ಮೈಸೂರು ಕಲುಷಿತ ನೀರು ಸೇವನೆ ಪ್ರಕರಣ: ಐವರಿಗೆ ಕಾಲರಾ ದೃಢ
ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಐವರಿಗೆ ಕಾಲರಾ ಇರುವುದಾಗಿ ವೈದ್ಯಕೀಯ ವರದಿ ದೃಢಪಡಿಸಿದೆ. ಇದರಿಂದ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಚಿಕಿತ್ಸಾ ಕಾರ್ಯಾಚರಣೆ ಶುರು ಮಾಡಿದೆ.
ಕೆ.ಸಾಲುಂಡಿ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿ ವರದಿ ಆಧಾರದ ಮೇಲೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಜೊತೆಗೆ ಕಲುಷಿತ ನೀರು ಸೇವಿಸಿ ಮೃತಪಟ್ಟ ಕೆ.ಸಾಲುಂಡಿ ಗ್ರಾಮದ ನಿವಾಸಿ ಕನಕರಾಜು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ಕಲುಷಿತ ನೀರು ಸೇವಿಸಿ ಕನಕರಾಜು ಎಂಬ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆರಂಭದಲ್ಲಿಯೇ ಗ್ರಾಮದ 10 ಮಂದಿಯ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅವರಲ್ಲಿ ಐವರಲ್ಲಿ ಕಾಲರಾ ಬ್ಯಾಕ್ಟೇರಿಯಾ ಕಾಣಿಸಿಕೊಂಡಿರುವುದಾಗಿ ವರದಿ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬೋರ್‍ವೆಲ್ ಸೇರಿದ ಚರಂಡಿ ನೀರು
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ವಾಡಿಕೆಯಂತೆ 4 ಮಿ.ಮೀ ಮಳೆಯಾಗುತ್ತಿತ್ತು. ಆದರೆ, ಮೊನ್ನೆ 40 ಮಿ.ಮೀ ಮಳೆ ಸುರಿದ ಕಾರಣ ಚರಂಡಿ ನೀರು ಬೋರ್‌ವೆಲ್‌ಗೆ ಸೇರಿ ಘಟನೆ ಸಂಭವಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಿಡಿಒಗಳಿಗೆ ನೀರಿನ ಶುದ್ಧೀಕರಣದ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಗ್ರಾಮದಲ್ಲಿ 120 ಜನರ ಸ್ಯಾಂಪಲ್ ಪಡೆದು ಪರೀಕ್ಷಿಸಲಾಗಿದೆ ಎಂದರು.
ನಿರಂತರವಾಗಿ ಭೇದಿಯಾಗಿ ನಿರ್ಜಲೀಕರಣವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಎಲ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಮನೆಗಳಲ್ಲಿ ಕಾಯಿಸಿ ಆರಿಸಿದ ನೀರನ್ನು ಸೇವಿಸಿ. ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡದ ಕಡೆಗಳಲ್ಲಿ ತಿಂಡಿ ತಿನ್ನಬೇಡಿ ಎಂದು ಸಲಹೆ ನೀಡಿದರು.












Click it and Unblock the Notifications