ಮೈಸೂರು: ನಾಪತ್ತೆಯಾಗಿದ್ದ ಕೊಡಗಿನ ಯುವಕನ ಶವ ಪತ್ತೆ
ಮೈಸೂರು, ಸೆಪ್ಟೆಂಬರ್ 22: ನಾಪತ್ತೆಯಾಗಿದ್ದ ಕೊಡಗಿನ ಯುವಕನೊಬ್ಬ ಮೈಸೂರಿನ ಪಿರಿಯಾಪಟ್ಟಣದ ಕರಡಿಲಕ್ಕನ ಕೆರೆ ಏತ ನೀರಾವರಿಯ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ಇಂದು (ಸೆ.22) ನಡೆದಿದೆ.
ತಾಲೂಕಿನ ಚನ್ನಕೇಶವಪುರ ಬಳಿಯಿರುವ ಬೋವಿ ಕಾಲೋನಿ ಬಳಿ ಕರಡಿಲಕ್ಕನಕೆರೆಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸಗುತ್ತಿ ಗ್ರಾಮದ ಮುತ್ತಪ್ಪ ಎಂಬುವರ ಪುತ್ರ ಕೆ.ಎಂ.ಚೇತನ್ (23) ಎಂಬಾತನೇ ಶವವಾಗಿ ಪತ್ತೆಯಾದ ಯುವಕ.

ಕಳೆದ 12 ದಿನಗಳ ಹಿಂದೆ ನಾಪತ್ತೆಯಾಗಿದ್ದ ಚೇತನ್ ಬಗ್ಗೆ ಸೆ.12 ರಂದು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂಬ ಮಾಹಿತಿ ಮೇರೆಗೆ ಪೊಲೀಸರು ಯುವತಿಯನ್ನು ವಿಚಾರಣೆ ಮಾಡಿದಾಗ ಆಕೆಯ ಮನೆಯಲ್ಲಿ ಮೃತನ ಸ್ಕೂಟರ್ ಮತ್ತು ಮೊಬೈಲ್ ಸಿಕ್ಕಿತ್ತು. ಅವನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರದಂದು ಹಾರಂಗಿ ನಾಲೆಯಲ್ಲಿ ಮೃತ ದೇಹವು ತೇಲಿಬರುತ್ತಿರುವುದನ್ನು ಕಂಡ ಸ್ಥಳೀಯರು ಬೆಟ್ಟದಪುರ ಪೊಲೀಸರಿಗೆ ವಿಷಯ ತಿಳಿಸಿದಾಗ ಮೃತ ದೇಹವನ್ನು ನಾಲೆಯಿಂದ ಹೊರತೆಗೆದು ಪರಿಶೀಲಿಸಲಾಗಿದೆ. ಅದು ಚೇತನ್ ದೇಹ ಎಂದು ದೃಢಪಟ್ಟಿದ್ದು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಈ ಬಗ್ಗೆ ಬೆಟ್ಟದಪುರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಸ್ಥಳ ಪರಿಶೀಲಿಸಿ ದೂರು ದಾಖಲಿಸಿಕೊಂಡರು. ಮೃತನ ಅಣ್ಣ ಮಣಿಕಂಠ, ತನ್ನ ತಮ್ಮ ಕೂಡಿಗೆ ಬಳಿಯಿರುವ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಜ್ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಮೇಲ್ವಿಚಾರಕನಾಗಿ ಕಳೆದ 3 ತಿಂಗಳಿನಿಂದ ಕೆಲಸ ಮಾಡುತ್ತಿದ್ದ.
ಮಾದಲಾಪುರ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂಬ ಮಾಹಿತಿ ನೀಡಿದ್ದರು. ಮೊಬೈಲ್ ಮತ್ತು ಬೈಕ್ ಅವರ ಮನೆಯಲ್ಲಿ ದೊರಕಿರುವುದರಿಂದ ಚೇತನ್ ನನ್ನು ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತವಾಗಿದ್ದು, ಕುಶಾಲನಗರ ಪೊಲೀಸರು ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications