ಕ್ರಿಸ್‌ಮಸ್, ಹೊಸ ವರ್ಷಾಚರಣೆ: ಮೈಸೂರಿನಲ್ಲಿ ಡಿ.25ರಿಂದ ಫಲಪುಷ್ಪ ಪ್ರದರ್ಶನ
ಮೈಸೂರು, ಡಿಸೆಂಬರ್ 24: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಇದರ ಬೆನ್ನೆಲ್ಲೇ ಮೈಸೂರಿನಲ್ಲಿ ನಾಳೆಯಿಂದ ನಡೆಯಲಿರುವ ಫಲಪುಷ್ಪ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಫಲಪುಷ್ಪ ಪ್ರದರ್ಶನ ಹಾಗೂ ಸಾಂಸ್ಕೃತಿಕ ಮೇಳವನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಡಿ.25ರಿಂದ ಜ.2ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ 15 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು, ವಿವಿಧ ಜಾತಿಯ 4 ಲಕ್ಷ ಗುಲಾಬಿ ಹೂವುಗಳನ್ನು ಬಳಸಿಕೊಂಡು ಅಲಂಕಾರಿಕ ಹೂವುಗಳಿಂದ ರಾಮ ಮಂದಿರದ ಮಾದರಿ ನಿರ್ಮಾಣ, ಚಾಮುಂಡಿ, ನಂದಿ, ಮಹಿಷಾಸುರ, ಚಾಮರಾಜ ಒಡೆಯರ್, ಹೂವಿನ ಪಲ್ಲಕ್ಕಿ, ಖೆಡ್ಡಾ ಆಪರೇಷನ್ ಸೇರಿ ಹಲವು ಕಲಾಕೃತಿಗಳನ್ನು ನಿರ್ಮಿಸುವ ಕಾರ್ಯದಲ್ಲಿ ನುರಿತ ಕಲಾವಿದರು ಶುಕ್ರವಾರ ದಿನವಿಡಿ ಶ್ರಮಿಸಿದರು.

ಶನಿವಾರ ಫಲಪುಷ್ಪ ಪ್ರದರ್ಶನ ಉದ್ಘಾಟನೆ
ಮೈಸೂರು ಅರಮನೆ ಆಡಳಿತ ಮಂಡಳಿ ವತಿಯಿಂದ ನಡೆಸಲಾಗುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಡಿ.25ರಂದು ಚಾಲನೆ ದೊರೆಯಲಿದೆ. ಶನಿವಾರ ಸಂಜೆ 4:30ಕ್ಕೆ ನಡೆಯುವ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ಶಾಸಕ ಎಸ್.ಎ. ರಾಮದಾಸ್, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹೋಟೆಲ್ ಮಾಲೀಕರ ಸಂಘದ ವಿರೋಧ
ಅರಮನೆ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಇಲ್ಲಿ ಜನರಿಗೆ ಒಂದು ಕಾನೂನು, ಅಧಿಕಾರಿಗಳಿಗೆ ಮತ್ತೊಂದು ಕಾನೂನು ಎಂಬಂತಾಗಿದೆ. ಹೊಸ ವರ್ಷಾಚರಣೆ ನಡೆಸದಂತೆ ಹೋಟೆಲ್‌ಗಳಿಗೆ ನಿರ್ಬಂಧ ಹೇರಿರುವ ಸರ್ಕಾರ, ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ಮುಂದಾಗಿದೆ.

ಹಾಗಾದರೆ ಹೋಟೆಲ್‌ನಲ್ಲಿ ಹೆಚ್ಚಾಗುವ ಕೊರೊನಾ ಅರಮನೆ ಅಂಗಳಕ್ಕೆ ಬರುವುದಿಲ್ಲವಾ? ಎಂದು ಪ್ರಶ್ನಿಸಿರುವ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಕೊರೊನಾ, ಓಮಿಕ್ರಾನ್ ಆತಂಕ ಲೆಕ್ಕಿಸದ ಮೈಸೂರು ಜಿಲ್ಲಾಡಳಿತ, ಈ ಆತಂಕದ ನಡುವೆಯೂ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಸುತ್ತಿದೆ.
ಎಲ್ಲಾ ಹೋಟೆಲ್‌ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿರುವ ಸರ್ಕಾರ, ಶೇ.50 ಜನರಿಗೆ ಸೀಮಿತಗೊಳಿಸಿದೆ. ಆದರೆ ಮೈಸೂರು ಅರಮನೆ ಆವರಣದಲ್ಲಿ ಸಾವಿರಾರು ಜನರು ಭಾಗವಹಿಸಲು ಅವಕಾಶ ನೀಡಿದೆ. ಇದು ಯಾವ ರೀತಿಯ ಗೈಡ್‌ಲೈನ್ಸ್ ಎಂಬುದೇ ತಿಳಿಯುತ್ತಿಲ್ಲ? ಜಿಲ್ಲಾಡಳಿತಕ್ಕೆ ಒಂದು ಪ್ರತ್ಯೇಕ ಮಾರ್ಗಸೂಚಿ ಏನಾದರೂ ಬಂದಿದೆಯೇ? ಹೋಟೆಲ್ ಉದ್ಯಮಕ್ಕೆ ಈ ರೀತಿಯ ತಾರತಮ್ಯ, ನಿರ್ಬಂಧ ವಿಧಿಸಿರುವುದು ಸರಿಯೇ? ಎಂದು ಸಿ. ನಾರಾಯಣಗೌಡ ಪ್ರಶ್ನಿಸಿದ್ದಾರೆ.

ಹೋಟೆಲ್ ಉದ್ಯಮಕ್ಕೆ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications