ಸರಳ ದಸರಾದಲ್ಲಿ ಝಗಮಗಿಸುತ್ತಿದೆ ಮೈಸೂರು ನಗರ
ಮೈಸೂರು, ಅಕ್ಟೋಬರ್ 12: ಈ ಬಾರಿ ಮೈಸೂರು ದಸರಾವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದರೂ ನಗರಕ್ಕೆ ಮಾಡಿರುವ ವಿದ್ಯುತ್ ದೀಪಾಲಂಕಾರ ಮಾತ್ರ ಅದ್ಧೂರಿಯಾಗಿದ್ದು, ಇಡೀ ನಗರ ಬೆಳಕಿನಿಂದ ಝಗಮಗಿಸುತ್ತಿದೆ.
ದೀಪಾಲಂಕಾರದ ಬಗ್ಗೆ ವಿರೋಧಗಳು ವ್ಯಕ್ತವಾಗಿದ್ದರೂ ಅದಕ್ಕೆ ಸೊಪ್ಪು ಹಾಕದೆ ನಗರದಾದ್ಯಂತ ಪ್ರಮುಖ ವೃತ್ತ ಹಾಗೂ ಕಟ್ಟಡ ಸೇರಿದಂತೆ ಹಲವೆಡೆ ದೀಪಾಲಂಕಾರ ಮಾಡಲಾಗಿದ್ದು, ಅವುಗಳೆಲ್ಲವೂ ಆಕರ್ಷಿಸುತ್ತಿದೆ. ಈಗಾಗಲೇ ಜನ ದೀಪಾಲಂಕಾರ ನೋಡಲು ಮುಗಿಬೀಳುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಇದು, ಹೆಚ್ಚುತ್ತಿರುವ ಕೊರೊನಾ ನಡುವೆ ಆತಂಕವನ್ನೂ ಅಧಿಕಗೊಳಿಸಿದೆ.

ದಸರಾ ದೀಪಾಲಂಕಾರ ಹೊಸತೇನಲ್ಲ
ಪ್ರತಿವರ್ಷವೂ ದಸರಾ ಮಹೋತ್ಸವದ ಸಂದರ್ಭ ಮೈಸೂರು ನಗರ ಮದುವಣಗಿತ್ತಿಯಂತೆ ದೀಪಾಲಂಕಾರದಿಂದ ಸಿಂಗಾರಗೊಳ್ಳುವುದು ಹೊಸತೇನಲ್ಲ. ಮೈಸೂರು ದಸರಾಕ್ಕೆ ಮೆರಗು ನೀಡುವುದೇ ದೀಪಾಲಂಕಾರ. ಆದರೆ ಈ ಬಾರಿ ಕೊರೋನಾದಿಂದಾಗಿ ಸರಳವಾಗಿ ಆಚರಣೆ ಮಾಡುತ್ತಿರುವುದರಿಂದ ದೀಪಾಲಂಕಾರಕ್ಕಾಗಿ ದುಂದುವೆಚ್ಚ ಬೇಡ ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಆದರೆ ಈ ಮೊದಲೇ ತೀರ್ಮಾನ ಮಾಡಿದ್ದರಿಂದ ದೀಪಾಲಂಕಾರ ಮಾಡಲಾಗಿದೆ ಎಂಬುದು ಸಂಬಂಧಿಸಿದವರ ಸಮಜಾಯಿಷಿ. ಅದರಂತೆ ಇದೀಗ ನಗರದ ಎಲ್ಲ ರಸ್ತೆಗಳು, ಪಾರಂಪರಿಕ ಕಟ್ಟಡಗಳು, ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಝಗಮಗಿಸುತ್ತಿರುವ ವೃತ್ತಗಳು
ಒಂದು ಕಡೆ ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿದ್ದರೆ, ರಾಮಸ್ವಾಮಿ ವೃತ್ತ, ಚಾಮರಾಜ, ಕೃಷ್ಣರಾಜ, ಜೆಎಸ್ ಎಸ್ ವಿದ್ಯಾಪೀಠದ ಬಳಿಯ ಬಸವೇಶ್ವರ ವೃತ್ತ, ಪಾಲಿಕೆ ಕಚೇರಿ, ಅಗ್ರಹಾರ, ಸಿದ್ದಪ್ಪ ವೃತ್ತ, ಆಯುರ್ವೇದ ಆಸ್ಪತ್ರೆ, ಆರ್ ಟಿಓ ಹೀಗೆ ನಗರದ ಸುಮಾರು ನಲುವತ್ತಕ್ಕೂ ಹೆಚ್ಚಿನ ವೃತ್ತಗಳು ದೀಪಾಲಂಕಾರದಿಂದ ಬೆಳಗುತ್ತಿವೆ.

ರಸ್ತೆಗಳಿಗೆ ವಿದ್ಯುದ್ದೀಪಗಳ ಅಲಂಕಾರ
ರಾಮಸ್ವಾಮಿ ವೃತ್ತದಲ್ಲಿ ವಿದ್ಯುದ್ದೀಪಗಳಿಂದ ಅಂಬಾವಿಲಾಸ ಅರಮನೆ ಪ್ರತಿಕೃತಿಯನ್ನು ಸೃಷ್ಟಿಸಲಾಗಿದ್ದರೆ, ಹಾರ್ಡಿಂಜ್ ವೃತ್ತದ ಬಳಿ ಸೃಷ್ಟಿಯಾಗಿರುವ ಐಫೆಲ್ ಟವರ್ ನೋಡುಗರ ಮನವನ್ನು ಆಕರ್ಷಿಸುತ್ತಿದೆ. ಇನ್ನು ಕೊರೋನಾ ಜಾಗೃತಿ ಸೃಷ್ಟಿಸುವ ವಿವಿಧ ಚಿತ್ರಗಳು ಗಮನಸೆಳೆಯುತ್ತಿವೆ. ಇದಲ್ಲದೆ ಪ್ರಮುಖ ರಸ್ತೆಗಳಾದ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಮೈಸೂರು ಬೆಂಗಳೂರು ರಸ್ತೆ, ಚಾಮರಾಜ ಜೋಡಿ ರಸ್ತೆ, ಎಂ.ಜಿ.ರಸ್ತೆ, ಜೆಎಲ್ ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಿಗೆ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿದೆ.
ಇಷ್ಟೇ ಅಲ್ಲದೆ ಅಂಬಾವಿಲಾಸ ಅರಮನೆ, ಲಲಿತ ಮಹಲ್, ಅರಮನೆ ದೇವರಾಜು ಅರಸು ರಸ್ತೆ, ರೈಲ್ವೆ ಸ್ಟೇಷನ್ ವೃತ್ತ, ಪಾರಂಪರಿಕ ಕಟ್ಟಡಗಳಾದ ಪುರಭವನ, ನಗರ ಪಾಲಿಕೆ ಕಟ್ಟಡ, ಮೂಡಾ, ನ್ಯಾಯಾಲಯ ಕಟ್ಟಡ, ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿವಿ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳು ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಮಿನುಗುವಾಗ ಕಾಣುವ ದೃಶ್ಯ ಅದ್ಭುತ
ಹೀಗಾಗಿ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಪ್ರತಿದಿನವೂ ಎರಡು ಗಂಟೆಗಳ ಕಾಲವಷ್ಟೆ ಈ ವಿದ್ಯುದ್ದೀಪಗಳು ಬೆಳಗಲಿವೆ. ಇದೆಲ್ಲದರ ನಡುವೆ ಚಾಮುಂಡಿ ಬೆಟ್ಟದಲ್ಲಿ ವಿದ್ಯುದ್ದೀಪಗಳಿಂದಲೇ ನಿರ್ಮಿಸಿದ ಸುಸ್ವಾಗತ ಫಲಕವೂ ಆಕರ್ಷಣೀಯವಾಗಿ ಇಡೀ ಮೈಸೂರನ್ನು ದಸರಾಕ್ಕೆ ಸ್ವಾಗತಿಸುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಒಟ್ಟಾರೆ ಹೇಳಬೇಕೆಂದರೆ ಸಂಕಷ್ಟದ ನಡುವೆ ದೀಪಾಲಂಕಾರ ಮೈಸೂರು ನಗರಕ್ಕೆ ಮೆರುಗು ತಂದಿರುವುದಂತು ನಿಜ.












Click it and Unblock the Notifications