Nanjangud: 'ಅಮ್ಮನ ಕಷ್ಟ ನೋಡಲಾಗುತ್ತಿಲ್ಲ': ಪತ್ರ ಬರೆದಿಟ್ಟು ಮನೆ ಬಿಟ್ಟು ಹೋದ ಬಾಲಕ
ನಂಜನಗೂಡು, ಅಕ್ಟೋಬರ್ 28: ದುಡಿದು ತರುವ ತಾಯಿ ಕಷ್ಟ ನೋಡಲಾಗದ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿ ನಾನು ದುಡಿದು ಮನೆಗೆ ವಾಪಸ್ ಬರುತ್ತೇನೆ ಎಂದು ಪತ್ರ ಬರೆದು ನಾಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕು ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ನನ್ನ ಅಮ್ಮ ದುಡಿಯೋದು ನನಗೆ ಇಷ್ಟ ಇಲ್ಲ. ಹೀಗಾಗಿ ನಾನೇ ದುಡಿದು ಮನೆಗೆ ಬರುತ್ತೇನೆ ಎಂದು ಪತ್ರ ಬರೆದು ಒಂದು ವಾರದ ಹಿಂದೆ ಮನೆ ಬಿಟ್ಟುಹೋದ ಬಾಲಕ ಭರತ್ ಇದುವರೆಗೆ ಹಿಂದಿರುಗಿಲ್ಲ. ಮೊಮ್ಮಗ ಮನೆ ಬಿಟ್ಟ ದಿನದಿಂದ ಅಜ್ಜ ಅಜ್ಜಿ ಹಾಸಿಗೆ ಹಿಡಿದಿದ್ದಾರೆ. ಬಾಲಕನನ್ನು ಹುಡುಕಾಡಿ ನಂತರ ಕುಟುಂಬ ಕಂಗಾಲಾಗಿದೆ. ಎಲ್ಲೇ ಇದ್ರೂ ಮನೆಗೆ ವಾಪಸ್ ಬಾ ಎಂದು ಕೂಗುತ್ತಿರುವ ಅಜ್ಜನ ಕೊರಗಿನ ಧ್ವನಿ ಮನಕಲುಕುವಂತಾಗಿದೆ.

ಕೆಂಪಿಸಿದ್ದನಹುಂಡಿ ಗ್ರಾಮದ ಶ್ರೀ ಕನಕದಾಸ ಪ್ರೌಢಶಾಲೆಯಲ್ಲಿ ಭರತ್ ಹತ್ತನೇ ತರಗತಿ ಓಡುತ್ತುದ್ದ. ಅದೇ ಶಾಲೆಯಲ್ಲಿ ತಾಯಿ ಮಹದೇವಮ್ಮ ಬಿಸಿಯೂಟ ಯೋಜನೆಯಡಿಯ ಅಡುಗೆ ಸಿಬ್ಬಂದಿ. ತಾಯಿ ಪಡುತ್ತಿರುವ ಪರಿಶ್ರಮಕ್ಕೆ ಭರತ್ ಕಣ್ಣಾರೆ ಕಂಡು ನೊಂದಿದ್ದಾನೆ. ಮನೆ ಬಿಟ್ಟು ಹೋಗುತ್ತಿದ್ದೇನೆ. ಮೈಸೂರಿಗೆ ಹೋಗುತ್ತೇನೆ, ವರ್ಷ ಬಿಟ್ಟು ಬರುತ್ತೇನೆ ,ಹುಡುಕೋ ಪ್ರಯತ್ನ ಮಾಡಬೇಡಿ, ನಾನು ನಿಮಗೆ ಸಿಕ್ಕಲ್ಲ, ಎಲ್ಲಿಗೆ ಹೋಗುತ್ತೇನೆ ಗೊತ್ತಿಲ್ಲ, ನನ್ನನ್ನ ಎಲ್ಲರೂ ಕ್ಷಮಿಸಿ.
ನನ್ನ ಮಮ್ಮಿ ದುಡಿಯೋದು ನನಗೆ ಇಷ್ಟ ಇಲ್ಲ, ನಾನು ದುಡಿದು ಮನೆಗೆ ಬರುತ್ತೇನೆ ಬೇಜಾರು ಮಾಡಿಕೋಬೇಡಿ ಎಂದು ಪತ್ರ ಬರೆದ ಭರತ್ ಅಕ್ಟೋಬರ್ 16 ರಂದು ದಸರಾ ರಜೆ ವೇಳೆ ಮನೆ ಬಿಟ್ಟಿದ್ದಾನೆ. ಸ್ನೇಹಿತರು, ಸಂಬಂಧಿಕರು ಮನೆಯಲ್ಲಿ ಹುಡುಕಾಡಿದ್ರೂ ಪತ್ತೆಯಾಗಿಲ್ಲ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.

ಮೊಮ್ಮಗ ನಾಪತ್ತೆಯಾದ ದಿನ ಹಾಸಿಗೆ ಹಿಡಿದ ಅಜ್ಜ ಮಲ್ಲಯ್ಯ, ಅಜ್ಜಿ ಮಾದಮ್ಮ ಇಂದಿಗೂ ಎದ್ದಿಲ್ಲ. ಭರತ್ ಕಾಣದೇ ಇಡೀ ಕುಟುಂಬ ಆತಂಕಕ್ಕೆ ಸಿಲುಕಿದೆ. ಬಾಲಕ ನಾಪತ್ತೆಯಾಗಿ 12 ದಿನಗಳು ಕಳೆದಿದೆ. ನಂಜನಗೂಡು ಗ್ರಾಮಾಂತರ ಪೊಲೀಸರಿಗೂ ಸಹ ಭರತ್ ಸುಳಿವು ಸಿಕ್ಕಿಲ್ಲ. ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ ಭರತ್‌ಗಾಗಿ ಕಾತುರದಿಂದ ಎದುರು ನೋಡುತ್ತಿದೆ.
ಈ ಕುರಿತು ನಾಪತ್ತೆಯಾಗಿರುವ ಬಾಲಕನ ಅಜ್ಜ ಮಲ್ಲಯ್ಯ ಮಾತನಾಡಿ, 'ಕಳೆದ ಎಂಟು ವರ್ಷಗಳ ಹಿಂದೆ ಭರತ್‌ನ ತಂದೆ ಅಂದ್ರೆ ನನ್ನ ಅಳಿಯ ನಾಗರಾಜು ಜಾಂಡಿಸ್ ಕಾಯಿಲೆಯಿಂದ ಮೃತಪಟ್ಟರು. ನಾವು ಅಲ್ಲಿ ಇಲ್ಲಿ ತನಕ ಕೂಲಿ ಮಾಡಿ ಯಾವುದೇ ಸಮಸ್ಯೆ ಇಲ್ಲದ ರೀತಿಯಲ್ಲಿ ಸಾಕಿ ಸಲಹುದ್ದೇವೆ. ಆದರೆ ಇದೀಗ ಮನೆ ಬಿಟ್ಟು ನಾಪತ್ತೆಯಾಗಿರುವುದು ತಡೆಯಲಾಗದ ಮತ್ತು ಮರೆಯಲಾಗದ ದುಃಖವಾಗಿದೆ. ಅವನ ಬರುವಿಕೆಗಾಗಿ ಕಾದು ಕುಳಿತಿದ್ದೇವೆ ದಿನನಿತ್ಯ ಕೊರಗಿನಲ್ಲಿ ರಾತ್ರಿ ಹಗಲು ಕಳೆಯುತ್ತಿದ್ದೇವೆ. ಎಷ್ಟು ಲೆಕ್ಕವಿಲ್ಲದಷ್ಟು ದೇವರುಗಳಿಗೆ ಬೇಡಿಕೊಂಡಿದ್ದೇನೆ. ನನ್ನ ಮೊಮ್ಮಗ ನನ್ನ ಮನೆಗೆ ಬಂದರೆ ಸಾಕು' ಎಂದಿದ್ದಾರೆ.
ಈ ಬಗ್ಗೆ ಕೆಂಪಿಸಿದ್ದನ ಹುಂಡಿ ಶ್ರೀ ಕನಕದಾಸ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಮಾತನಾಡಿ, ದಸರಾ ರಜೆಯ ಸಂದರ್ಭದಲ್ಲಿ ಇದೇ ತಿಂಗಳ 19ರಂದು ನಮ್ಮ ಶಾಲೆ ಹತ್ತನೇ ತರಗತಿ ವಿದ್ಯಾರ್ಥಿ ಭರತ್ ನಾಪತ್ತೆಯಾಗಿರುವ ವಿಚಾರವನ್ನು ವಿದ್ಯಾರ್ಥಿಗಳು ದೂರವಾಣಿ ಕರೆ ಮಾಡಿ ನಮಗೆ ವಿಚಾರ ಮುಟ್ಟಿಸಿದರು. ನಾನು ವಿದ್ಯಾರ್ಥಿಯ ಮನೆಯವರನ್ನು ಸಂಪರ್ಕಿಸಿ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಸಲಹೆ ಕೊಟ್ಟೆ. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಅವರ ತಾಯಿ ಮಹದೇವಿ ಇದೇ ಶಾಲೆಯಲ್ಲಿ ದಾಸೋಹ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಾಕಾಗಿ ಆ ವಿದ್ಯಾರ್ಥಿ ಮನೆ ಬಿಟ್ಟು ತೆರಳಿದ್ದಾನೆ ಎಂಬುದು ತಿಳಿಯದು. ಓದಿನಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಉತ್ತಮ ಗುಣವುಳ್ಳ ವಿದ್ಯಾರ್ಥಿಯಾಗಿದ್ದನು ಅವನ ಬರುವಿಕೆಗಾಗಿ ನಾವು ಕೂಡ ಕಾಯುತ್ತಿದ್ದೇವೆ' ಎಂದರು.












Click it and Unblock the Notifications