ಮೈಸೂರು: ಪಾದ್ರಿ ಮತ್ತು ಭಕ್ತರ ನಡುವೆ ಘರ್ಷಣೆ
ಮೈಸೂರು, ಡಿಸೆಂಬರ್ 7: ಚರ್ಚ್ನ ಆಸ್ತಿ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕ್ರಿಶ್ಚಿಯನ್ ಸಮುದಾಯದ ಭಕ್ತರು ಹಾಗೂ ಪಾದ್ರಿಯವರ ನಡುವೆ ಘರ್ಷಣೆ ನಡೆದಿದೆ.
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಬಳಿಯ ವೆಸ್ಲಿ ಚರ್ಚ್ನಲ್ಲಿ ಈ ಘರ್ಷಣೆ ನಡೆದಿದ್ದು, ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯವರನ್ನು ಕೆಲ ಸದಸ್ಯರು ಪ್ರಶ್ನಿಸಿದ್ದರು. ಚರ್ಚ್ನ ಹಿತಾಸಕ್ತಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದವರನ್ನು ಅಮಾನತು ಮಾಡಲಾಗಿತ್ತು.
ಡಿ.6ರ ಭಾನುವಾರದ ಪ್ರಾರ್ಥನೆ ಮುಗಿದ ಬಳಿಕ, ಅಮಾನತುಗೊಳಿಸಿರುವ ಬಗ್ಗೆ ಆದೇಶ ಪತ್ರವನ್ನು ಭೋದಕರು ಓದುತ್ತಿದ್ದರು. ಈ ವೇಳೆ ಕೆರಳಿದ ಕೆಲ ಸದಸ್ಯರು, ವೇದಿಕೆಗೆ ನುಗ್ಗಿ ಪಾದ್ರಿಗಳ ಮೇಲೆ ಹಲ್ಲೆ ನಡೆಸಿ, ಮೈಕ್ ಕಿತ್ತುಕೊಂಡು ಗಲಾಟೆ ನಡೆಸಿದ್ದಾರೆ.

ಈ ವೇಳೆ ಪಾದ್ರಿಗಳು ಮತ್ತು ಭಕ್ತರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಚರ್ಚ್ನ ಸದಸ್ಯ ಸುಂದರ್ ಪ್ರೇಮ್ ಕುಮಾರ್, ""ಚರ್ಚ್ನ ಆಸ್ತಿ ಪಾಸ್ತಿಗಳನ್ನು ಅಕ್ರಮವಾಗಿ ಲೀಸ್ಗೆ ನೀಡಲಾಗಿದೆ. ಮಿಷನ್ ಆಸ್ಪತ್ರೆ ಸೇರಿದಂತೆ ಹಲವೆಡೆ ಹಣಕಾಸಿನ ಅವ್ಯವಹಾರಗಳನ್ನೂ ನಡೆಸಿದ್ದಾರೆ'' ಎಂದು ಆರೋಪಿಸಿದರು.
ಅಲ್ಲದೆ ಪ್ರಶ್ನಿಸಿದವರ ಮೇಲೆ ಪಾಸ್ಟರೇಟ್ ಕಮಿಟಿಯವರು ಬಿಷಪ್ ಮೂಲಕ ಅಮಾನತ್ತು ಆದೇಶ ಹೊರಡಿಸಿದ್ದಾರೆ. ಅದನ್ನು ನಾವು ಪ್ರಶ್ನಿಸಿದ್ದು, ಆಗ ಘರ್ಷಣೆ ಆಗಿದೆ. ಸಿಎಸ್ಐ ಧರ್ಮಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕಿದೆ ಎಂದು ಆಗ್ರಹಿಸಿದರು.
ನಾವು ಸೂಕ್ತ ಕಾನೂನು ಹೋರಾಟ ನಡೆಸುತ್ತಿದ್ದೇವೆ, ಚರ್ಚ್ನ ಆಡಳಿತ ವ್ಯವಸ್ಥೆ ಸರಿಯಾಗುವವರೆಗೂ ಹೋರಾಟ ನಡೆಸುತ್ತೇವೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಅಲ್ಪಸಂಖ್ಯಾತ ಆಯೋಗಕ್ಕೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.












Click it and Unblock the Notifications