Nishvika Naidu: ರಾಕೇಶ್ ಸಿದ್ದರಾಮಯ್ಯ ನನ್ನ ಚಿಕ್ಕಪ್ಪ : ಅಪ್ಪಾಜಿ ಗೆಲ್ಲೋದು ಪಕ್ಕಾ ಎಂದ ನಿಶ್ವಿಕಾ ನಾಯ್ಡು
ಕರ್ನಾಟಕ ಚುನಾವಣಾ ಅಖಾಡ ರಂಗೇರಿದೆ, ಎಲ್ಲಾ ಪಕ್ಷಗಳು ಕೂಡ ಬಿರುಸಿನ ಪ್ರಚಾರ ಮಾಡಲು ಮುಂದಾಗಿವೆ. ಎಲ್ಲಾ ಪಕ್ಷಗಳು ಕೂಡ ಮತಬೇಟೆಗಾಗಿ ಸ್ಟಾರ್ ಪ್ರಚಾರಕರ ಮೊರೆ ಹೋಗಿವೆ, ಕನ್ನಡ ಚಿತ್ರದ ಪ್ರಮುಖ ನಟರು ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ಪರವಾಗಿ ಶಿವರಾಜ್‌ಕುಮಾರ್, ರಮ್ಯಾ, ನಿಶ್ವಿಕಾ ನಾಯ್ಡು ಭರ್ಜರಿ ಪ್ರಚಾರ ಮಾಡಿದರು.
ಅಚ್ಚರಿ ಎನ್ನುವಂತೆ ಚಲನಚಿತ್ರ ನಟಿ ನಿಶ್ವಿಕಾ ನಾಯ್ಡು ಸಿದ್ದರಾಮಯ್ಯ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡರು, ಮಾತ್ರವಲ್ಲದೆ ರಾಕೇಶ್ ಸಿದ್ದರಾಮಯ್ಯ ನನ್ನ ಚಿಕ್ಕಪ್ಪ ಎಂದು ಹೇಳಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ಪರವಾಗಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, "ತುಂಬಾ ಖುಷಿಯಾಗುತ್ತಿದೆ, ಸಿದ್ದರಾಮಯ್ಯ ನನಗೆ ಅಪ್ಪಾಜಿ ಇದ್ದಂತೆ, ಅವರಿಗಾಗಿ ಪ್ರಚಾರಕ್ಕೆ ಬಂದಿದ್ದೇನೆ, ರಾಕೇಶ್ ಸಿದ್ದರಾಮಯ್ಯ ಅವರು ನನಗೆ ಚಿಕ್ಕಪ್ಪ ಆಗಬೇಕು, ಇದೇ ಮೊದಲ ಬಾರಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ, ಇಲ್ಲಿ ಅಪ್ಪಾಜಿ ಗೆಲ್ಲುತ್ತಾರೆ" ಎಂದು ಹೇಳಿದರು.

"ಸಿದ್ದರಾಮಯ್ಯ ಅವರ ಮೇಲೆ ಇಲ್ಲಿನ ಜನ ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ. ವರುಣಾ ಕ್ಷೇತ್ರ ಅಪ್ಪಾಜಿಯವರದ್ದೇ, ಅವರು ಇಲ್ಲಿನವರೇ, ಖಂಡಿತವಾಗಿಯೂ ಅವರು ಗೆದ್ದೇ ಗೆಲ್ಲುತ್ತಾರೆ, ಜನ ಅವರ ಕೈ ಹಿಡಿಯುತ್ತಾರೆ" ಎಂದು ನಿಶ್ವಿಕಾ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಜೊತೆ ರೋಡ್ ಶೋನಲ್ಲಿ ಭಾಗವಹಿಸಿದ ನಿಶ್ವಿಕಾ ನಾಯ್ಡು ಮತಯಾಚನೆ ಮಾಡಿದರು. ಇಲ್ಲಿ ಬಿಜೆಪಿ ಪಕ್ಷದಿಂದ ವಿ ಸೋಮಣ್ಣ ಕಣಕ್ಕಿಳಿದಿದ್ದು, ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಜಗ್ಗೇಶ್, ಅಮಿತ್ ಶಾ, ವಿಜಯೇಂದ್ರ, ಪ್ರತಾಪ್ ಸಿಂಹ ಇಲ್ಲಿ ಸೋಮಣ್ಣ ಪರವಾಗಿ ಭರ್ಜರಿಯಾಗಿ ಪ್ರಚಾರ ಮಾಡಿದ್ದಾರೆ.
ಬಿಜೆಪಿಗೆ ಕೌಂಟರ್ ಕೊಡಲು ಸಿದ್ದರಾಮಯ್ಯ ಕೂಡ ಸ್ಟಾರ್ ನಟ, ನಟಿಯರ ಜೊತೆ ಮತಬೇಟೆಗೆ ಇಳಿದಿದ್ದಾರೆ. ಶಿವರಾಜ್ ಕುಮಾರ್, ರಮ್ಯಾ, ನಿಶ್ವಿಕಾ ನಾಯ್ಡು ಸಿದ್ದರಾಮಯ್ಯ ಜೊತೆ ಪ್ರಚಾರದಲ್ಲಿ ಭಾಗವಹಿಸಿದರು. ಮೇ5ರಂದು ದುನಿಯಾ ವಿಜಯ್ ಕೂಡ ಸಿದ್ದರಾಮಯ್ಯ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ವರುಣಾದಲ್ಲಿ ಸದ್ಯ ಸ್ಟಾರ್ ವಾರ್ ನಡೆಯುತ್ತಿದ್ದು, ಜನ ಯಾರ ಕೈ ಹಿಡಿಯುತ್ತಾರೆ ಎನ್ನುವುದು ಮೇ 13ರಂದು ತಿಳಿಯಲಿದೆ.












Click it and Unblock the Notifications