ಚುಂಚನಕಟ್ಟೆ ಜಾನುವಾರು ಜಾತ್ರೆಯಲ್ಲಿ ಎತ್ತುಗಳ ಕ್ಯಾಟ್ ವಾಕ್ !
ಮೈಸೂರು, ಜನವರಿ 14: ಚುಂಚನಕಟ್ಟೆಯಲ್ಲಿ ಜಾನುವಾರು ಜಾತ್ರೆ ಆರಂಭವಾಗಿ ವಾರವೇ ಕಳೆದರೂ ಜಾತ್ರೆಯ ಕಳೆ ಕಡಿಮೆಯಾಗಿಲ್ಲ. ಎತ್ತುಗಳ ಖರೀದಿ, ಮಾರಾಟ ಜೋರಾಗಿಯೇ ನಡೆಯುತ್ತಿದೆ. ದೂರದ ಊರುಗಳಿಂದ ಮಾರಾಟಗಾರರು ಆಗಮಿಸಿ ಎತ್ತುಗಳನ್ನು ಖರೀದಿಸುತ್ತಿದ್ದರೆ, ಇನ್ನೊಂದೆಡೆ ಲಕ್ಷಾಂತರ ರೂ.ಬೆಲೆಯ ಎತ್ತುಗಳು ಗಮನಸೆಳೆಯುತ್ತಿವೆ. ಇದೆಲ್ಲದರ ನಡುವೆ ಎತ್ತುಗಳ ಕ್ಯಾಟ್ ವಾಕ್ ಆಕರ್ಷಿಸುತ್ತಿದೆ.
ಇದೀಗ ಚುಂಚನಕಟ್ಟೆ ಜಾನುವಾರು ಜಾತ್ರೆಗೆ ತೆರಳುವವರಿಗೆ ಸಿಂಗಾರಗೊಂಡ ಜಾನುವಾರುಗಳ ಮೇಳ ಕಿ.ಮೀ. ಗಟ್ಟಲೆ ಕಂಡು ಬರುತ್ತಿದ್ದು, ಸುಗ್ಗಿಯ ದಣಿವನ್ನು ತಣಿಸಿಕೊಳ್ಳಲು ರೈತರು ಜಾನುವಾರು ಜಾತ್ರೆಯತ್ತ ಮುಗಿ ಬೀಳುತ್ತಿದ್ದು 30 ಸಾವಿರ ರೂ.ಗಳಿಂದ ಆರಂಭಿಸಿ 6 ಲಕ್ಷಕ್ಕೂ ಅಧಿಕ ಬೆಲೆಬಾಳುವ ದುಬಾರಿ ಎತ್ತುಗಳು ಜಾತ್ರೆಯಲ್ಲಿ ಕಾಣಸಿಗುತ್ತಿದ್ದು, ಜನರು ಅವುಗಳ ಮುಂದೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಸುಗ್ಗಿಯ ನಂತರ ನಡೆಯವ ಮತ್ತು ದಕ್ಷಿಣ ಭಾರತದಲ್ಲಿ ಅತ್ಯಂತ ಹೆಸರುವಾಸಿಯಾದ ಚುಂಚನಕಟ್ಟೆ ಜಾತ್ರೆಗೆ ಮೈಸೂರು ಜಿಲ್ಲೆ ಮಾತ್ರವಲ್ಲದೇ ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಕೋಲಾರ ಸೇರಿದಂತೆ ಇನ್ನಿತರ ಜಿಲ್ಲೆಗಳ ರೈತರು ಪ್ರತಿಷ್ಠೆಗೆ ಬಿದ್ದವರಂತೆ ಜಾನುವಾರುಗಳನ್ನು ವಾದ್ಯಗೋಷ್ಠಿಯ ಮೆರವಣಿಗೆಯ ಮೂಲಕ ಕರೆತಂದಿರುವುದು ವಿಶೇಷವಾಗಿದೆ.
ಚುಂಚನಕಟ್ಟೆಯ ಜಾನುವಾರು ಜಾತ್ರೆಯಲ್ಲಿ ಸದ್ಯ ಪಶುಸಂಗೋಪನೆ ಇಲಾಖೆಯ ಮಾಹಿತಿಯ ಪ್ರಕಾರ ಸುಮಾರು 8ರಿಂದ 10 ಸಾವಿರಕ್ಕೂ ಅಧಿಕ ಜೋಡಿ ಎತ್ತುಗಳು ಬಂದಿದ್ದು, ಈಗಾಗಲೇ ಹಲವು ಎತ್ತುಗಳ ಖರೀದಿಯೂ ನಡೆದು ಹೋಗಿದೆ. ರೈತರು ತಮ್ಮ ರಾಸುಗಳ ಮೇಲಿರುವ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ರಾಸುಗಳಿಗೆ ಬೃಹತ್ ಶಾಮಿಯಾನ, ವಿದ್ಯುತ್ ಅಲಂಕಾರಿಕ ಚಪ್ಪರಗಳನ್ನು ಹಾಕಿಸಿ ಜಾತ್ರೆಗೆ ಕಳೆಕಟ್ಟುತ್ತಿದ್ದಾರೆ. ಹೀಗಾಗಿಯೇ ಈ ಜಾತ್ರೆ ಯಶಸ್ವಿಯಾಗಿದೆ. ಇದನ್ನು ಗಂಡು ರಾಸುಗಳ ಜಾತ್ರೆ ಎಂದೇ ಕರೆಯಲಾಗುತ್ತಿದೆ. ಈ ಜಾತ್ರೆಯಲ್ಲಿ ಎತ್ತುಗಳೇ ಹೆಚ್ಚಾಗಿ ಭಾಗವಹಿಸುವುದು ವಿಶೇಷವಾಗಿದೆ.
ವಾದ್ಯಗೋಷ್ಠಿಯ ಮೆರವಣಿಗೆಯಲ್ಲಿ ಆಗಮಿಸಿದ ಎತ್ತುಗಳು
ಇಲ್ಲಿಗೆ ಎತ್ತುಗಳನ್ನು ಖರೀದಿ ಮಾಡಿ ಕೊಂಡೊಯ್ಯಲು ಕೊಡಗು, ಗದಗ, ಹುಬ್ಬಳ್ಳಿ, ಧಾರವಾಡ, ಕಲಬರುಗಿ, ವಿಜಯಪುರ ದಾವಣಗೆರೆ, ಶಿವಮೊಗ್ಗ ಸೇರಿ ದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಮತ್ತು ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇನ್ನಿತರ ಕಡೆಯಿಂದ ಜನರು ಬಂದಿದ್ದು, ಕೋಟ್ಯಂತರ ರೂ.ಗಳ ವ್ಯವಹಾರ ನಡೆಯುತ್ತಿದೆ.

ಇಲ್ಲಿ ಮಧ್ಯವರ್ತಿಗಳು ಒಂದಷ್ಟು ಲಾಭ ಮಾಡುತ್ತಿದ್ದಾರೆ. ಈಗಾಗಲೇ ಸಾವಿರಾರು ರೈತರು ತಮ್ಮ ಎತ್ತುಗಳನ್ನು ಜಾತ್ರಾ ಮಾಳಕ್ಕೆ ಕರೆತರುವಾಗ ಸಾವಿರಾರು ರೂ ಖರ್ಚು ಮಾಡಿ ನೂರಾರು ಮಂದಿಗೆ ಔತಣಕೂಟವನ್ನು ಏರ್ಪಡಿಸಿ ವಾದ್ಯ ಗೋಷ್ಠಿ ಮತ್ತು ಅದ್ಧೂರಿ ಮೆರವಣಿಗೆ ಮೂಲಕ ತಂದಿರುವುದು ವಿಶೇಷ.
ಕೆಲವು ರಾಸುಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದ್ದು, ಅವುಗಳ ಪೋಷಣೆಯೇ ದುಬಾರಿಯಾಗಿದೆ. ಅವುಗಳಿಗೆ ನಿತ್ಯವೂ ಹಾಲು, ರವೆ, ತುಪ್ಪ ಮತ್ತಿತರ ಪೌಷ್ಟಿಕಾಂಶಭರಿತ ಮೃಷ್ಟಾನ್ನ ಭೋಜನ ಉಣಬಡಿಸಿ ಆರೈಕೆ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ರಾಸುಗಳಿಗೆ ಯಾವುದೇ ರೋಗ ರುಜಿನಗಳು ಬಾರದಂತೆ ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರಗೆ ಕೆ.ಆರ್.ನಗರ ತಾಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಮಂಜುನಾಥ್ ಅವರ ನೇತೃತ್ವದಲ್ಲಿ ಪಶುವೈದ್ಯಾಧಿಕಾರಿಗಳಾದ ಮೂಲೆಪೆಟ್ಲು ಸಂಜಯ್, ಪಶುಪರಿಕ್ಷಕರಾದ ಎಚ್.ಜೆ. ಸಿದ್ದರಾಜು, ಚಿಕ್ಕೇಗೌಡ, ರೇವಣ್ಣ, ಎಚ್.ಜೆ.ರಾಮೇಗೌಡ, ಸಿಬ್ಬಂದಿಗಳಾದ ಸೋಮಶೇಖರ್, ಋಷಿಕುಮಾರ, ಪ್ರತಾಪ್ ಮೊದಲಾದವರ ತಂಡವನ್ನೊಳಗೊಂಡ ತಾತ್ಕಾಲಿಕ ಪಶು ಚಿಕಿತ್ಸಾಲಯವನ್ನು ತೆರೆಯಲಾಗಿದೆ.
ಲಕ್ಷ ಲಕ್ಷ ಬೆಲೆ ಬಾಳುವ ದುಬಾರಿ ಎತ್ತುಗಳು
ಜಾನುವಾರು ಜಾತ್ರೆಯಲ್ಲಿ ಅಡ್ಡಾಡಿ ಬಂದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳು ರಾಸುಗಳು ಆಕರ್ಷಿಸುತ್ತಿವೆ. ಆ ಪೈಕಿ ಚಿಕ್ಕಕೊಪ್ಪಲು ಪುನೀತ್ ಧನಪಾಲ್, ಹಳಿಯೂರು ಪುನೀತ್ ಪುಟ್ಟರಾಜು, ಚಿಕ್ಕಕೊಪ್ಪಲು ಗ್ರಾಮದ ಚಿರಂತ್ ಸಣ್ಣಮಾದ , ಹಾಸನದ ಚಿಕ್ಕೇಗೌಡ, ಬೆಣಗನಹಳ್ಳಿ ಗ್ರಾಮದ ಜಗದೀಶ್, ಹಾಡ್ಯ ಗ್ರಾಮದ ಮಹದೇವ್, ಹೆಬ್ಬಾಳು ಪಾಪೇಗೌಡ, ಹಿರಿಕ್ಯಾತನಹಳ್ಳಿ ಶೀನೇಗೌಡ, ಅರಲಗೂಡು ಮಲ್ಲಿನಾಥ ಪುರ ನಾರಾಯಣಗೌಡ, ಕಾಳೇನಹಳ್ಳಿ ಪ್ರಭಾಕರ್, ಹೊನ್ನವಳ್ಳಿಯ ಮಹೇಶ್, ಹಾಸನದ ಕಿತ್ತಾನೆಯ ಲೋಕೇಶ್, ಕುಶಾಲನಗರದ ಹೆಬ್ಬಾಲೆ ಮೊಗ್ಗಣ್ಣ, ತೊರೆನೂರು ಪೊಲೀಸ್ ಸಂತೋಷ್, ಅಂಕನಹಳ್ಳಿ ಜನಾರ್ಧನ್, ಚಿಕ್ಕಹನಸೋಗೆ ಅಭಿ, ಮಿರ್ಲೆ ಶಿವಣ್ಣ, ಎಂ.ಸಿ.ಕುಮಾರ್, ಬಂಡಹಳ್ಳಿ ಪ್ರಕಾಶ್, ರಘು ಸೇರಿದಂತೆ ಮತ್ತಿತರರ ರಾಸುಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿವೆ.
ಇನ್ನು ಜಾತ್ರೆಮಾಳದಲ್ಲಿ ಅಲಕಾಂರಗೊಂಡ ರಾಸುಗಳನ್ನು ಕ್ಯಾಟ್ ವಾಕ್ ಮಾದರಿಯಲ್ಲಿ ರಸ್ತೆಗಳಲ್ಲಿ ನಡೆಸಿ ತಮ್ಮ ರಾಸುಗಳ ಬಗ್ಗೆ ಖರೀದಿದಾರರನ್ನು ಆಕರ್ಷಿಸುವ ಪ್ರಯತ್ನವನ್ನು ರೈತರು ಮಾಡುತ್ತಿದ್ದಾರೆ. ಜಾತ್ರೆ ಹಿನ್ನಲೆಯಲ್ಲಿ ಚುಂಚನಕಟ್ಟೆ ಬಸವನ ವೃತ್ತ, ಶ್ರೀರಾಮ ದೇವಾಲಯ ಸುತ್ತ, ಜಾತ್ರಾ ಮಾಳದಲ್ಲಿ ವರ್ಣರಂಜಿತ ವಿದ್ಯುದ್ದೀಪದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದೆಲ್ಲದರ ನಡುವೆ ಪೊಲೀಸರು ಬಂದೋಬಸ್ತ್ ಮಾಡಿದ್ದು ಕಳ್ಳಕಾಕರ ಮೇಲೆ ನಿಗಾವಿರಿಸಿದ್ದಾರೆ. ಒಟ್ಟಾರೆ ಜಾತ್ರೆ ಅಂತಿಮ ಹಂತಕ್ಕೆ ಬಂದಿದ್ದು ಜನ ಸಾಗರವೇ ಹರಿದು ಬರುತ್ತಿದೆ.












Click it and Unblock the Notifications