MUDA Case: ಲೋಕಾಯುಕ್ತ ಪೊಲೀಸರ ವಿಚಾರಣೆ ವೇಳೆ ಸಿಎಂ ಪಕ್ಕದಲ್ಲೇ ಇದ್ದ ಪೊನ್ನಣ್ಣ...
ಬೆಂಗಳೂರು, ನವೆಂಬರ್ 06: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬುಧವಾರ (ನವೆಂಬರ್ 06) ಮೈಸೂರಿನಲ್ಲಿ ವಿಚಾರಣೆ ಎದುರಿಸಿದ್ದಾರೆ. ಸತತ ಎರಡು ಗಂಟೆಗಳ ಕಾಲ ವಿಚಾರಣೆ ಎದುರಿಸಿರುವ ಮುಖ್ಯಮಂತ್ರಿಗಳ ಪಕ್ಕದಲ್ಲಿಯೇ ಹಿರಿಯ ವಕೀಲ, ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿದ್ದರು ಎಂದು ತಿಳಿದು ಬಂದಿದೆ.
ಮುಡಾ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದ ಮೈಸೂರು ಲೋಕಾಯುಕ್ತ ಪೊಲೀಸರ ಕಚೇರಿಗೆ ಬುಧವಾರ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಒಟ್ಟು ಸುಮಾರು ಎರಡು ಗಂಟೆಗಳ ಕಾಲ ಮುಡಾ ನಿವೇಶನ ಹಂಚಿಕೆ, ಅಕ್ರಮ ಸಂಬಂಧಿತ ಪ್ರಶ್ನೆಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿದ್ದಾರೆ.

ಈ ವೇಳೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಅವರೊಂದಿಗೆ ಲೋಕಾಯುಕ್ತ ಕಚೇರಿಯಲ್ಲಿ ಇದ್ದರು ಎನ್ನಲಾಗಿದೆ. ಕಾನೂನಿನಲ್ಲಿ ವಕೀಲರನ್ನು ವಿಚಾರಣೆ ವೇಳೆ ಇರಿಸಿಕೊಳ್ಳಲು ಅವಕಾಶ ಇದೆ ಎನ್ನಲಾಗಿದೆ.
ಮುಡಾ ಪ್ರಕರಣ ಬಗ್ಗೆ ಪೊನ್ನಣ್ಣರಿಗೆ ಹೆಚ್ಚು ಮಾಹಿತಿ
ಮುಖ್ಯವಾಗಿ ಎ.ಎಸ್. ಪೊನ್ನಣ್ಣ ಅವರು ಮುಡಾ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಅಗತ್ಯ ದಾಖಲಾತಿಗಳನ್ನು ಬಿಡುಗಡೆಗೊಳಿಸಿದ್ದರು. ರಾಜಕೀಯ ಆರೋಪಗಳನ್ನು ತಳ್ಳಿ ಹಾಕಿದ್ದರು. ಮುಡಾ ನಿವೇಶನದ ಅಕ್ರಮಕ್ಕೂ ಸಿಎಂ ಅವರಿಗೂ ಸಂಬಂಧ ಇಲ್ಲ ಎಂದು ಒಂದಷ್ಟು ಸ್ಪಷ್ಟನೆ ನೀಡಿದ್ದರು. ಇದೆಲ್ಲ ನೋಡಿದರೆ, ಅವರಿಗೆ ಮುಡಾ ಅಕ್ರಮ ಹಾಗೂ ಸಿಎಂ ಮೇಲಿನ ಆರೋಪಗಳ ಬಗ್ಗೆ ಹೆಚ್ಚು ಗೊತ್ತಿದೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರನ್ನು ವಿಚಾರಣೆ ವೇಳೆ ಸಿಎಂ ಪಕ್ಕದಲ್ಲೇ ಇರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಂದ ಬಂದ ಉತ್ತರಗಳನ್ನು ಕಚೇರಿಯ ಸಿಬ್ಬಂದಿ ದಾಖಲಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಹೆಸರಿಲ್ಲಿದ್ದ 14 ನಿವೇಶನಗಳು, ಲಭ್ಯ ದಾಖಲೆಗಳ ಕುರಿತುಂತೆ ಸಿಎಂ ಅವರಿಂದ ಉತ್ತರ ಪಡೆದಿದ್ದಾರೆ.

ಸಿಎಂ ಹೇಳಿಕೆಗೆ ಸಹಿ ಪಡೆದ ತನಿಖಾಧಿಕಾರಿಗಳು ತಿಳಿಸಿದ್ದೇನು?
ಎರಡು ಗಂಟೆಗಳ ವಿಚಾರಣೆ ಬಳಿಕ ದಾಖಲಿಸಿಕೊಂಡು ಹೇಳಿಕೆಗಳ ಪತ್ರಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸಹಿ ಹಾಕಿಸಿಕೊಂಡು ಮತ್ತೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಮತ್ತೆ ವಿಚಾರಣೆಗೆ ಅಗತ್ಯವಿಲ್ಲದ್ದ ಬರುವಂತೆ ಮೈಸೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
ಚನ್ನಪಟ್ಟಣದಲ್ಲಿ ಸಿಎಂ ತನಿಖೆ ಬಗ್ಗೆ ಪ್ರಸ್ತಾಪ
ಮುಡಾ ತನಿಖೆಯ ವಿಚಾರಣೆ ಎದುರಿಸಿದ ನಂತರ ಚನ್ನಪಟ್ಟಣ ಕ್ಷೇತ್ರ ಉಪಚುನವಣಾ ಕಣಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿ ಸಹ ತನಿಖೆ ಕುರಿತು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಚುನಾವಣೆ ಪ್ರಚಾರಕ್ಕೆ ತಡವಾಗಿದೆ ಆಗಮಿಸಿದ್ದ ಮುಖ್ಯಮಂತ್ರಿಗಳು ಆ ಬಗ್ಗೆ ಮಾತನಾಡಿದ್ದಾರೆ.
ನಾನು ಮೈಸೂರು ಲೋಕಾಯುಕ್ತರ ತನಿಖೆ ಒಂದು ಗಂಟೆಯಲ್ಲಿ ಮುಗಿಬಹುದು ಎಂದು ಭಾವಿಸಿದ್ದೇ. ಆದರೆ ಅದು ತಡವಾಯಿತು. ಎರಡು ಗಂಟೆ ಹಿಡಿಯಿತು. ಹೀಗಾಗಿ ಇಲ್ಲಿಗೆ ಬರುವುದು ತಡವಾಯಿತು ಎಂದು ಮಾತನಾಡಿದ್ದಾರೆ.
ಸೋಮವಾರದಿಂದ ಎರಡು ದಿನ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಖಾನ್ ಪಠಾಣ್ ಪರ ಮತಯಾಚಿಸಿದ್ದಾರೆ. ಮೂರು ದಿನ ಅಲ್ಲಿಯೇ ಉಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ ಮುಡಾ ಪ್ರಕರಣ ಸಂಬಂಧ ಅವರು ಇಂದು ಮೈಸೂರಿಗೆ ಭೇಟಿ ನೀಡಿ ನಂತರ, ಚನ್ನಪಟ್ಟಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications