ಶೀಘ್ರವೇ ಸರ್ಕಾರ ಪತನ: ಕೆ.ಎಸ್.ಈಶ್ವರಪ್ಪ ಹೀಗೆ ಭವಿಷ್ಯ ನುಡಿದಿದ್ದೇಕೆ?
ಮೈಸೂರು, ನವೆಂಬರ್, 05: ರಾಜ್ಯದಲ್ಲಿ ಬರ ಆವರಿಸಿದ್ದು, ರೈತರ ಆತ್ಮಹತ್ಯೆಗೆ ಲೆಕ್ಕ ಸಿಗುತ್ತಿಲ್ಲ. ಹೀಗಿರುವಾಗ ಸಿಎಂ ಕುರ್ಚಿಗೆ ಪೈಪೋಟಿ ನಡೆಯುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪೂರ್ವವಾದರೆ, ಡಿ.ಕೆ.ಶಿವಕುಮಾರ್ ಪಶ್ಚಿಮ. ಇವರಿಬ್ಬರ ಕಥೆಯೇ ಹೀಗಾದರೆ ಉಳಿದ ಸಚಿವರುಗಳ ಕಥೆ ಏನಾಗಿರಬೇಡ? ಕಾಂತರಾಜ್ ಆಯೋಗದ ವರದಿ ಒಪ್ಪಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ವರದಿ ಒಪ್ಪಿಕೊಳ್ಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಸರ್ಕಾರದ ನಂಬರ್ ಒನ್, ನಂಬರ್ ಟು ನಡುವೆಯೇ ಸಮನ್ವಯತೆಯೇ ಇಲ್ಲ ಎಂದು ಕಿಡಿಕಾರಿದರು.

ಬರಗಾಲದಿಂದ ರಾಜ್ಯದಲ್ಲಿ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಯಾವೊಬ್ಬ ಉಸ್ತುವಾರಿ ಸಚಿವರೂ ರೈತರ ಸಮಸ್ಯೆ ಕೇಳಿಲ್ಲ. ಈ ನಡುವೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸಿಎಂ ಸ್ಥಾನದ ಬಗ್ಗೆ ಬಡಿದಾಡುತ್ತಿದ್ದಾರೆ. ರಾಜ್ಯದ ಜನತೆ ಬಗ್ಗೆ ಕಾಳಜಿ ತೋರದ ಕಾಂಗ್ರೆಸ್ ಸರ್ಕಾರ ಇರಬಾರದು ಎಂದು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ, ಡಿಸಿಎಂ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಡಾ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಎಲ್ಲಾ ಅಜಿತ್ ಪವಾರ್‌ಗಳಾಗಿದ್ದಾರೆ. ಹೀಗಾಗಿ ಸರ್ಕಾರ ಬೀಳುವ ಲಕ್ಷಣ ಕಾಣುತ್ತಿದೆ. ಕಾಂಗ್ರೆಸ್‌ನಲ್ಲಿ ಈಗ ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಸಿಎಂ ಸ್ಥಾನ ಕೇಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಅಪ್ಪನಿಗೆ ಸಿಎಂ ಸ್ಥಾನ ಕೇಳಿದ್ದರೆ ಮೆಚ್ಚಿಕೊಳ್ಳುತ್ತಿದ್ದೆ. ಆದರೆ, ಅವರೇ ಕೇಳುತ್ತಿದ್ದಾರೆ. ಇದು ನಗೆಪಾಟಲಿನ ವಿಚಾರ ಎಂದು ಲೇವಡಿ ಮಾಡಿದರು.
ರೈತರ ಆತ್ಮಹತ್ಯೆ ಮಾಡಿಸಲೆಂದೇ ರಾಜ್ಯದಲ್ಲಿ ಸರ್ಕಾರ ಬಂದಿದೆ. ಇದುವರೆಗೂ ಬೆಳೆ ಪರಿಹಾರಕ್ಕಾಗಲಿ, ಬರ ಪರಿಹಾರಕ್ಕಾಗಲಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಅವರ ನಾಯಕರಾದ ಸುರ್ಜೇವಾಲ, ವೇಣುಗೋಪಾಲ್ ಹೇಳಿದರೂ ಅವರಿಷ್ಟದ ಹೇಳಿಕೆ ಕೊಡುತ್ತಿದ್ದಾರೆ, ಅಂದರೆ ಅವರಲ್ಲಿ ಶಿಸ್ತಿಲ್ಲ. ರೈತರ ಬಗ್ಗೆ ಕಾಳಜಿಯೂ ಇಲ್ಲ ಎಂದರು.
ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ. ಒಂದು ಕಡೆ ಸಿದ್ದರಾಮಯ್ಯ ಕಾಂತರಾಜು ವರದಿ ಜಾರಿಗೆ ತರುತ್ತೇವೆ ಎಂದರೆ, ಇನ್ನೊಂದು ಕಡೆ ಒಕ್ಕಲಿಗರ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಲ್ಲ ಎನ್ನುತ್ತಾರೆ. ಒಂದೇ ಪಕ್ಷದ ಸರ್ಕಾರದಲ್ಲಿ ಸಿಎಂ, ಡಿಸಿಎಂ ಬೇರೆ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ನಾನೇ ಐದು ವರ್ಷ ಸಿಎಂ ಅಂದರು. ವಿರೋಧ ವ್ಯಕ್ತವಾದಾಗ ಉಲ್ಟಾ ಹೊಡೆದರು. ಅವರು ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ. ಜಾತಿಗಣತಿ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆ. ಹಿಂದೆ ವರದಿ ನೀಡಿದ್ದಾಗ ಸಿಎಂ ಆಗಿದ್ದಾಗಲೇ ಜಾರಿಗೆ ತರುವುದಾಗಿ ಹೇಳಿದ್ದರು. ಸ್ವಲ್ಪ ದಿನಗಳ ಹಿಂದೆ ಸಾಧು, ಸಂತರು ಭೇಟಿಯಾದಾಗ ನವೆಂಬರ್‌ನಲ್ಲಿ ಜಾರಿಗೆ ತರುವುದಾಗಿ ಹೇಳಿದ್ದರು. ಈಗ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಆದ್ದರಿಂದ ಸಾಧು, ಸಂತರು ಹಾಗೂ ದಲಿತರು ಹಾಗೂ ಹಿಂದುಳಿದ ವರ್ಗದವರ ಶಾಪವೂ ಅವರಿಗೆ ತಟ್ಟಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications