ಚಂದ್ರಗ್ರಹಣ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ
ಮೈಸೂರು, ಆಗಸ್ಟ್ 7 : ಚಂದ್ರಗ್ರಹಣ ಪ್ರಯುಕ್ತ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಗ್ರಹಣ ಹಿನ್ನೆಲೆಯಲ್ಲಿ ರಾತ್ರಿ 10.51ರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದು, ಈ ವೇಳೆ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶವಿರುವುದಿಲ್ಲ. ಬೆಳಗ್ಗೆ 5.30ಕ್ಕೆ ದೇಗುಲದ ಶುದ್ಧೀಕರಣ ಕಾರ್ಯ ನಡೆಯಲಿದ್ದು, ಬಳಿಕ ತಾಯಿ ಚಾಮುಂಡೇಶ್ವರಿಗೆ ಅಭಿಷೇಕ, ಮಹಾಮಂಗಳಾರತಿ ಮಾಡಲಾಗುತ್ತದೆ ಎಂದು ದೇಗುಲದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

ಆದ್ದರಿಂದ ಆಗಸ್ಟ್ ಎಂಟರ ಬೆಳಗ್ಗೆ ದೇಗುಲದ ದರ್ಶನ ಅರ್ಧ ಗಂಟೆ ತಡವಾಗಿ ಆರಂಭವಾಗಲಿದೆ. ಬೆಳಗ್ಗೆ 7.30ರ ಬದಲು 8 ಗಂಟೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ.
ಚೆಲುವ ನಾರಾಯಣನ ದರ್ಶನ 6ಕ್ಕೆ ಮುಕ್ತಾಯ
ಚಂದ್ರಗ್ರಹಣ ಇರುವುದರಿಂದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವನಾರಾಯಣಸ್ವಾಮಿ ದರ್ಶನ ಸೋಮವಾರ ಸಂಜೆ 6 ಗಂಟೆಗೆ ಬಂದ್ ಆಗಲಿದೆ. ನಿತ್ಯ ರಾತ್ರಿ 8.30ರವರೆಗೆ ದರ್ಶನಕ್ಕೆ ಅವಕಾಶ ಕೊಟ್ಟು, ಬಳಿಕ ದೇಗುಲದ ಬಾಗಿಲು ಮುಚ್ಚಲಾಗುತ್ತಿತ್ತು.
ಆದರೆ, ಸೋಮವಾರ ಖಂಡಗ್ರಾಸ ಚಂದ್ರಗ್ರಹಣ ಇದ್ದು, ಚಲುವನಾರಾಯಣಸ್ವಾಮಿ ದೇಗುಲದಲ್ಲಿ ಸಂಜೆ 6 ಗಂಟೆಗೆ ದರ್ಶನ ಮುಕ್ತಾಯ ಮಾಡಲಾಗುತ್ತಿದೆ. ಸೋಮವಾರ ಬೆಳಗ್ಗೆ ಗ್ರಹಣದ ಶಾಂತಿಗಾಗಿ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಯಿತು.












Click it and Unblock the Notifications