ಮೈಸೂರು ಬಿಜೆಪಿ ಭಿನ್ನಮತ ಪಕ್ಷಕ್ಕೆ ಮುಳುವಾಗುತ್ತಾ?

ಮೈಸೂರು, ಜನವರಿ 31; ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯಲ್ಲೀಗ ಅಶಿಸ್ತಿನ ತಾಂಡವ ಶುರುವಾಗಿದೆ. ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿರುವಾಗಲೇ ಭಿನ್ನಾಭಿಪ್ರಾಯ, ಗುಂಪುಗಾರಿಕೆ, ಅಸಮಾಧಾನಗಳು ಹೊರಬರುತ್ತಿರುವುದು ಹಿರಿಯ ನಾಯಕರ ನಿದ್ದೆಗೆಡಿಸುವಂತೆ ಮಾಡಿದೆ.

ಹಾಗೆ ನೋಡಿದರೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಎಂದರೆ ತಪ್ಪಾಗುತ್ತದೆ. ನಾಯಕರು ಭಿನ್ನಾಭಿಪ್ರಾಯ ತೋಡಿಕೊಂಡಾಗಲೆಲ್ಲ. ಅದನ್ನು ಶಮನಗೊಳಿಸುವ ಕೆಲಸವನ್ನು ಹಿರಿಯ ನಾಯಕರು ಮಾಡುತ್ತಾ ಬಂದಿದ್ದು, ಪಕ್ಷದೊಳಗಿನ ನಾಯಕರ ಸಿಟ್ಟು, ಸೆಡವು, ನೋವು ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ.

ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಹಣೆ ಬರಹವೇ ಹಾಗೆ. ವಿರೋಧ ಪಕ್ಷದಲ್ಲಿದ್ದಾಗಿನ ಒಗ್ಗಟ್ಟು ಆಡಳಿತಪಕ್ಷವಾಗುತ್ತಿದ್ದಂತೆಯೇ ಮಾಯವಾಗಿ ಬಿಡುತ್ತದೆ. ಅಧಿಕಾರಕ್ಕಾಗಿ ಹಾತೊರೆಯುವ ನಾಯಕರು ತಮಗೇನು ಲಾಭವಾಗುತ್ತದೆ? ಎಂಬ ಲೆಕ್ಕಾಚಾರಕ್ಕೆ ಬರುತ್ತಾರೆಯೇ ವಿನಃ ಜನ ಸೇವೆಯನ್ನು ಮರೆತು ಲಾಭನಷ್ಟದ ಲೆಕ್ಕಾಚಾರಕ್ಕೆ ಒತ್ತು ನೀಡುತ್ತಾರೆ.

ಜೊತೆಗೆ ಶಾಸಕರಿಗೆ ಸಚಿವ ಸ್ಥಾನದ ಬಯಕೆ ಆರಂಭವಾಗಿ ಅದಕ್ಕಾಗಿ ಲಾಭಿ ನಡೆಸುತ್ತಾರೆ. ಒಂದು ವೇಳೆ ಸಚಿವ ಸ‍್ಥಾನ ಸಿಕ್ಕರೂ ಲಾಭದಾಯಕ ಖಾತೆ ಸಿಕ್ಕಿಲ್ಲವೆಂಬ ಅಸಮಾಧಾನ. ಮತ್ತೊಂದೆಡೆ ಶಾಸಕರಲ್ಲಿ ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸದ ನೋವು ಕಾಡಲು ಆರಂಭಿಸುತ್ತದೆ. ಅದರ ಪರಿಣಾಮಗಳು ಒಮ್ಮೊಮ್ಮೆ ಅಸಮಾಧಾನಗಳಾಗಿ ಹೊರಹೊಮ್ಮಿ ಅವು ಬೀದಿ ರಂಪವಾಗಿ ಬಿಡುತ್ತವೆ.

ಬಿಎಸ್ ವೈ ಶ್ರಮಕ್ಕೆ ಸಿಗದ ಪ್ರತಿಫಲ

ಬಿಎಸ್ ವೈ ಶ್ರಮಕ್ಕೆ ಸಿಗದ ಪ್ರತಿಫಲ

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಬೀಳಿಸುವಲ್ಲಿ ಯಶಸ್ವಿಯಾದ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರೂ ಅವರಿಗೆ ಕೇಂದ್ರದಿಂದ ಹೇಳಿಕೊಳ್ಳುವಂತಹ ಯಾವುದೇ ಸಹಕಾರ ದೊರೆಯಲಿಲ್ಲ. ಜತೆಗೆ ಅವರನ್ನು ಹೈಕಮಾಂಡ್ ನಡೆಸಿಕೊಂಡ ರೀತಿಯನ್ನು ಜನತೆ ಕಣ್ಣಾರೆ ನೋಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಕಣ್ಣೀರಿಡುತ್ತಲೇ ಅಧಿಕಾರವನ್ನು ಬಿಟ್ಟುಕೊಟ್ಟ ಆ ದಿನವನ್ನು ಯಾರೂ ಮರೆಯಲಾರರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಅವರ ವಿರುದ್ಧವೇ ಒಂದಷ್ಟು ನಾಯಕರು ಹೈಕಮಾಂಡ್‌ಗೆ ದೂರು ನೀಡಿದ್ದರು. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು.

ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಅಸಮಾಧಾನ

ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಅಸಮಾಧಾನ

ಆ ನಂತರ ಬಿ. ಎಸ್. ಯಡಿಯೂರಪ್ಪರಿಂದ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಬಸವರಾಜಬೊಮ್ಮಾಯಿಗೆ ಅಧಿಕಾರ ನೀಡಿದ ಹೈಕಮಾಂಡ್ ರಾಜ್ಯದಲ್ಲಿ ಹೊಸದೊಂದು ರಾಜಕೀಯ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ಕೊರೊನಾ ಕಾಲದಲ್ಲಿ ಆಡಳಿತ ನಡೆಸುವುದು ಸುಲಭದ ಕೆಲಸವಲ್ಲ. ಆದರೆ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಬೊಮ್ಮಾಯಿ ಅಂತು ಇಂತು ಆರು ತಿಂಗಳು ಪೂರೈಸಿದ್ದಾರೆ.

ಅವರ ಸಚಿವ ಸಂಪುಟ ರಚನೆ ವೇಳೆ ಒಂದಷ್ಟು ಹಿರಿಯ ನಾಯಕರನ್ನು ಕೈಬಿಟ್ಟಿರುವ ಅಸಮಾಧಾನ ಒಳಗೊಳಗೆ ಕುದಿಯುತ್ತಿದೆ. ಜತೆಗೆ ಬಹಳಷ್ಟು ಶಾಸಕರು ತಾವು ಕೊನೆಯ ಅವಧಿಗಾದರೂ ಸಚಿವರಾಗಿ ಕಾರ್ಯ ನಿರ್ವಹಿಸುವ ಕನಸು ಕಾಣುತ್ತಿದ್ದು, ಆದರೆ ಅದು ಕೈಗೂಡದ ನೋವು ಅವರನ್ನು ಕಾಡುತ್ತಿದೆ. ಕಾಲ ಮಿಂಚಿಲ್ಲ. ಇವತ್ತಲ್ಲ ನಾಳೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಿದರೆ ತಾವು ಸಚಿವ ಸ್ಥಾನ ಅಲಂಕರಿಸಬಹುದು ಎಂಬ ನಿರೀಕ್ಷೆಯಲ್ಲಿಯೇ ಕಾಲವನ್ನು ಕಳೆಯುತ್ತಿದ್ದಾರೆ.

ಪಕ್ಷದಲ್ಲಿ ಅಸಮಾಧಾನ ಸ್ಪೋಟದ ಭಯ

ಪಕ್ಷದಲ್ಲಿ ಅಸಮಾಧಾನ ಸ್ಪೋಟದ ಭಯ

ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಮಯದಲ್ಲಿ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರಾಚನೆ ಬೇಕಾ?. ಎಂಬ ಪ್ರಶ್ನೆ ಹಿರಿಯ ನಾಯಕರನ್ನು ಭೂತದಂತೆ ಕಾಡಲಾರಂಭಿಸಿದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮುದಾಯ ಮತ್ತು ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಅನುಕೂಲವಾಗುವಂತೆ ಕೆಲವು ನಾಯಕರಿಗೆ ಸಚಿವ ಸ‍್ಥಾನ ನೀಡುವ ಚಿಂತನೆ ಇದೆಯಾದರೂ ಒಂದು ವೇಳೆ ಸಚಿವ ಸ್ಥಾನದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾದರೆ ಅದನ್ನು ಶಮನಗೊಳಿಸುವುದು ಸುಲಭದ ಕೆಲಸವಲ್ಲ. ಏಕೆಂದರೆ ಚುನಾವಣೆಗೆ ಕೇವಲ ಒಂದೇ ವರ್ಷ ಬಾಕಿ ಇರುವುದರಿಂದ ಅದು ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಭಯವೂ ಇಲ್ಲದಿಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಸ್ವಪಕ್ಷವನ್ನು ಮತ್ತು ನಾಯಕರನ್ನು ಟೀಕಿಸುತ್ತಲೇ ಬರುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಒಂದು ಕಡೆಯಾದರೆ, ಸಚಿವ ಸ್ಥಾನ ವಂಚಿತ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗಾಗ್ಗೆ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಲೇ ಬರುತ್ತಿದ್ದಾರೆ. ಉಳಿದಂತೆ ಹೆಚ್ಚಿನ ಶಾಸಕರು ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸದಿದ್ದರೂ ಅದು ಯಾವಾಗ ಬೇಕಾದರೂ ಸ್ಪೋಟವಾಗಬಹುದು.

ಮೈಸೂರಲ್ಲಿ ಶಾಸಕರು, ಸಂಸದರ ಬೀದಿರಂಪ

ಮೈಸೂರಲ್ಲಿ ಶಾಸಕರು, ಸಂಸದರ ಬೀದಿರಂಪ

ಇನ್ನು ಮೈಸೂರು ಭಾಗದಲ್ಲಿ ಈಗಷ್ಟೇ ಬಿಜೆಪಿ ನೆಲೆಯೂರಲಾರಂಭಿಸಿತ್ತು. ಶಾಸಕರು ಮತ್ತು ಸಂಸದರು ಸೇರಿ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿಕೊಂಡು ಹೋಗಬಹುದಿತ್ತು. ಆದರೆ ಒಟ್ಟಾಗಿ ಹೋಗುವಲ್ಲಿ ಪ್ರತಿಷ್ಠೆ ಅಡ್ಡ ಬಂದಿದ್ದು, ಶಾಸಕರಾದ ರಾಮದಾಸ್, ನಾಗೇಂದ್ರ ಮತ್ತು ಸಂಸದ ಪ್ರತಾಪ್ ಸಿಂಹ ನಡುವಿನ ಹಗ್ಗಜಗ್ಗಾಟ ಬೀದಿಗೆ ಬಂದಿದ್ದು, ಒಬ್ಬರನೊಬ್ಬರು ಮಾಧ್ಯಮಗಳ ಮುಂದೆ ಆಕ್ರೋಶಗಳನ್ನು ಹೊರಹಾಕುತ್ತಾ ಶಿಸ್ತಿನ ಪಕ್ಷ ಎಂದು ಬಡಾಯಿಕೊಚ್ಚಿಕೊಳ್ಳುವ ಬಿಜೆಪಿ ಪಕ್ಷದ ಮಾನ ಕಳೆದಿದ್ದಾರೆ.

ಇದೀಗ ಎಚ್ಚೆತ್ತುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ. ಆದರೆ ಸಂಸದರು ಮತ್ತು ಶಾಸಕರ ನಡುವೆ ಬಿರುಕು ಆರಂಭವಾಗಿ ಅದೆಷ್ಟೋ ಸಮಯಗಳಾಗಿವೆ. ಅದಕ್ಕೆ ತೇಪೆ ಹಚ್ಚಿ ಒಂದು ಮಾಡುವುದು ಕಷ್ಟವೇ. ಹೀಗಾಗಿ ನೇರ ಪರಿಣಾಮ ಮುಂದೆ ಬರಲಿರುವ ಚುನಾವಣೆ ಮೇಲೆ ಬೀರುವುದಂತು ಸತ್ಯ.

ರಾಜ್ಯದಲ್ಲಿ ಸಮರ ಸಾರಿರುವ ಕೈ ಪಡೆ

ರಾಜ್ಯದಲ್ಲಿ ಸಮರ ಸಾರಿರುವ ಕೈ ಪಡೆ

ಈಗಾಗಲೇ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮೂಲಕ ಬಿಜೆಪಿ ವಿರುದ್ಧ ರಾಜಕೀಯ ಸಮರ ಸಾರಿಯಾಗಿದೆ. ಮುಂದಿನ ಪ್ರತಿ ಹೆಜ್ಜೆಯನ್ನು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧವಾಗಿಯೇ ಇಡಲಿದ್ದಾರೆ. ಹೀಗಿರುವಾಗ ಬಿಜೆಪಿಗೆ ಪ್ರತಿ ಕ್ಷಣವೂ ಸವಾಲಿನದ್ದಾಗಿದೆ. ಆಡಳಿತದಲ್ಲಿ ಸ್ವಲ್ಪ ಏರುಪೇರಾದರೂ ಅದರ ಲಾಭವನ್ನು ಕಾಂಗ್ರೆಸ್ ಮಾಡಿಕೊಳ್ಳಲಿದೆ. ಆದ್ದರಿಂದ ಆಡಳಿತದೊಂದಿಗೆ ಪಕ್ಷದ ಸಂಘಟನೆಗೂ ಬಿಜೆಪಿ ಒತ್ತು ನೀಡಬೇಕಾಗಿದೆ. ಇದರ ನಡುವೆ ಸ್ವಪಕ್ಷದ ನಾಯಕರೇ ಬೀದಿಯಲ್ಲಿ ನಿಂತು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿರುವುದನ್ನು ನೋಡಿದರೆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.

ಭಿನ್ನಾಭಿಪ್ರಾಯ, ಮೂಲ- ವಲಸಿಗರು ಎಂಬ ಗುಂಪುಗಾರಿಕೆ, ಅಸಮಾಧಾನ ಹೀಗೆ ಹತ್ತಾರು ಸಮಸ್ಯೆಗಳಿಂದ ರಾಜ್ಯ ಬಿಜೆಪಿ ಬಳಲುತ್ತಿದೆ. ಇದೆಲ್ಲವನ್ನು ನಿಭಾಯಿಸಿಕೊಂಡು ಮುಂದಿನ ಚುನಾವಣೆಗೆ ನಾಯಕರು ಹೇಗೆ ತಯಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+