ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಶೇ. 10 ರಷ್ಟು ಭರವಸೆಯನ್ನೂ ಈಡೇರಿಸಿಲ್ಲ: ಸಿದ್ದರಾಮಯ್ಯ
ಮೈಸೂರು, ಆಗಸ್ಟ್ 26: ಅನಧಿಕೃತವಾಗಿ ಅಧಿಕಾರಕ್ಕೆ ಬಂದಂತಹ ಬಿಜೆಪಿ ಸರಕಾರ, ಚುನಾವಣೆ ವೇಳೆ ಘೋಷಿಸಿದ್ದ ಪ್ರಣಾಕೆಯಲ್ಲಿ ಶೇ 10ರಷ್ಟನ್ನು ಇಡೇರಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಬಿಜೆಪಿಯವರು ಕಳೆದ ಚುನಾವಣೆಯಲ್ಲಿ 104 ಸ್ಥಾನ ಮಾತ್ರ ಪಡೆದಿದ್ದರು. ಆದರೆ ಕಾಂಗ್ರೆಸ್ ಪಕ್ಷ ಕಡಿಮೆ ಸ್ಥಾನ ಗೆದ್ದರೂ 38.14 % ಮತ ಪಡೆದಿತ್ತಯ. ಬಿಜೆಪಿಗೆ 34 % ಹಾಗೂ ಜೆಡಿಎಸ್‌ಗೆ 18% ಜೆಡಿಎಸ್‌ಗೆ ಮತಗಳು ಬಂದಿದ್ದವು. ನಾವು ಹೆಚ್ಚು ಸೀಟ್ ಗೆಲ್ಲದಿದ್ದರೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದೆವು. ಆದರೆ ಜನಾದೇಶವಿಲ್ಲದಿದ್ದರೂ ಅನೈತಿಕವಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಈ ವರಗೆ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಶೇ. 10 ರಷ್ಟು ಭರವಸೆಯನ್ನೂ ಈಡೇರಿಸಿಲ್ಲ. ಅಂದರೆ ಅವರಿಗೆ ಜನರು ಆಶೀರ್ವಾದ ಮಾಡಿಲ್ಲ. ಈ ಸಂಬಂಧ ಬಿಜೆಪಿ ಜೊತೆ ಚರ್ಚೆಗೆ ಯಾವಾಗಲಾದರೂ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಆಡಳಿತರೂಢ ಬಿಜೆಪಿ ಸರಕಾರ ಹಿಂದುಳಿದವರು, ದೀನರು, ದಲಿತರು ಹಾಗೂ ಸಾಮಾಜಿಕ ನ್ಯಾಯದ ಪರವಾಗಿರದೇ ಸಂಪೂರ್ಣವಾಗಿ ಸತ್ತು ಹೋಗಿದೆ. ಆರ್ಥಿಕ ಶಿಸ್ತು ಇಲ್ಲದೇ ದಿವಾಳಿಯಾಗಿದೆ. ನಾನು ಬಜೆಟ್ ಮಂಡಿಸಿದಾಗ ಎಸ್‌ಸಿಪಿ, ಟಿಎಸ್‌ಪಿಗೆ 30,000 ಕೋಟಿ ರೂ.ಮೀಸಲಿಡಲಾಗಿತ್ತು. ಆಗ ಬಜೆಟ್ ಗಾತ್ರ 2,02,000 ಕೋಟಿ ಇತ್ತು. ಬಿಜೆಪಿ ಈ ಸಾಲಿಗೆ 2,65,720 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದೆ. ಈಗ ಎಸ್‌ಸಿಪಿ- ಟಿಎಸ್‌ಪಿಗೆ ಮೀಸಲಿಡಬೇಕಾದ ಹಣ 40,000 ಕೋಟಿಗೂ ಹೆಚ್ಚಾಗಿರಬೇಕು. ಆದರೆ 28,324 ಕೋಟಿ ರೂ. ಇದೆ. 7,885 ಕೋಟಿ ರೂ. ಅನ್ನು ಅನ್ಯಕಾರ್ಯಕ್ಕೆ ಬಳಕೆ ಮಾಡಲಾಗಿದೆ. ಈ ಸರಕಾರಕ್ಕೆ ಬಡವರು, ದೀನರು, ಹಿಂದುಳಿದವರ ಪರ ಕಾಳಜಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಲಿ
" ಕೋವಿಡ್ ಸಂದರ್ಭದಲ್ಲಿಯೂ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಕಾನೂನು ಸಚಿವ ಮಾಧುಸ್ವಾಮಿ ಸರಕಾರದ ಆಡಳಿತ ಕ್ರಮವನ್ನು ವಿರೋಧಿಸಿದ್ದಾರೆ. ಈಶ್ವರಪ್ಪ ಅವರ ಬಗ್ಗೆ ಗುತ್ತಿಗೆದಾರನೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಶೇ. 40 ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಬಿಬಿಎಂಪಿಯಲ್ಲಿಯೂ ಶೇ. 50 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಹೀಗಾಗಿ ಈ ಕುರಿತು ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಲಿ" ಎಂದು ಒತ್ತಾಯಿಸಿದರು.
ದ್ವೇಷ ರಾಜಕಾರಣ ಹಾಗೂ ಭ್ರಷ್ಟ ರಾಜಕರಣವೇ ಬಿಜೆಪಿ ಗುರಿ
"ನಾವು ಏನೇ ಆರೋಪ ಮಾಡಿದರೂ ಸಿಎಂ ಬೊಮ್ಮಾಯಿ ದಾಖಲೆ ಕೇಳುತ್ತಾರೆ. ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ಮಾಡಲು ಒಪ್ಪುತ್ತಿಲ್ಲ. ನಾನು ಯಾವತ್ತೂ ಹರಿಶ್ಚಂದ್ರ ಅಂತ ಹೇಳಿಕೊಂಡಿಲ್ಲ. ಅವರ ಮನೆಯವರೂ ನಾನಲ್ಲ. ನನ್ನ ಕಾಲದಲ್ಲಿ ಹಗರಣಗಳು ಆಗಿದ್ದವು. ಆಗ ನಾನು ಐದು ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೆ. ಆದರೆ ಕೇವಲ ಆರೋಪ ಬಂದ ತಕ್ಷಣ ಒತ್ತಡ ತರುತ್ತಿದ್ದರು. ಆದರೆ ಈಗ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಿದ್ದರೂ ಏನ್ ಮಾಡ್ತಾ ಇದಾರೆ. ನಾವು ಜಾರಿಗೊಳಿಸಿದ್ದ ಹಲವು ಕಾರ್ಯಕ್ರಮ ನಿಲ್ಲಿಸಿದ್ದಾರೆ. ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ದ್ವೇಷ ರಾಜಕಾರಣ ಹಾಗೂ ಭ್ರಷ್ಟ ರಾಜಕರಣವೇ ಅವರ ಗುರಿ" ಎಂದು ಟೀಕಿಸಿದರು.
ಪ್ರತಾಪ್‌ಸಿಂಹ ಯಕಶ್ಚಿತ್ ರಾಜಕಾರಣಿ
ಸಂಸದ ಪ್ರತಾಪ್‌ಸಿಂಹ ಯಕಶ್ಚಿತ್ ರಾಜಕಾರಣಿ. ಒಂದು ವೇಳೆ ಆತ ಹೇಳುವುದು ಸರಿ ಇದ್ದರೆ ನಮ್ಮ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಅವರೊಂದಿಗೆ ಚರ್ಚಿಸಲಿ ಎಂದರು. ಹೋರಾಟಗಾರ ಸಾವರ್ಕರ್ ಅವರ ಬಗ್ಗೆ ಇರುವ ದಾಖಲೆಗಳನ್ನು ಅಧ್ಯಯನ ಮಾಡಿ ಅದರಲ್ಲಿರುವ ವಿಷಯವನ್ನಷ್ಟೇ ಮಾತನಾಡಿದ್ದೇನೆ. ಆತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವ ಬಗ್ಗೆಯೂ ಮಾತನಾಡಿದ್ದೇನೆ. ಈ ಬಗ್ಗೆ ಪ್ರಶ್ನಿಸುವವರು ಇತಿಹಾಸವನ್ನು ಓದಿದರೆ ನಿಜಾಂಶ ತಿಳಿಯುತ್ತದೆ ಎಂದರು.












Click it and Unblock the Notifications