ಆಷಾಢ ಮಾಸದ 3ನೇ ಶುಕ್ರವಾರ: ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಮೈಸೂರು, ಜುಲೈ 10: ಆಷಾಢ ಮಾಸದ ಮೂರನೇ ಶುಕ್ರವಾರ ಹಿನ್ನೆಲೆಯಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಶುಕ್ರವಾರ ಮುಂಜಾನೆಯಿಂದಲೇ ದೇವರಿಗೆ ವಿವಿಧ ಪೂಜೆಗಳನ್ನು ಸಲ್ಲಿಸಲಾಯಿತು. ಬಳಿಕ ದೇವಸ್ಥಾನದ ಒಳ ಆವರಣದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆಷಾಢ ಶುಕ್ರವಾರದಂದು ಕೇವಲ ನಿತ್ಯ ಪೂಜೆಗೆ ಸೀಮಿತವಾಗಿರುವ ಕಾರಣದಿಂದ ಮೂರನೇ ಶುಕ್ರವಾರವು ಸಹ ದೇವರಿಗೆ ಅಭಿಷೇಕ ನಂತರ ವಿಶೇಷ ಪೂಜೆ ನಡೆಯಿತು.

ದೇವಸ್ಥಾನಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಿರುವುದರಿಂದ ಪೂಜಾ ವಿಧಿ ವಿಧಾನಗಳು ನೆರವೇರಿದ ಬಳಿಕ ದೇವಸ್ಥಾನವನ್ನು ಮುಚ್ಚಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಮೂರನೇ ಶುಕ್ರವಾರವೂ ಚಾಮುಂಡಿ ಬೆಟ್ಟ ಖಾಲಿ ಖಾಲಿಯಾಗಿತ್ತು.

ದೇವಿಯ ದರ್ಶನ ಪಡೆದ ನಟ ದರ್ಶನ್
ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು. ತಮ್ಮ ಸ್ನೇಹಿತ ಉಪಮೇಯರ್ ಸಿ.ಶ್ರೀಧರ್ ಜೊತೆಗೂಡಿ ಬೆಟ್ಟಕ್ಕೆ ಆಗಮಿಸಿದ ದರ್ಶನ್, ದೇವರಿಗೆ ವಿಶೇಷ ಪೊಜೆ ಸಲ್ಲಿಸಿದರು. ಆಷಾಢ ಮಾಸದಲ್ಲಿ ಸ್ನೇಹಿತರ ಜೊತೆಗೂಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು.











Click it and Unblock the Notifications