MUDA Case: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಿಗೆ ಸುತ್ತಿಕೊಂಡ ಮುಡಾ ಹಗರಣ
ಮುಡಾ ಹಗರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಪ್ರತಿಪಕ್ಷ ಬಿಜೆಪಿಗೆ ಸುತ್ತಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅವರು ಕೂಡ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೈಸೂರು ನಗರದ ವೀರನಗೆರೆಯ ಸರ್ವೆ ನಂಬರ್ ಒಂದರಲ್ಲಿ ಅಕ್ರಮವಾಗಿ ಮಹದೇವಸ್ವಾಮಿ ಅವರ ಪತ್ನಿ ಹೆಸರಿನಲ್ಲಿ ಪಡೆದಿರುವ ನಿವೇಶನ ವಿಜಯೇಂದ್ರ ಅವರ ಬೇನಾಮಿ ಆಸ್ತಿ. ಮುಡಾ ಭ್ರಷ್ಟಾಚಾರದ ಪಿತಾಮಹ ವಿಜಯೇಂದ್ರ ಆಗಿದ್ದು, ಯಾವ ನೈತಿಕತೆ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪಾದಯಾತ್ರೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ವೀರನಗೆರೆಯ ಸರ್ವೆ ನಂಬರ್ 85/2ರ 1.3 ಎಕರೆಯನ್ನು ಪ್ರಾಧಿಕಾರ 1975ರಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. ಇದರ ವಾರಸುದಾರರಾದ ಲೇಟ್ ಸೈಯದ್ ಅಬ್ದುಲ್ ರೆಹಮಾನ್ ಅವರ ಮಕ್ಕಳೆಂದು ಹೇಳಿಕೊಂಡು ಸೈಯದಾ ನಸ್ರತ್ ಮತ್ತು ಸೈಯದ್ ಶಕೀಬ್ ರೆಹಮಾನ್ ಅವರು 2021ರಲ್ಲಿ ಬದಲಿ ನಿವೇಶನ ನೀಡುವಂತೆ ಮುಡಾಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಇವರಿಗೆ ಟಿ.ಕೆ.ಲೇಔಟ್‌ನಲ್ಲಿ ಹೆಚ್ಚುವರಿಯಾಗಿ ಅಕ್ರಮವಾಗಿ ನಿವೇಶನ ದೊರೆಯುವಂತೆ, ನಂತರ ಇವರಿಂದ ತಮ್ಮ ಪತ್ನಿ ಹೆಸರಿಗೆ ಮಹದೇವಸ್ವಾಮಿ ಖರೀದಿಸಿದ್ದಾರೆ ಎಂದು ದೂರಿದ್ದಾರೆ.
ಈ ಹೆಚ್ಚುವರಿ ನಿವೇಶನ ಮಂಜೂರು ಅಕ್ರಮವಾಗಿದ್ದು, 7 ಕೋಟಿ ರೂ. ವೌಲ್ಯದ ಆಸ್ತಿಯನ್ನು ಕೇವಲ 5.36 ಲಕ್ಷ ರೂಪಾಯಿಗೆ ಪಡೆಯಲಾಗಿದೆ. ಮುಡಾ ಅಕ್ರಮವಾಗಿ ನೀಡಿರುವ ಈ ನಿವೇಶನವನ್ನು ವಾಪಸ್ ಪಡೆಯಬೇಕು. ಇದಕ್ಕೆ ಕಾರಣವಾದ ಅಂದಿನ ಆಯುಕ್ತ ಡಿ.ಬಿ.ನಟೇಶ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಕರ್ನಾಟಕ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎನ್.ನಂದೀಶ್ ಅವರು ಕೂಡ ಅಕ್ರಮವಾಗಿ ನಿವೇಶನ ಪಡೆದಿದ್ದು, ಇವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಅಂದಿನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications