ಮೈಸೂರು ಪೊಲೀಸ್ ಎನ್ ಕೌಂಟರ್ ತನಿಖೆ ಸಿಐಡಿಗೆ
ಮೈಸೂರು, ಮೇ 18 : ಮೈಸೂರಿನಲ್ಲಿ ನಡೆದ ಪೊಲೀಸ್ ಎನ್ ಕೌಂಟರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಗುರುವಾರ ಮಧ್ಯಾಹ್ನ ನಡೆದ ಎನ್ ಕೌಂಟರ್‌ನಲ್ಲಿ ಸುಖ್ವಿಂದರ್ ಸಿಂಗ್ ಎಂಬಾತ ಮೃತಪಟ್ಟಿದ್ದ.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ನಾಲ್ವರು ಸಿಐಡಿ ಅಧಿಕಾರಿಗಳ ತಂಡ ಮೈಸೂರಿಗೆ ಶುಕ್ರವಾರ ಸಂಜೆಯೇ ತೆರಳಿದ್ದು, ತನಿಖೆಯನ್ನು ಆರಂಭಿಸಿದೆ.
ಪೊಲೀಸ್ ಎನ್ ಕೌಂಟರ್‌ನಲ್ಲಿ ಮೃತಪಟ್ಟ ಸುಖ್ವಿಂದರ್ ಸಿಂಗ್ ಕುಟುಂಬದವರು ಪಂಜಾಬ್‌ನ ಫರೀದಾಕೋಟರ್‌ನಿಂದ ಹೊರಟಿದ್ದಾರೆ. ಅವರು ಬಂದ ಬಳಿಕ ಕೆ.ಆರ್.ಆಸ್ಪತ್ರೆಯಲ್ಲಿರುವ ಶವದ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಎನ್ ಕೌಂಟರ್ ವೇಳೆ ಪರಾರಿಯಾಗಿರುವ ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಪರಾರಿಯಾದ ಆರೋಪಿಗಳಲ್ಲಿ ಒಬ್ಬ ಬೆಂಗಳೂರಿನ ನಿವಾಸಿ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ರದ್ದುಪಡಿಸಲಾದ 500 ಮತ್ತು 1000 ರೂ. ನೋಟುಗಳನ್ನು ಬದಲಾವಣೆ ಮಾಡಿಕೊಡುತ್ತಿದ್ದರು ಎಂಬ ಮಾಹಿತಿ ಪಡೆದ ಪೊಲೀಸರು ಅವರನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಸುಖ್ವಿಂದರ್ ಸಿಂಗ್ ಪೊಲೀಸರ ಮೇಲೆ ಗುಂಡು ಹಾರಿಸಲು ಮುಂದಾಗಿದ್ದ. ಆಗ ಪೊಲೀಸರು ಗುಂಡು ಹಾರಿಸಿದಾಗ ಆತ ಮೃತಪಟ್ಟಿದ್ದ.
ಪೊಲೀಸರಿಗೆ ಮಾಹಿತಿ ನೀಡಿದಾತ ಮತ್ತು ಗುಂಡಿನ ದಾಳಿ ನಡೆಸಿದ ವಿಜಯನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ಪ್ರತ್ಯೇಕವಾಗಿ ಅಪರಾಧ ಪತ್ತೆದಳದ ಎಸಿಪಿ ಮರಿಯಪ್ಪ ನೇತೃತ್ವದ ತಂಡ ವಿಚಾರಣೆ ನಡೆಸಿದೆ.












Click it and Unblock the Notifications