ಆಪ್ತರ ನಡುವಿನ ಸ್ಪರ್ಧೆಗೆ ಚಾಮುಂಡೇಶ್ವರಿ ಕ್ಷೇತ್ರ ಸನ್ನದ್ಧ: ಗೆಲುವಿನ ಮಾಲೆ ಯಾರಿಗೆ
ಮೈಸೂರು, ಏಪ್ರಿಲ್ 29: ವರುಣಾ ಬಳಿಕ ಮೈಸೂರು ಜಿಲ್ಲೆ ಮಾತ್ರವಲ್ಲ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ್ತೊಂದು ಪ್ರಮುಖ ವಿಧಾನಸಭಾ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಈ ಬಾರಿ ಇಬ್ಬರು ಆಪ್ತರ ನಡುವಿನ ಸ್ಪರ್ಧೆಗೆ ವೇದಿಕೆಯಾಗಿ ಮಾರ್ಪಟ್ಟಿದೆ.
ಕಳೆದ 2018ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಿ ಸೋತಿದ್ದರು. ಅವರ ವಿರುದ್ಧ ಜೆಡಿಎಸ್‌ನ ಜಿಟಿ ದೇವೇಗೌಡ ಅವರು ಜಯಗಳಿಸಿದ್ದರು. ಆದರೆ ಈಗ ಜಿಟಿಡಿ ಅವರ ಆಪ್ತರಾಗಿದ್ದ ಮಾವಿನಹಳ್ಳಿ ಸಿದ್ದೇಗೌಡ ಅವರೊಂದಿಗೆ ಸ್ಪರ್ಧೆ ಎದುರಾಗಿದೆ. ಜೆಡಿಎಸ್‌ನಲ್ಲೇ ಇದ್ದ ಸಿದ್ದೇಗೌಡ ಅವರು ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‌ಗೆ ಸೇರಿದ್ದರಿಂದ ಪಕ್ಷ ಅವರಿಗೆ ಟಿಕೆಟ್ ನೀಡಿತು. ಹಾಗಾಗಿ ಈಗ ಜಿಟಿ ದೇವೇಗೌಡ ಹಾಗೂ ಸಿದ್ದೇಗೌಡ ಅವರ ನಡುವೆ ನೇರ ಹಣಾಹಣಿ ನಡೆಯಲಿದೆ.

ಒಕ್ಕಲಿಗ ಸಮುದಾಯ ಮತಗಳು ಅಧಿಕ:
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಮತಗಳು ಅಧಿಕ. ಹಾಗಾಗಿ ಕಾಂಗ್ರೆಸ್‌ನಿಂದ ಮಾವಿನಹಳ್ಳಿ ಸಿದ್ದೇಗೌಡ, ಬಿಜೆಪಿಯಿಂದ ಕವೀಶ್‌ಗೌಡ ಹಾಗೂ ಜೆಡಿಎಸ್‌ನಿಂದ ನಿರೀಕ್ಷೆಯಂತೆ ಜಿಟಿ ದೇವೇಗೌಡ ಅವರು ಕಣದಲ್ಲಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ಕವೀಶ್‌ಗೌಡ ಅವರು ಕ್ಷೇತ್ರಕ್ಕೆ ಹೊಸಬರು. ಇವರು ಮಾಜಿ ಶಾಸಕ ವಾಸು ಅವರ ಮಗ. ತಮ್ಮ ರಾಜಕೀಯ ಜೀವನವನ್ನು ಇಲ್ಲಿ ಆರಂಭಿಸಲು ಬಂದಿದ್ದಾರೆ.
ಈಗ ನೇರ ಸ್ಫರ್ಧೆ ಇರುವುದು ಜಿಟಿ ದೇವೇಗೌಡ ಹಾಗೂ ಮಾವಿನಹಳ್ಳಿ ಸಿದ್ದೇಗೌಡ ಅವರದ್ದು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ನಗರ ಮತ್ತು ಹಳ್ಳಿ ಎರಡೂ ಪ್ರದೇಶಗಳನ್ನು ಒಳಗೊಂಡಿದೆ. ಸಿದ್ದರಾಮಯ್ಯ ಅವರ ನೆಚ್ಚಿನ ಕ್ಷೇತ್ರವಾದ ಇದು 2018ರಲ್ಲಿ ಅವರ ಕೈ ಹಿಡಿಯಲಿಲ್ಲ, ಹಾಗಾಗಿ ಅವರು ಇಲ್ಲಿಂದ ಕಣಕ್ಕಿಳಿಯಲು ಮತ್ತೊಮ್ಮೆ ಮನಸ್ಸು ಮಾಡಲಿಲ್ಲ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಜಿಟಿ ದೇವೇಗೌಡ ಅವರು 36,000 ಮತಗಳ ಅಂತರದಿಂದ ಸೋಲಿಸಿದ್ದರು.
ಜೆಡಿಎಸ್ ಭದ್ರಜೋಟೆ ಇದು:
ಚಾಮುಂಡೇಶ್ವರಿ ಕ್ಷೇತ್ರಕ್ಕೆ 143 ಹಳ್ಳಿಗಳು, ನಗರದ ರಾಮಕೃಷ್ಣನಗರ, ದಟ್ಟಗಳ್ಳಿ, ಚಾಮುಂಡಿ ಬೆಟ್ಟ, ಬೋಗಾದಿ ಸೇರುತ್ತವೆ. ಇಲ್ಲಿಒಕ್ಕಲಿಗ ಸಮುದಾಯಕ್ಕೆ ಸೇರಿದ ಮತದಾರರು ಹೆಚ್ಚಿದ್ದಾರೆ. ಕುರುಬ, ನಾಯಕ, ದಲಿತರ, ವೀರಶೈವ ಲಿಂಗಾಯತರು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಚಾಮುಂಡೇಶ್ವರಿಯಲ್ಲಿ ಇದುವರೆಗೂ 13 ಚುನಾವಣೆಗಳು ಆಗಿವೆ. ಇಲ್ಲಿ ಹೆಚ್ಚು ಬಾರಿ ಕಾಂಗ್ರೆಸ್ ಗೆದ್ದಿದೆ. ಆದರೆ ಕಳೆದ ವರ್ಷಗಳಲ್ಲಿ ಇದು ಜೆಡಿಎಸ್ ಭದ್ರಜೋಟೆಯಾಗಿ ಮಾರ್ಪಟ್ಟಿದೆ.

ಕ್ಷೇತ್ರದಲ್ಲಿ ಸಿದ್ದೇಗೌಡ ಹೋಲ್ಡ್:
ಜೆಡಿಎಸ್‌ನಲ್ಲಿದ್ದಾಗ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಜಿಟಿ ದೇವೇಗೌಡ ಆಪ್ತರಾಗಿದ್ದರು. ಆದರೆ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಕ್ಷೇತ್ರದಲ್ಲಿ ಸಿದ್ದೇಗೌಡ ಅವರ ಹೋಲ್ಡ್ ಗೊತ್ತಿದ್ದೆ ಸಿದ್ದರಾಮಯ್ಯ ಅವರು ಜಿಟಿ ದೇವೇಗೌಡ ಅವರ ವಿರುದ್ಧ ಟಿಕೆಟ್ ಕೊಡಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿರುವ ಮೂವರು ಒಕ್ಕಲಿಗ ಸಮುದಾಯದವರು. ಹೀಗಾಗಿ ಈ ಸಮುದಾಯದ ಮತಗಳು ಒಡೆಯುವ ಸಾಧ್ಯತೆ ಇದೆ. ಈಗ ಯಾರಿಗಾದರೂ ಅನ್ಯ ಸಮುದಾಯಗಳನ್ನು ಒಲೈಸಲೇಬೇಕಾದ ಅನಿವಾರ್ಯತೆ ಇದೆ.
ಜಿಟಿ ದೇವೇಗೌಡ ಇಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ, ತಮ್ಮ ಬೆಂಬಲಿಗರು, ಕಾರ್ಯಕರ್ತರನ್ನು ಚುನಾವಣೆ ಹೊತ್ತಲ್ಲಿ ಎಲ್ಲೂ ಬೆಂಬಲ ಹಿಂತೆಗೆಯದಂತೆ ನೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅವರು ಮಾಡಿರುವ ಕೆಲಸಗಳಿಂದ ಹಾಗೂ ಜಾತಿಯೂ ಇರುವುದರಿಂದ ಮತ್ತೆ ಅವರು ಗೆಲ್ಲಬಹುದು ಎನ್ನುತ್ತವೆ ಸಮೀಕ್ಷೆಗಳು.
ಸಿದ್ದರಾಮಯ್ಯ ಮಾತುಗಳ ಪ್ರಭಾವ:
ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಳೆಯ ಬೇರುಗಳು ಇಲ್ಲಿ ಇರುವುದರಿಂದ ಮಾವಿನಹಳ್ಳಿ ಸಿದ್ದೇಗೌಡ ಗೆದ್ದರೂ ಗೆಲ್ಲಬಹುದು. ಇತ್ತೀಚೆಗೆ ಸಿದ್ದರಾಮಯ್ಯ ಇಲ್ಲಿ ಬಂದು. ಕಳೆದ ಬಾರಿ ಏಕೆ ನನ್ನನ್ನು ಸೋಲಿಸಿದ್ದೀರಿ. ನಾನೇನು ತಪ್ಪು ಮಾಡಿದೆ. ಈ ಬಾರಿಯಾದರೂ ನಾನೇ ಎಂದುಕೊಂಡು ಸಿದ್ದೇಗೌಡರನ್ನು ಬೆಂಬಲಿಸಿ ಎಂದು ಹೇಳಿದ್ದಾರೆ. ಹೀಗಾಗಿ ಮಾವಿನಹಳ್ಳಿ ಸಿದ್ದೇಗೌಡ ಅವರ ಮೇಲೆ ಮತದಾರರು ಕರುಣೆ ತೊರಿದರೆ ಗೆಲ್ಲುವ ಅವಕಾಶ ಇದ್ದೇ ಇದೆ.












Click it and Unblock the Notifications