ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನ ಕುಪ್ಪಣ್ಣ ಪಾರ್ಕ್‌ನಲ್ಲಿ
ಮೈಸೂರು, ಆ.4 : ಮೈಸೂರಿನಲ್ಲಿ ನಾಡಹಬ್ಬ ದಸರಾದ ತಯಾರಿ ಆರಂಭಗೊಂಡಿದೆ. ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನವನ್ನು ಮೊದಲ ಬಾರಿಗೆ ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. ಮೂರು ದಶಕಗಳಿಂದ ಕರ್ಜನ್ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿತ್ತು, ಆದರೆ, ಈ ಬಾರಿ ಸ್ಥಳ ಬದಲಾವಣೆ ಮಾಡಲಾಗಿದೆ.
ದಸರಾ ಫಲಪುಷ್ಪ ಪ್ರದರ್ಶನದ ಸ್ಥಳವನ್ನು ಬದಲಾವಣೆ ಮಾಡಬೇಕು ಎಂದು ಕಳೆದ ಮೂರು ವರ್ಷದಿಂದ ಚರ್ಚೆ ನಡೆಯುತ್ತಿತ್ತು. ಈ ಬಾರಿ ಅದು ಅನುಷ್ಠಾನಕ್ಕೆ ಬಂದಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ನಡುವೆ ಈ ಕುರಿತು ಮಾತುಕತೆ ನಡೆದಿದೆ. ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸುವುದಕ್ಕೆ ಸಿದ್ಧತೆಯನ್ನು ಸಹ ಆರಂಭಿಸಲಾಗಿದೆ.

ಕರ್ಜನ್ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ಅಗತ್ಯ ಸೌಲಭ್ಯಗಳಿತ್ತು. ಆದರೆ, ದಸರಾ ಸಮಯದಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುವುದರಿಂದ ಫಲಪುಷ್ಪ ಪ್ರದರ್ಶನಕ್ಕೆ ಇಕ್ಕಟ್ಟಾಗಲಿದೆ. ಸಂಚಾರಕ್ಕೂ ಅಡಚಣೆಯಾಗಲಿದೆ ಮತ್ತು ಭದ್ರತೆ ಕೊಡುವುದು ಕಷ್ಟ ಎಂದು ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಇದರ ಅನ್ವಯ ಪ್ರದರ್ಶನವನ್ನು ಕುಪ್ಪಣ್ಣ ಪಾರ್ಕ್ ಗೆ ಸ್ಥಳಾಂತರ ಮಾಡಲಾಗಿದೆ. [ಅರಮನೆ ಸಂಕಷ್ಟ ನೆನೆದು ಕಣ್ಣೀರಿಟ್ಟ ಮೈಸೂರು ರಾಣಿ]
4 ಪಟ್ಟು ದೊಡ್ಡದು : ಇಷ್ಟು ದಿನ ಪ್ರದರ್ಶನ ನಡೆಯುತ್ತಿದ್ದ ಕರ್ಜನ್ ಪಾರ್ಕ್ ವಿಸ್ತೀರ್ಣ 4 ಎಕರೆ. ಆದರೆ, ಕುಪ್ಪಣ್ಣ ಪಾರ್ಕ್, 17 ಎಕರೆ ಪ್ರದೇಶದಲ್ಲಿದೆ. ಕುಪ್ಪಣ್ಣ ಪಾರ್ಕ್ ನಾಲ್ಕು ಪಟ್ಟು ದೊಡ್ಡದಾಗಿರುವುದರಿಂದ ಹಲವಾರು ವೈವಿಧ್ಯತೆಯ ಕಾರ್ಯಕ್ರಮವನ್ನು ರೂಪಿಸಲು ತೋಟಗಾರಿಕಾ ಇಲಾಖೆ ಚಿಂತನೆ ನಡೆಸುತ್ತಿದೆ. [ದಸರಾ ಉದ್ಘಾಟನೆ: ಕಾರ್ನಾಡ್ ಬೇಡ, ಭೈರಪ್ಪ ಇರಲಿ]
ಜಿಲ್ಲಾ ಪಂಚಾಯಿತಿ ವತಿಯಿಂದ ಫಲಪುಷ್ಪ ಪ್ರದರ್ಶನಕ್ಕಾಗಿ ಈಗಾಗಲೇ 10 ಲಕ್ಷ ಅನುದಾನ ಬಿಡುಗಡೆಯಾಗಿದೆ. 2013ರಲ್ಲಿ ಪ್ರವೇಶ ಶುಲ್ಕದಿಂದ 26 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಅದೆಲ್ಲವನ್ನೂ ಬಳಕೆ ಮಾಡಿಕೊಂಡು ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಲಾಗಿದೆ.
ಕುಪ್ಪಣ್ಣ ಪಾರ್ಕ್ ನಲ್ಲಿ ಸ್ಥಳವಕಾಶ ಹೆಚ್ಚಾಗಿರುವ ಕಾರಣ ಈ ಬಾರಿ ಹಲವು ವಿಧದ ಹೂವುಗಳನ್ನು ಪ್ರದರ್ಶಿಸಲು ತೋಟಗಾರಿಕಾ ಇಲಾಖೆ ಯೋಜನೆ ರೂಪಿಸಿದೆ. ಪ್ರತಿ ವರ್ಷ 30,000 ವಿವಿಧ ತಳಿಯ ಹೂಗಳ ಪ್ರದರ್ಶನವಿರುತ್ತಿತ್ತು. ಈ ಬಾರಿ ಅದನ್ನು 70 ಸಾವಿಕ್ಕೆ ಹೆಚ್ಚಿಸಲಾಗಿದೆ. ಸುಮಾರು 30 ಸಾವಿರ ಪಾಟ್ ಗಳನ್ನು ಉತ್ಸವಕ್ಕಾಗಿ ಸಿದ್ಧಗೊಳಿಸಲಾಗುತ್ತಿದೆ.












Click it and Unblock the Notifications