'ನಾನು ಕಳ್ಳ ಅಲ್ಲ, ನನ್ನ ಬಿಟ್ಟುಬಿಡಿ' ಎಂದ ಸಿಎಂ ಸಿದ್ದರಾಮಯ್ಯ: ಬಿಜೆಪಿ ನಾಯಕ
ಬೆಂಗಳೂರು, ಆಗಸ್ಟ್ 10: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೂಟಿ ಮಾಡಿದ 14 ನಿವೇಶನ ಹಾಗೂ ಅವರ ಬೆಂಬಲಿಗರು ಲೂಟಿ ಮಾಡಿದ 400-500 ನಿವೇಶನಗಳನ್ನು ಸರ್ಕಾರಕ್ಕೆ ಮರಳಿ ನೀಡಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ತನಿಖೆ ಮುಗಿಯುವವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿರಬಾರದು, ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿರುವ ಅವರು, ಮುಡಾ ಹಗರಣದಲ್ಲಿ'ನಾನು ಕಳ್ಳ ಅಲ್ಲ, ನನ್ನ ಬಿಟ್ಟುಬಿಡಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗಿಂತ ಮುಂದೆ ಹೋಗಿ ಹೇಳುತ್ತಿದ್ದಾರೆ ಎಂದು ಜನಾಂದೋಲನ ಬಗ್ಗೆ ವ್ಯಂಗ್ಯವಾಡಿದರು.

ಈ ಹಿಂದೆ ರೀತಿ ಅಕ್ರಮ ಮಾಡಿದವರು ಕೂಡ ಇವರೇ. ಅದರ ಸಂಬಂಧ ರಚನೆಯಾದ ಕೆಂಪಣ್ಣ ಆಯೋಗವನ್ನು ಮುಚ್ಚಿ ಹಾಕಿದ್ದಾರೆ. ಈಗ ದೇಸಾಯಿ ಆಯೋಗ ರಚಿಸಿದ್ದಾರೆ ಎಂದು ದೂರಿದರು.
ಅಬ್ರಹಾಂ ವಂಚಕರೇ ಆಗಿದ್ದರೆ ಪ್ರಕರಣ ಹಿಂಪಡೆಯಿರಿ!
ಟಿ.ಜೆ.ಅಬ್ರಹಾಂ ಕಳ್ಳ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅಬ್ರಹಾಂ ಅವರನ್ನು ಬೆಂಬಲಿಸಿದ್ದರು. ಅಬ್ರಹಾಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಅಬ್ರಹಾಂ ವಂಚಕರಾಗಿದ್ದರೆ ಆ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯಲಿ.
ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಿದರೆ ಅವರು ಒಳ್ಳೆಯವರು, ಕಾಂಗ್ರೆಸ್ ವಿರುದ್ಧ ಪ್ರಕರಣ ಹಾಕಿದರೆ ಅವರು ಫ್ರಾಡ್ ಆಗುತ್ತಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ವಿರುದ್ಧ ಜನಾಕ್ರೋಶ: ಬಿಜೆಪಿ
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್ ಡಿಎ ಮೈತ್ರಿಕೂಟ ಕೈಗೊಂಡ ಮೈಸೂರು ಚಲೋ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಸತತ ಎಂಟು ದಿನಗಳ ಕಾಲ ನಡೆದ ಪಾದಯಾತ್ರೆಯುದ್ದಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಜನಾಕ್ರೋಶ ಎದ್ದು ಕಾಣುತ್ತಿತ್ತು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಹೋರಾಟ ನಿಲ್ಲಲ್ಲ
ಮೈಸೂರು ಚಲೋ ಪಾದಯಾತ್ರೆ ಇಂದಿಗೆ ಮುಕ್ತಾಯವಾಗಿರಬಹುದು. ಆದರೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ. ವಾಲ್ಮೀಕಿ ನಿಗಮದ ಹಗರಣ ಮತ್ತು ಮೂಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ದಲಿತರ ಹಣವನ್ನು, ಜನ ಸಾಮಾನ್ಯರಿಗೆ ಸಿಗಬೇಕಾದ ನಿವೇಶನಗಳನ್ನು ಲಪಟಾಯಿಸಿದವರಿಗೆ ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಮುಂದಿನ ಹೋರಾಟದ ಬಗ್ಗೆ ಶೀಘ್ರವೇ ಮಾಹಿತಿ
ಈ ಎಲ್ಲ ಹಗರಣಗಳ ಕೇಂದ್ರ ಬಿಂದು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ನೈತಿಕತೆ ಹೊತ್ತು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಮುಂದಿನ ಹಂತದ ಹೋರಾಟದ ರೂಪುರೇಷೆ ಈಗಾಗಲೇ ಸಿದ್ಧಗೊಳ್ಳುತ್ತಿದ್ದು ಶೀಘ್ರದಲೇ ಮಾಹಿತಿ ನೀಡುತ್ತೇವೆ ಎಂದರು.
ಚಳಿ, ಮಳೆ, ಗಾಳಿ ಎನ್ನದೆ, ಪೊಲೀಸರ ಬೆದರಿಕೆಗೆ ಜಗ್ಗದೆ ಈ ಪಾದಯಾತ್ರೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕನ್ನಡಿಗರ ಆಕ್ರೋಶಕ್ಕೆ ದನಿಗೂಡಿಸಿದ ಬಿಜೆಪಿ ಹಾಗು ಜೆಡಿಎಸ್ ಎರಡೂ ಪಕ್ಷಗಳ ಎಲ್ಲ ಮುಖಂಡರು ಹಾಗು ಕಾರ್ಯಕರ್ತರಿಗೆ ಆರ್. ಅಶೋಕ್ ಅವರು ಧನ್ಯವಾದ ಅರ್ಪಿಸಿದ್ದಾರೆ.












Click it and Unblock the Notifications