ಧ್ರುವನಾರಾಯಣ ಅವರ ಹಿರಿಯ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡಿ: ಎಚ್.ವಿಶ್ವನಾಥ್ ಆಗ್ರಹ
ನಂಜನಗೂಡು ಕ್ಷೇತ್ರದಲ್ಲಿ ಆರ್.ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಎಚ್.ವಿಶ್ವನಾಥ್ ಮೈಸೂರಿನಲ್ಲಿ ಆಗ್ರಹಿಸಿದ್ದಾರೆ.
ಮೈಸೂರು, ಮಾರ್ಚ್, 15: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಆರ್.ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೈಸೂರಿನಲ್ಲಿ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಧ್ರುವನಾರಾಯಣ ಅವರು ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ತುಂಬಾ ಶ್ರಮಿಸಿದ್ದಾರೆ. ಅವರ ಸಾವಿನ ಸಮಯದಲ್ಲಿ ಅವರ ಮೇಲೆ ಜನರಿಗೆ ಎಷ್ಟು ಪ್ರೀತಿ, ಅಭಿಮಾನವಿತ್ತು ಎಂಬುದು ವ್ಯಕ್ತವಾಗಿದೆ. ಅವರ ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನಂಜನಗೂಡು ಕ್ಷೇತ್ರದ ಟಿಕೆಟ್ ಅನ್ನು ಧ್ರುವನಾರಾಯಣ್ ಪುತ್ರ ದರ್ಶನ್‌ಗೆ ನೀಡಬೇಕು. ಆ ಮೂಲಕ ಧ್ರುವನಾರಾಯಣ್ ಕುಟುಂಬದ ಜೊತೆ ಕಾಂಗ್ರೆಸ್ ಪಕ್ಷ ಇದೆ ಎಂಬ ಸಂದೇಶವನ್ನು ರವಾನಿಸಬೇಕೆಂದರು.

ದರ್ಶನ್‌ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು
ಪ್ರಸ್ತುತ ರಾಜಕಾರಣದಲ್ಲಿ ರಿಯಲ್ ಎಸ್ಟೇಟ್‌ನವರು, ರೌಡಿಶೀಟರ್ ಹಿನ್ನೆಲೆಯುಳ್ಳವರು ಹೆಚ್ಚಿದ್ದಾರೆ. ವಕೀಲರು ರಾಜಕೀಯದಲ್ಲಿರುವುದು ತುಂಬಾ ಕಡಿಮೆಯಾಗಿದೆ. ಹಾಗಾಗಿ, ವಕೀಲರಾಗಿರುವ ದರ್ಶನ್‌ಗೆ ನಂಜನಗೂಡು ಟಿಕೆಟ್ ನೀಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಹಿರಿಯ ನಾಯಕರು ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮತಬೇಟೆ ಕೆಲಸ ಮಾಡುತ್ತಿದ್ದಾರೆ
ಬಿಜೆಪಿ ರಾಜ್ಯ ನಾಯಕರು ನರೇಂದ್ರ ಮೋದಿ ಅವರು ಮಂಡ್ಯಕ್ಕೆ ಬಂದಾಗ ಮಾಜಿ ಸಂಸದ ಧ್ರುವನಾರಾಯಣ್ ಮೃತಪಟ್ಟ ಬಗ್ಗೆ ಸೌಜನ್ಯಕ್ಕಾದರೂ ಪ್ರಸ್ತಾಪ ಮಾಡುವಂತೆ ತಿಳಿಸಬಹುದಿತ್ತು. ಆದರೆ, ಅದ್ಯಾವುದೋ ಉರಿಗೌಡ, ನಂಜೇಗೌಡರ ಹೆಸರು ಹೇಳಿಕೊಂಡು ಭಾವನಾತ್ಮಕ ವಿಚಾರ ತಂದು ಮತಬೇಟೆ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಧ್ರುವನಾರಾಯಣ ಅಕಾಲಿಕ ಮರಣ, "ಕೈ"ಗೆ ಸಂಕಷ್ಟ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಅಕಾಲಿಕ ಮರಣದಿಂದ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ.
ಚಾಮರಾಜನಗರದ ಮಾಜಿ ಸಂಸದರೂ ಆಗಿದ್ದ ಆರ್. ಧ್ರುವನಾರಾಯಣ್ ಅವರ ನಿಧನದ ನಂತರ ಅವರ ಪುತ್ರ ದರ್ಶನ್‌ಗೆ ನಂಜನಗೂಡು ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಕಾಂಗ್ರೆಸ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಕೂಡ ನಂಜನಗೂಡು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಗೆಯೇ ಹಲವಾರು ನಾಯಕರು ದರ್ಶನ್‌ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್‌ನ ಮುಂದಿನ ನಿಲುವು ಏನೆಂದು ಕಾದುನೋಡಬೇಕಿದೆ.












Click it and Unblock the Notifications