ್ನು ಮಧ್ಯಾಹ್ನ ಆನೆಗಳಿಗೆ ನೀಡಲಾಗುತ್ತಿದೆ. ಇದರ ಜತೆಗೆ ಪ್ರತಿ ದಿನ ಮೂರು ಬಾರಿ ನೀರು ನೀಡಲಾಗುತ್ತದೆ. ಒಂದು ಆನೆ ಪ್ರತಿದಿನ ಸುಮಾರು ಇನ್ನೂರೈವತ್ತರಿಂದ ಮುನ್ನೂರು ಲೀಟರ್ ನೀರು ಕುಡಿಯುತ್ತದೆ. ಹೀಗಾಗಿ ಮುಂಜಾನೆ ಪೌಷ್ಟಿಕ ಆಹಾರ ಸೇವಿಸಿದ ನಂತರ ಒಮ್ಮೆ, ಮಧ್ಯಾಹ್ನ ಹಾಗೂ ಸಂಜೆ ತಾಲೀಮಿಗೆ ಹೋಗುವ ಮುನ್ನ ನೀರನ್ನು ಕುಡಿಸಲಾಗುತ್ತದೆ.

ಸದ್ಯ 14 ಆನೆಗಳ ಪೈಕಿ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಭೀಮ, ಮಹೇಂದ್ರ, ಕಾವೇರಿ, ಚೈತ್ರಾ, ಲಕ್ಷ್ಮೀ ಸೇರಿ ಒಂಬತ್ತು ಆನೆಗಳಷ್ಟೆ ಅರಮನೆ ಆವರಣದಲ್ಲಿದ್ದು ಇನ್ನು ಎರಡನೇ ತಂಡದಲ್ಲಿ ವಿಕ್ರಮ, ಗೋಪಿ, ಶ್ರೀರಾಮ, ಪಾರ್ಥಸಾರಥಿ ಹಾಗೂ ವಿಜಯ ಆನೆಗಳು ಆಗಮಿಸಲಿವೆ. ಆ ನಂತರ ಎಲ್ಲ ಆನೆಗಳು ಸೇರಿ ಜಂಬೂಸವಾರಿಗೆ ತಾಲೀಮು ನಡೆಸಲಿವೆ.

ಗಜಪಡೆಗೆ ಹಲವು ರೀತಿಯ ತಾಲೀಮು

ಗಜಪಡೆಗೆ ಹಲವು ರೀತಿಯ ತಾಲೀಮು

ಈಗ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ನಡೆಯುತ್ತಿರುವ ಒಣ ತಾಲೀಮು ಮುಂದೆ ಹಂತ ಹಂತವಾಗಿ ಬದಲಾಗುತ್ತಾ ಹೋಗಲಿದೆ. ಆ ನಂತರ ಭಾರ ಹೊರುವ ತಾಲೀಮು ಆರಂಭವಾಗಲಿದೆ. ಬಳಿಕ ಮರದ ಅಂಬಾರಿ ಹೊರುವ ತಾಲೀಮು ನಡೆಯಲಿದೆ. ಇದರ ನಡುವೆ ಸಿಡಿಮದ್ದಿಗೆ ಬೆದರದಂತೆ ತಯಾರುಗೊಳಿಸುವ ಸಿಡಿಮದ್ದಿನ ತಾಲೀಮು ಕೂಡ ನಡೆಯಲಿದೆ.

ಮುಂದಿನ ಭಾರಹೊರುವ ತಾಲೀಮಿಗೆ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ ತಯಾರಾಗಲಿದ್ದಾರೆ. ಜಂಬೂಸವಾರಿಯಲ್ಲಿ ಗಂಡಾನೆಗಳಿಗೆ ಕಾವೇರಿ, ಚೈತ್ರಾ, ಲಕ್ಷ್ಮೀ, ವಿಜಯ ಸಾಥ್ ನೀಡಲಿವೆ. ಒಟ್ಟಾರೆ ಎರಡು ವರ್ಷಗಳ ಕಾಲ ಕಳೆಗುಂದಿದ್ದ ಮೈಸೂರಿನಲ್ಲಿ ಗಜಪಡೆಗಳು ದಿನಕ್ಕೆರಡು ಬಾರಿ ತಾಲೀಮು ನಡೆಸುತ್ತಿರುವುದರಿಂದ ನಿಧಾನವಾಗಿ ದಸರಾ ಕಳೆ ಬರಲಾರಂಭಿಸಿದೆ.

Recommended Video

Independence Day ಪ್ರಯುಕ್ತ ವಿದೇಶಿ ಕ್ರಿಕೆಟಿಗರ ವಿಶೇಷ ಉಡುಗೊರೆ | *Cricket | Oneindia Kannada

English summary
Mysuru dasara 2022; Dasara elephants begin training and rehearsals for the dasara jamboo savari procession. Here are the details of the elephants daily routine. This year dasara celebrations to be held from September 26 to October 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X