ನಾಡ ಹಬ್ಬ ದಸರಾ ನಾಂದಿ ಜತೆ ಸಿಂಹಾಸನ ವೀಕ್ಷಿಸಿ
ಮೈಸೂರು, ಸೆ.30: ನಾಡ ಹಬ್ಬ ದಸರಾ ಮಹೋತ್ಸವಕ್ಕೆ ನಾಂದಿ ಹಾಡುತ್ತಿದ್ದಂತೆ ಒಡೆಯರ್ ಮನೆತನದ ರತ್ನ ಖಚಿತ ಸಿಂಹಾಸನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಅಕ್ಟೋಬರ್ 5 ರಿಂದ ಪ್ರವಾಸಿಗರು ಸಿಂಹಾಸನವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ರತ್ನ ಖಚಿತ ಸಿಂಹಾಸನವನ್ನು ಕನ್ಯಾ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಭಾನುವಾರ ಜೋಡಿಸಲಾಯಿತು.
ಅ.5 ರಿಂದ 15ರವರೆಗೆ ಸಾರ್ವಜನಿಕರಿಗೆ ಸಿಂಹಾಸನ ನೋಡುವ ಭಾಗ್ಯ ಲಭಿಸಲಿದೆ. ಅರಮನೆಯ ಭದ್ರತಾ ಕೊಠಡಿ ಬಾಗಿಲನ್ನು ಜಿಲ್ಲಾಧಿಕಾರಿ ಸಿ.ಶಿಖಾ, ನಗರ ಪೊಲೀಸ್ ಆಯುಕ್ತ ಎಂ.ಎ.ಸಲೀಮ್ ಸಮ್ಮುಖದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ತೆರೆದರು. ಈ ಸಂದರ್ಭದಲ್ಲಿ ಮೈಸೂರು ಮಹರಾಜ ಶ್ರೀಕಂಠದತ್ತ ಒಡೆಯರ್ ಹಾಗೂ ಅವರ ಪತ್ನಿ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರು ಉಪಸ್ಥಿತರಿದ್ದರು.
ತಲೆ ತಲಾಂತರಗಳಿಂದ ಜೋಡಣೆ ಕೆಲಸ ಮಾಡಿಕೊಂಡು ಬಂದಿರುವ ಗೆಜ್ಜಗಳ್ಳಿ ಗ್ರಾಮದ ಆಯ್ದ ಕುಟುಂಬದ ಸದಸ್ಯರಿಂದ ಒಂಬತ್ತು ಭಾಗಗಳ ಜೋಡಣೆ ಸಾಂಪ್ರದಾಯಿಕವಾಗಿ ನೆರವೇರಿತು. ನವರಾತ್ರಿ ವೇಳೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಡೆಸುವ ಖಾಸಗಿ ದರ್ಬಾರ್ ಸಲುವಾಗಿ ಸಿಂಹಾಸನವನ್ನು ಜೋಡಿಸಲಾಗುತ್ತದೆ.
ಅ. 5ರ ಬೆಳಗ್ಗೆ 6.12ಕ್ಕೆ ಬೆಳ್ಳಿಯ ಎರಡು ಸಿಂಹಗಳಿರುವ ಸಿಂಹವನ್ನು ಜೋಡಿಸುವ ಕೆಲಸ ಶಾಸ್ತ್ರೋಕ್ತವಾಗಿ ನಡೆದು, ವಿಶೇಷ ಪೂಜೆ ಬಳಿಕ ಶುಭಲಗ್ನದಲ್ಲಿ ಮಹಾರಾಜರು ಸಿಂಹಾಸನದ ಮೇಲೆ ಆರೋಹಣ ಮಾಡಿ ಖಾಸಗಿ ದರ್ಬಾರು ನಡೆಸುತ್ತಾರೆ.

ರತ್ನಖಚಿತ ಸಿಂಹಾಸನ: ಅರಮನೆಯ ದರ್ಬಾರ್ ಹಾಲ್ ನಲ್ಲಿರುವ ರತ್ನ ಖಚಿತ ಸಿಂಹಾಸನವನ್ನು ದಸರಾ ಸಂದರ್ಭದಲ್ಲಿ ಮಾತ್ರ ಜೋಡಿಸಲಾಗುತ್ತದೆ. ಮೈಸೂರಿಗೆ ಸಮೀಪದ ಗೆಜ್ಜಗಳ್ಳಿ ಗ್ರಾಮದಿಂದ ಆಯ್ದ ಕೆಲವರನ್ನು ಮಾತ್ರ ಕರೆತರಲಾಗುತ್ತದೆ. ಸಿಂಹಾಸನ ಪಾಂಡವರ ಕಾಲದೆನ್ನಲಾಗಿದ್ದು, ಆ ಕಾಲದಲ್ಲಿ ಕಂಪುಲ ರಾಜನು ಇದನ್ನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದನು ಎನ್ನಲಾಗಿದೆ.
1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಟಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂದು ಅದರಂತೆ ಹೊರತೆಗೆದು 150 ವರ್ಷಗಳ ಕಾಲ ಆನೆಗೊಂದಿಯಲ್ಲಿ ಅಲಂಕರಿಸಿದರೆಂದೂ ಬಳಿಕ ವಿಜಯನಗರದ ಅವನತಿಯ ವೇಳೆಗೆ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಭಾರಿಯ ಅರಮನೆಗೆ ಸಾಗಿಸಲಾಯಿತೆಂದು ಹೇಳಲಾಗಿದೆ.
ಆ ಬಳಿಕ 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗರಾಜುಲುರನ್ನು ತಲಕಾಡಿಗೆ ಓಡಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. 1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಲಾಯಿತು.
ಸಿಂಹಾಸನವು ಚಿನ್ನದ ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದೆ. ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನು ಹತ್ತುವ ಎರಡು ಕಡೆಗಳಲ್ಲೂ ಸ್ತ್ರೀಪುತ್ಥಳಿಯನ್ನು ನಿರ್ಮಿಸಲಾಗಿದೆ.
ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಅಲ್ಲದೆ ಸಿಂಹಾಸನಕ್ಕೆ ಕೂರ್ಮರೂಪದ ಆಸನವನ್ನು ಒದಗಿಸಲಾಗಿದೆ. ಉಭಯ ಪಾಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿ ಲತೆಗಳನ್ನು ಕೆತ್ತಲಾಗಿದೆ.
ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ.
ನಾಗದೇವತೆಗಳ ಚಿತ್ರಗಳು, ಸ್ವಾಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕಗಳಿವೆ.











Click it and Unblock the Notifications