MUDA Scam: ಒಂದೇ ದಿನ 848 ನಿವೇಶನಗಳಿಗೆ ಖಾತೆ ಮಾಡಿದ ಆರೋಪ; ಸ್ಪಷ್ಟನೆ ಕೊಟ್ಟ ಮುಡಾ ಮಾಜಿ ಅಧ್ಯಕ್ಷ
ಮುಡಾ ಹಗರಣ ಬಯಲಿಗೆ ಬಂದ ನಂತರ ಅನೇಕ ಆಘಾತಕಾರಿ ಸಂಗತಿಗಳು ಕೂಡ ಹೊರಬರುತ್ತಿವೆ. ಸಿಎಂ ಸಿದ್ದರಾಮಯ್ಯ ಹೆಸರು ಕೇಳಿಬಂದ ಬಳಿಕ, ಪ್ರಕರಣಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ. ಮುಡಾದಲ್ಲಿ ಒಂದೇ ದಿನದಲ್ಲಿ 848 ನಿವೇಶನಗಳಿಗೆ ಖಾತೆ ಮಾಡಲಾಗಿತ್ತು ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮೇಲೆ ಆರೋಪ ಕೇಳಿಬಂದಿತ್ತು, ಆದರೆ ಈ ಬಗ್ಗೆ ರಾಜೀವ್ ಸ್ಪಷ್ಟನೆ ಕೊಟ್ಟಿದ್ದು, ಅದು ಸುಳ್ಳು ಆರೋಪ ಎಂದಿದ್ದಾರೆ.
ಒಂಬತ್ತು ದಿನಗಳ ಅಂತರದಲ್ಲಿ ಖಾತೆ ಆಗಿರುವ ಬಗ್ಗೆ ತಾಂತ್ರಿಕ ವರದಿಯಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಹಗರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ ಬಿಡುಗಡೆ ವಿಷಯವು ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸುವಾಗ ನಾನು ಹಾಜರಿರಲಿಲ್ಲ. ನನ್ನ ಮತ್ತು ಅಂದಿನ ಆಯುಕ್ತರ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ. ಹೀಗಾಗಿ ಅವರು ನನ್ನ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಎಂದು ಹೇಳಿದರು.
ನಿಯಮದಂತೆ ನಡೆದಿದೆ
ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಯಾವುದೇ ಸರ್ಕಾರಿ ಭೂಮಿಯಲ್ಲಿ ಬಡಾವಣೆ ರಚನೆ ಮಾಡಿಲ್ಲ. 3500 ಸಾವಿರ ಸದಸ್ಯರಿರುವ ಸಂಘದಲ್ಲಿ ಈವರೆಗೆ 2500 ನಿವೇಶನ ಹಂಚಿಕೆ ಮಾಡಲಾಗಿದೆ. ಕೃಷಿ ಭೂಮಿಯನ್ನು ಮಾಲೀಕರಿಂದ ನೇರವಾಗಿ ಮಾರುಕಟ್ಟೆ ದರದಲ್ಲಿ ಖರೀದಿಸಲಾಗಿದೆ. ಎಲ್ಲವೂ ನಿಯಮಾನುಸಾರವಾಗಿಯೇ ನಡೆದಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಾಲ್ಕು ಯೋಜನೆಗಳ 848 ನಿವೇಶನಗಳಿಗೆ ಖಾತೆ ಮಾಡಿಕೊಡುವ ವಿಷಯಕ್ಕೆ ಒಪ್ಪಿಗೆ ಕೊಡಲಾಗಿದೆ. ಆದರೆ, ಬೇರೆ ಬೇರೆ ದಿನಾಂಕಗಳಲ್ಲಿ ಕಾಲಾನುಕಾಲವಾಗಿ ನಿವೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಒಂದೇ ದಿನ ನಿವೇಶನ ಬಿಡುಗಡೆ ಮಾಡಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದದ್ದು ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.
50:50 ಅನುಪಾತದಡಿ ಮುಡಾ ಸಭೆಯಲ್ಲಿ ಚರ್ಚಿಸಿ ಹಂಚಿಕೆಯಾಗಿರುವ ನಿವೇಶಗಳ ವಿಚಾರದಲ್ಲಿ ಯಾವುದೇ ಅಕ್ರಮವಾಗಿಲ್ಲ. ಸಭೆಯ ಗಮನಕ್ಕೆ ಬಾರದ ಪ್ರಕರಣಗಳಲ್ಲಿ ತಪ್ಪುಗಳು ಆಗಿರಬಹುದು. ಅವುಗಳು ತನಿಖೆಯಿಂದ ಹೊರಬರಲಿವೆ ಎಂದು ಹೇಳಿದರು.
ಮುಡಾ ಹಗರಣ ಬಗ್ಗೆ ತನಿಖೆ ತೀವ್ರವಾಗಿದ್ದು, ಸರ್ಕಾರ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಹೇಳಿದೆ. ತನಿಖೆ ವರದಿ ಕೈಸೇರಿದ ಬಳಿಕ ಮತ್ತಷ್ಟು ಅಕ್ರಮಗಳು ಹೊರಬರುವ ಸಾಧ್ಯತೆ ಇದೆ.












Click it and Unblock the Notifications