ಪ್ರಾಣಿ ಪ್ರಿಯರಿಗೆ ಖುಷಿ ಸುದ್ದಿ: ಮೈಸೂರು ಮೃಗಾಲಯದಲ್ಲಿ ಸಿಂಗಳೀಕ ಮರಿ ಜನನ
ಮೈಸೂರು, ಸೆಪ್ಟೆಂಬರ್ 14: ಈಗಾಗಲೇ ಹಲವು ವನ್ಯ ಜೀವಿಗಳು ಅಳಿವಿನಂಚಿನಲ್ಲಿದ್ದು ಅವುಗಳ ರಕ್ಷಿಸಿ ಸಂತತಿಯನ್ನು ಮುಂದಿನ ತಲೆಮಾರಿಗೂ ಉಳಿಸುವ ಪ್ರಯತ್ನ ಮಾಡುತ್ತಾ ಬರಲಾಗುತ್ತಿದೆ. ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ನಡುವೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ತಳಿ ಅಭಿವೃದ್ಧಿ ಯೋಜನೆಯಡಿ ತನ್ನದೇ ಆದ ಪ್ರಯತ್ನಗಳನ್ನು ಮಾಡುತ್ತಿದ್ದು, ಇದೀಗ ಅದರಲ್ಲಿ ಯಶಸ್ವಿಯಾಗಿರುವುದು ಖುಷಿಪಡುವ ಸಂಗತಿಯಾಗಿದೆ.
ಮೊದಲೆಲ್ಲ ಬಹಳಷ್ಟು ವನ್ಯಪ್ರಾಣಿಗಳನ್ನು ನಮ್ಮ ಸುತ್ತಮುತ್ತಲಿನ ಕಾಡುಗಳಲ್ಲಿಯೇ ನೋಡಬಹುದಾಗಿತ್ತು. ಆದರೀಗ ಅದು ಸಾಧ್ಯವಾಗದಾಗಿದೆ. ಅರಣ್ಯಕ್ಕೆ ತೆರಳಿ ಸಫಾರಿ ನಡೆಸಿದರೂ ಕೆಲವೊಮ್ಮೆ ಪ್ರಾಣಿಗಳು ನೋಡಲು ಸಿಗುವುದಿಲ್ಲ. ಹೀಗಾಗಿ ಕೆಲವೊಂದು ಪ್ರಾಣಿಗಳನ್ನು ನೋಡಬೇಕಾದರೆ ಮೃಗಾಲಯಕ್ಕೆ ತೆರಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮೃಗಾಲಯದಲ್ಲಿರುವ ಪ್ರಾಣಿಗಳು ಮರಿಗಳಿಗೆ ಜನ್ಮ ನೀಡಿದರೆ ಅದು ಪ್ರಾಣಿಪ್ರಿಯರಿಗೆ ಖುಷಿಕೊಡುತ್ತದೆ.

ಇದೀಗ ಮತ್ತೆ ಪ್ರಾಣಿಪ್ರಿಯರು ಖುಷಿ ಪಡುವ ಸುದ್ದಿಯೊಂದು ಮೃಗಾಲಯದ ಕಡೆಯಿಂದ ಬಂದಿದೆ. ಸದ್ಯ ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಅಳಿವಿನಂಚಿನ ಸಿಂಗಳೀಕ (ಸಿಂಹಬಾಲದ ಕೋತಿ) ಮರಿ ಜನಿಸಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೃಗಾಲಯದಲ್ಲಿ ಸಿಂಗಳೀಕಗಳ ಸಂತಾನೋತ್ಪತ್ತಿ ಯಶಸ್ವಿಯಾಗಿರುವುದು ವಿಶೇಷವಾಗಿದೆ.
ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ತಳಿ ಅಭಿವೃದ್ಧಿ ಯೋಜನೆಯಡಿ 2015 ರಿಂದ ಅವುಗಳ ತಳಿ ಸಂರಕ್ಷಣೆ, ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆದಿತ್ತು. ಎರಡು ತಿಂಗಳ ಹಿಂದೆ ಮರಿ ಜನಿಸಿದ್ದು, ಈಗ ಸಂಖ್ಯೆ ಮೂರಕ್ಕೇರಿದೆ. ಜೀವವೈವಿಧ್ಯದ ಸಮತೋಲನ ಕಾಯ್ದುಕೊಳ್ಳಲು ಅಳಿವಿನಂಚಿನ ಪ್ರಾಣಿಗಳ ಸಂರಕ್ಷಣೆಗಾಗಿ ಮೃಗಾಲಯಗಳಲ್ಲಿ ತಳಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಕಾಡಿಗೆ ಬಿಡುವ ಯೋಜನೆ ಇದಾಗಿದೆ ಎನ್ನುವುದು ಖುಷಿಪಡುವ ವಿಚಾರವಾಗಿದೆ. ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್ ಕುಮಾರ್ ಹೇಳಿದ್ದಾರೆ.

ಳಿ ಅಭಿವೃದ್ಧಿ ಕೇಂದ್ರಗಳು ಮೈಸೂರು, ಚೆನ್ನೈ ಸೇರಿದಂತೆ ದೇಶದ ವಿವಿಧೆಡೆಯಿದ್ದು, ಕೇಂದ್ರೀಯ ಮೃಗಾಲಯ ಪ್ರಾಧಿಕಾರವೇ ಯಾವ ತಳಿ ಅಭಿವೃದ್ಧಿ ಪಡಿಸಬೇಕೆಂದು ಮೃಗಾಲಯಗಳಿಗೆ ನಿರ್ದೇಶನ ನೀಡುತ್ತದೆ. ಅದರಂತೆ ಮೈಸೂರು ಮೃಗಾಲಯಕ್ಕೆ ಸಿಂಗಳೀಕ ತಳಿ ಅಭಿವೃದ್ಧಿ ಜವಾಬ್ದಾರಿ ನೀಡಿತ್ತು ಎಂದು ಸಂತಸ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಯಾವ ಅರಣ್ಯದಲ್ಲಿ ತಳಿಗಳ ಸಂಖ್ಯೆ ಕಡಿಮೆಯಾಗಿರುತ್ತದೆಯೋ ಅಲ್ಲಿಗೆ ಅವುಗಳನ್ನು ಮರು ಪರಿಚಯಿಸುವುದೇ ತಳಿ ಅಭಿವೃದ್ಧಿ ಯೋಜನೆಯ ಮುಖ್ಯ ಗುರಿಯಾಗಿದೆ ಎಂದರು.
ದೇಶದಲ್ಲಿ ಎರಡು ಸಾವಿರ ಸಿಂಗಳೀಕ
ದೇಶದಲ್ಲಿ ಸುಮಾರು ಎರಡು ಸಾವಿರ ಸಿಂಗಳೀಕಗಳಿವೆ. ಹೀಗಾಗಿ, ಹುಲಿಗಳ ಸಂರಕ್ಷಣೆಯಷ್ಟೇ ಮಹತ್ವದ ಕಾರ್ಯ ಇದಾಗಿದೆ ಎಂದಿರುವ ಅವರು, ಸಿಂಗಳೀಕವಲ್ಲದೇ ತೋಳ, ಕಾಡೆಮ್ಮೆ, ಸೀಳುನಾಯಿಗಳ ತಳಿಗಳ ಅಭಿವೃದ್ಧಿ ಕಾರ್ಯವೂ ಕಳೆದ ಒಂಬತ್ತು ವರ್ಷದಿಂದ ನಡೆಯುತ್ತಿದೆ. ನೀಲಗಿರಿ ಲಂಗೂರ್, ಮಲಬಾರ್ ಅಳಿಲು, ಬೂದು ಕಾಡುಕೋಳಿ ಪ್ರಭೇದಗಳು ಯೋಜನೆಯ ವ್ಯಾಪ್ತಿಯಲ್ಲಿವೆ ಎಂದಿರುವ ಅವರು ಇದೀಗ ಮರಿಗೆ ಜನ್ಮ ನೀಡಿರುವ ಸಿಂಗಳೀಕವು ವಿನಾಶದಂಚಿನಲ್ಲಿದ್ದು, ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಅದನ್ನು ಕೆಂಪು ಪಟ್ಟಿಯಲ್ಲಿ ಸೇರಿಸಿದೆ.
ಈ ಪ್ರಭೇದ ಜಗತ್ತಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುತ್ತದೆ. ಕನ್ಯಾಕುಮಾರಿ ಅಗಸ್ತ್ಯ ಮಲೈನಿಂದ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶರಾವತಿ, ಅಘನಾಶಿನಿ ನದಿ ಕಣಿವೆವರೆಗೆ ಇವುಗಳ ಆವಾಸ ಸ್ಥಾನವಿದೆ. ರಾಜ್ಯದ ಶರಾವತಿ ವನ್ಯಜೀವಿ ಅಭಯಾರಣ್ಯ ಸೇರಿದಂತೆ ಶಿರಸಿ, ಹೊನ್ನಾವರ ಭಾಗದಲ್ಲಿ ಅರಣ್ಯ ನಾಶ, ಒತ್ತುವರಿ, ಮರಗಳ ಕಳ್ಳಸಾಗಣೆ, ಜಲವಿದ್ಯುತ್ ಯೋಜನೆಗಳಿಂದ ಆವಾಸಸ್ಥಾನ ಕಿರಿದಾಗುತ್ತಿದೆ. ಹೀಗಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಕುರಿತು ಅವರು ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಒಟ್ಟಾರೆ ಅಳಿವಿನಂಚಿನಲ್ಲಿರುವ ವನ್ಯಜೀವಿಯೊಂದು ಹೊಸ ಜೀವಕ್ಕೆ ಜನ್ಮ ನೀಡಿರುವುದು ಖುಷಿಯ ಸಂಗತಿಯಾಗಿದೆ.












Click it and Unblock the Notifications