ಯಡಿಯೂರಪ್ಪ ಆಪ್ತ, ಬಿಜೆಪಿ ಮುಖಂಡ ಕಾಪು ಸಿದ್ದಲಿಂಗಸ್ವಾಮಿ ನಿಧನ
ಬೆಂಗಳೂರು, ಜೂನ್ 06; ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತ, ಬಿಜೆಪಿ ಮುಖಂಡ ಕಾಪು ಸಿದ್ದಲಿಂಗಸ್ವಾಮಿ ವಿಧಿವಶರಾದರು. ವಿಧಾನಸಭೆ ಚುನಾವಣೆಗೆ ಸಹ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಪು ಸಿದ್ದಲಿಂಗಸ್ವಾಮಿ, ಮೈಸೂರಿನಲ್ಲಿ ಜೂನ್ 6ರ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಸುಮಾರು 6 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಪು ಸಿದ್ದಲಿಂಗಸ್ವಾಮಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಆರೋಗ್ಯ ಸ್ಥಿತಿ ಸುಧಾರಿಸದೇ ಅವರು ವಿಧಿವಶರಾದರು.
ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು: ಕಾಪು ಸಿದ್ದಲಿಂಗಸ್ವಾಮಿ ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರದಿಂದ 2013ರ ಚುನಾವಣೆಗೆ ಸ್ಪರ್ಧಿಸಿದ್ದರು. ಕೆಜೆಪಿ ಅಭ್ಯರ್ಥಿಯಾಗಿದ್ದ ಅವರು 54,744 ಮತಗಳನ್ನು ಪಡೆದು, ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರುದ್ದ (84,385 ಮತ) ಸೋಲು ಕಂಡಿದ್ದರು.
2013ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಸ್ತಿತ್ವಕ್ಕೆ ಬಂದಿತು. ವರುಣದಲ್ಲಿ ಗೆಲುವು ಸಾಧಿಸಿದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದರು. 2018ರ ವಿಧಾನಸಭೆ ಚುನಾವಣೆಯಲ್ಲಿ ವರುಣದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾದರು. ಆದರೆ ಕಾಪು ಸಿದ್ದಲಿಂಗಸ್ವಾಮಿಗೆ ಕಣಕ್ಕಿಳಿಯಲಿಲ್ಲ.
ಕಾಪು ಸಿದ್ದಲಿಂಗಸ್ವಾಮಿ ಹಲವು ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರಾಗಿ ಕೆಲಸ ನಿರ್ವಹಣೆ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಕಾಪು ಸಿದ್ದಲಿಂಗಸ್ವಾಮಿ ಜೊತೆಗಿದ್ದರು.
ಮೈಸೂರು ಜಿಲ್ಲೆಯ ಪಕ್ಷದ ಮುಖಂಡ, ಹಲವು ವರ್ಷಗಳ ಕಾಲ ನನ್ನ ಆಪ್ತ ಸಹಾಯಕರಾಗಿದ್ದ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯುೂ ಸೇವೆ ಸಲ್ಲಿಸಿದ್ದ ಶ್ರೀ ಕಾಪು ಸಿದ್ಧಲಿಂಗಸ್ವಾಮಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬದ ಸದಸ್ಯರಿಗೆ ನೋವನ್ನು ಭರಿಸುವ ಶಕ್ತಿ…
— B.S.Yediyurappa (Modi Ka Parivar) (@BSYBJP) June 6, 2024
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಯಡಿಯೂರಪ್ಪ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ನೇಮಕ ಮಾಡಲಾಗಿತ್ತು.
ಯಡಿಯೂರಪ್ಪ ಆಪ್ತರಾಗಿದ್ದ ಕಾಪು ಸಿದ್ದಲಿಂಗಸ್ವಾಮಿ ಯಡಿಯೂರಪ್ಪ ಕೆಜೆಪಿ ಪಕ್ಷವನ್ನು ಕಟ್ಟಿದಾಗ ಅವರ ಜೊತೆಗೆ ಇದ್ದರು. ಆ ಕಾರಣಕ್ಕಾಗಿಯೇ ವರುಣ ಕ್ಷೇತ್ರದಲ್ಲಿ ಅವರನ್ನು ಕೆಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಲಾಗಿತ್ತು.
2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಪು ಸಿದ್ದಲಿಂಗಸ್ವಾಮಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆಗ ಪ್ರತಿಕ್ರಿಯೆ ನೀಡಿದ್ದ ಅವರು, "ಯಾವುದೇ ಕಾರಣಕ್ಕೂ ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ" ಎಂದು ಹೇಳಿದ್ದರು.
"ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂಬ ಸಂಗತಿ ಉಹಾಪೋಹವಾಗಿದ್ದು, ನನ್ನ ಕತ್ತು ಸೀಳಿದರೂ ಸಹ ಅದು ಸಾಧ್ಯವಾಗುವುದಿಲ್ಲ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾದ ನಾನು ವರುಣದಲ್ಲಿ ವಿ. ಸೋಮಣ್ಣ ಗೆಲುವಿಗಾಗಿ ಪಣತೊಟ್ಟಿದ್ದೇನೆ. ನನ್ನ ಮೊದಲ ಮತ್ತು ಕೊನೆಯ ಮತ ಬಿಜೆಪಿಗೆ" ಎಂದು ತಿಳಿಸಿದ್ದರು.
ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮಾಜಿ ಸಚಿವ ವಿ. ಸೋಮಣ್ಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಕಾಪು ಸಿದ್ದಲಿಂಗಸ್ವಾಮಿ ಆರೋಗ್ಯವನ್ನು ವಿಚಾರಿಸಿದ್ದರು.
ಇಂದು ಸಂಜೆ ಗಂಟೆಗೆ ಕಾಪು ಸಿದ್ದಲಿಂಗಸ್ವಾಮಿ ಅಂತ್ಯಕ್ರಿಯೆ ಲಿಂಗಾಯತ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದೆ.
ಯಡಿಯೂರಪ್ಪ ಸಂತಾಪ: ಕಾಪು ಸಿದ್ದಲಿಂಗಸ್ವಾಮಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. 'ಮೈಸೂರು ಜಿಲ್ಲೆಯ ಪಕ್ಷದ ಮುಖಂಡ, ಹಲವು ವರ್ಷಗಳ ಕಾಲ ನನ್ನ ಆಪ್ತ ಸಹಾಯಕರಾಗಿದ್ದ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯುೂ ಸೇವೆ ಸಲ್ಲಿಸಿದ್ದ ಶ್ರೀ ಕಾಪು ಸಿದ್ಧಲಿಂಗಸ್ವಾಮಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬದ ಸದಸ್ಯರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.












Click it and Unblock the Notifications