ಲೋಕಸಭೆಯಲ್ಲಿ ಬಿಜೆಪಿ 28 ಸ್ಥಾನ ಗೆಲ್ಲುವುದಷ್ಟೇ ನಮ್ಮ ಗುರಿ- ಮಾಜಿ ಶಾಸಕ ಸಿ.ಟಿ ರವಿ
ಮೈಸೂರು, ಆಗಸ್ಟ್ 19: ನಮ್ಮ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿರುವ ಹಿರಿಯರಿಗೆ ಸೂಕ್ತ ಸ್ಥಾನಮಾನ ದೊರೆಯದಿರುವಾಗ ಬೇರೆ ಪಕ್ಷದಿಂದ ಹೋದವರಿಗೆ ಯಾವ ಸ್ಥಾನ ದೊರೆಯಲು ಸಾಧ್ಯ? ಹಾಗಾಗಿ ಬೇರೆ ಪಕ್ಷದವರು ಅಲ್ಲಿಗೆ ಹೋಗುವುದಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ಇರುವಾಗ ಆ ಪಕ್ಷಕ್ಕೆ ಬೇರೆಯವರು ಏಕೆ ಹೋಗುತ್ತಾರೆ? ಹೋಗೋರನ್ನು ರಾಜಕೀಯ ಜಾಣ್ಮೆ ಇರೋರು, ಬುದ್ಧಿವಂತರು ಎಂದು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಲ್ಲಿನ ಹಿರಿಯ ಶಾಸಕರಿಗೆ ಸಮಾಧಾನವಿಲ್ಲ. ಇಲ್ಲಿಂದ ಹೋದವರಿಗೆ ಏನು ಸಮಾಧಾನ ಸಿಗುತ್ತದೆ ಎಂದು ಹೇಳಿದರು.
ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್‌ಗೆ ಮರಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಮಾತನಾಡಿದ ಸಿ.ಟಿ ರವಿ, ಎಸ್.ಟಿ.ಸೋಮಶೇಖರ್ ಅವರ ಜೊತೆ ಮಾತನಾಡುತ್ತೇನೆ. ಅವರ ಭಾವನೆ ಏನಿದೆ ಎಂದು ತಿಳಿದುಕೊಂಡು ಉಳಿದವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅವರು, ನಾನು ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿಲ್ಲ. ಪಕ್ಷ ಯಾವುದೇ ರೀತಿಯ ಕೆಲಸ ಕೊಟ್ಟರೆ ಆ ಕೆಲಸ ಮಾಡುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದಷ್ಟೇ ನಮ್ಮ ಗುರಿ ಎಂದರು.
ಲೋಕಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿ 28 ಸ್ಥಾನ ಗೆಲ್ಲಬೇಕು. ಅದಕ್ಕೆ ಏನು ಅಗತ್ಯ ಇದೆಯೋ ಅದನ್ನೆಲ್ಲಾ ಮಾಡುತ್ತೇವೆ. ನಮ್ಮ ಹತ್ತಿರ ಮೈತ್ರಿ ಪ್ರಶ್ನೆ ಬಂದಿಲ್ಲ. ನಾವು 28 ಸ್ಥಾನ ಗೆಲ್ಲೋಕೆ ಏನು ಬೇಕು ಅದನ್ನು ಮಾಡುತ್ತಿದ್ದೇವೆ ಎಂದರು.
ಯತ್ನಾಳ್ ಹೇಳಿದ ಭವಿಷ್ಯದ ಬಗ್ಗೆ ಕಾಂಗ್ರೆಸ್‌ಗೆ ಆತಂಕ
ರಾಜ್ಯದಲ್ಲಿ ಆಪರೇಷನ್ ಹಸ್ತ ಚಾಲ್ತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವ ಭವಿಷ್ಯದ ಬಗ್ಗೆ ಕಾಂಗ್ರೆಸ್‌ಗೆ ಆತಂಕ ಇರಬಹುದು. ಐದಾರು ತಿಂಗಳಲ್ಲಿ ಈ ಕಾಂಗ್ರೆಸ್ ಸರ್ಕಾರ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ. ಜನ ನಮಗೆ ಎರಡು ಬಾರಿಯೂ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಕಾಂಗ್ರೆಸ್‌ಗೆ ನಿರ್ಭಿತವಾಗಿರಿ ಎಂದು 135 ಸ್ಥಾನ ಕೊಟ್ಟಿದ್ದಾರೆ. ಆದರೂ ಕಾಂಗ್ರೆಸ್‌ನವರಿಗೆ ಭಯ ಕಾಡುತ್ತಿದೆ ಎಂದರೆ ಒಳಗೆ ಏನೋ ಸರಿಯಿಲ್ಲ ಅನ್ನಿಸುತ್ತದೆ.. ಅವರ ಪಕ್ಷದ ಒಳಗಡೆ ಭೂಕಂಪವಾದರೆ ನಮಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.












Click it and Unblock the Notifications