ಐದು ಮಾರ್ಗದಲ್ಲಿ ಮೈಸೂರಿನಲ್ಲಿ ಪಾರಂಪರಿಕ ನಡಿಗೆ: ಏನಿದರ ಉದ್ದೇಶ..?
ಮೈಸೂರು, ನವೆಂಬರ್ 03: ಮೈಸೂರು ಪಾರಂಪರಿಕ ನಗರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ನಗರ ಹತ್ತು ಹಲವು ವಿಶೇಷತೆಗಳನ್ನು ಹೊಂದಿದ್ದರೂ ಅದರೊಂದಿಗೆ ಇಲ್ಲಿ ಕಾಣ ಸಿಗುವ ಕಟ್ಟಡಗಳು ಇತಿಹಾಸ ಸಾರುತ್ತಿರುವುದಲ್ಲದೆ, ಪಾರಂಪರಿಕ ಪಟ್ಟಿಗೆ ನಗರವನ್ನು ಸೇರುವಂತೆ ಮಾಡಿದ್ದು, ನಗರದ ಪರಂಪರೆಯ ಖ್ಯಾತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತೆ ಮಾಡುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗುತ್ತದೆ.
ಹೊರಗಿನಿಂದ ಬಂದವರನ್ನು ಇಲ್ಲಿನ ಪಾರಂಪರಿಕ ಕಟ್ಟಡಗಳು ಸೆಳೆಯುತ್ತವೆ. ಈ ಕಟ್ಟಡಗಳ ಬಗ್ಗೆ ಯುವ ಜನತೆಗೆ ತಿಳಿಸುವುದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ನಗರದ ಕೀರ್ತಿಯನ್ನು ಪಸರಿಸುವ ಕಾರ್ಯಕ್ಕೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮುಂದಾಗಿದ್ದು, ದಸರಾ ಸಂದರ್ಭ ಕೈಗೊಂಡಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಮುಂದುವರೆಸಿದೆ.

ಇನ್ನು ಮುಂದೆ ಮೈಸೂರಿನಲ್ಲಿರುವ ನೂರಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಲು ಪ್ರತಿ ತಿಂಗಳು ಪಾರಂಪರಿಕ ನಡಿಗೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಅದರಂತೆ ಪ್ರತಿ ತಿಂಗಳ ಮೊದಲ ಶನಿವಾರ ನಡೆಸಲಾಗುತ್ತಿದೆ. ಪಾರಂಪರಿಕ ನಡಿಗೆಯು ಈ ಬಾರಿಯ ದಸರಾ ಮಹೋತ್ಸವದ ಮೆರುಗು ಹೆಚ್ಚಿಸಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ನ.4ರಂದು ನಡೆಯಲಿದೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿ
ಈ ಪಾರಂಪರಿಕ ನಡಿಗೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಪಾಲ್ಗೊಳ್ಳಬಹುದಾಗಿದ್ದು, ಇದರಿಂದ ಪಾರಂಪರಿಕ ಕಟ್ಟಡಗಳ ಅರಿವು, ಮಹತ್ವ ಸಾರುವ ಕಾರ್ಯ ವರ್ಷಪೂರ್ತಿ ನಡೆಯಲಿದೆ. ಇದರಿಂದ ಮೈಸೂರಿನ ನೂರಾರು ವರ್ಷಗಳ ಹಳೆಯ ಕಟ್ಟಡಗಳು, ಅರಮನೆಗಳು, ಪಾರಂಪರಿಕ ಸ್ಮಾರಕಗಳ ಬಗ್ಗೆ ಸ್ಥಳೀಯರಲ್ಲದೆ, ದೇಶ ವಿದೇಶಿಗರಿಗೂ ತಿಳಿಯಲು ಸಾಧ್ಯವಾಗಲಿದೆ.
ದಸರಾ ವೇಳೆ ಮೂರು ದಿನಗಳ ಕಾಲ ಪಾರಂಪರಿಕ ನಡೆಗೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದು ಯಶಸ್ವಿಯಾಗಿತ್ತು. ಈ ಯಶಸ್ಸನ್ನು ಮುಂದಿಟ್ಟುಕೊಂಡು ಈಗ ಪ್ರತಿ ತಿಂಗಳ ಮೊದಲ ಶನಿವಾರ ಪಾರಂಪರಿಕ ನಡಿಗೆ ಆಯೋಜಿಸಲಾಗಿದೆ. ಇದರಿಂದ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಮಾಡಲಾಗಿದೆ.

ಐದು ಮಾರ್ಗದಲ್ಲಿ ಪಾರಂಪರಿಕ ನಡಿಗೆ
ದಸರಾ ನಂತರದ ಮೊದಲ ಪಾರಂಪರಿಕ ನಡಿಗೆಯು ನ.4ರ ಶನಿವಾರ ಬೆಳಗ್ಗೆ 6.30ಕ್ಕೆ ನಗರದ ಪುರಭವನದಿಂದ ಆರಂಭಗೊಳ್ಳಲಿದೆ. ಭಾಗವಹಿಸುವವರು ನೇರವಾಗಿ ಪುರಭವನದ ಬಳಿ ತೆರಳಬೇಕಾಗುತ್ತದೆ. ಈ ಪಾರಂಪರಿಕ ನಡಿಗೆಯ ಕುರಿತಂತೆ ಪಾರಂಪರಿಕ ಕಟ್ಟಡಗಳನ್ನು ಕೂಡಿಸುವ ಐದು ಮಾರ್ಗದ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ.
ಅದು ಯಾವುದೆಂದರೆ? ಪುರಭವನ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ದೊಡ್ಡಗಡಿಯಾರ, ಕೆ.ಆರ್.ಮಾರುಕಟ್ಟೆ, ಕೆ.ಆರ್.ಆಸ್ಪತ್ರೆ, ಮಹಾರಾಜ ಕಾಲೇಜು, ಜಿಲ್ಲಾಧಿಕಾರಿ ಕಚೇರಿ ಹಳೇ ಕಟ್ಟಡ, ರೈಲ್ವೆ ನಿಲ್ದಾಣ, ಕ್ರಾಫರ್ಡ್ ಹಾಲ್, ಪರಕಾಲಮಠ, ಪದ್ಮಾಲಯ, ಮುಡಾ ವೃತ್ತ, ಕಾವಾ ಕಾಲೇಜಿನ ಹಳೇ ಕಟ್ಟಡ, ಫ್ರಿಮೇಷನ್ ಕ್ಲಬ್, ಚಾಮರಾಜೇಂದ್ರ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ, ಮೈಸೂರು ಮೆಡಿಕಲ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಹೀಗೆ ಎಲ್ಲ ಕಟ್ಟಡಗಳನ್ನು ಐದು ಮಾರ್ಗ ಸಂಧಿಸಲಿದೆ.
ಮಾಹಿತಿ ನೀಡಲಿರುವ ಇತಿಹಾಸ ತಜ್ಞರು
ಇನ್ನು ಪ್ರತಿ ತಿಂಗಳು ಒಂದೊಂದು ಮಾರ್ಗದಲ್ಲಿ ಪಾರಂಪರಿಕ ನಡಿಗೆ ನಡೆಯಲಿದ್ದು, ಇದರಿಂದ ನಗರದ ಎಲ್ಲ ಪಾರಂಪರಿಕ ಕಟ್ಟಡಗಳಿಗೆ ಭೇಟಿ ನೀಡಿ, ಸದರಿ ಕಟ್ಟಡಗಳ ಮಾಹಿತಿಯನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ತಿಳಿಯಲು ಸಾಧ‍್ಯವಾಗಲಿದೆ. ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸುವವರಿಗೆ ಮೈಸೂರಿನ ಇತಿಹಾಸ ತಜ್ಞರು ಪ್ರತಿಯೊಂದು ಪಾರಂಪರಿಕ ಕಟ್ಟಡದ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಮಹತ್ವ ತಿಳಿಸಿಕೊಡಲಿದ್ದಾರೆ.

ಪಾರಂಪರಿಕ ನಡಿಗೆ ಸಂಬಂಧ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನಗರದ ಎಲ್ಲ ಹೋಟೆಲ್, ಶಾಲಾ-ಕಾಲೇಜು, ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ. ಆ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ನಡಿಗೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲಾಗಿದೆ.
ಮೈಸೂರಿನಲ್ಲಿವೆ 100ಕ್ಕೂ ಹೆಚ್ಚು ಕಟ್ಟಡಗಳು
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಅವರು, ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ಮಹತ್ವ ಸಾರುವ ಸಲುವಾಗಿ ಪ್ರತಿ ತಿಂಗಳ ಮೊದಲ ಶನಿವಾರ ಪಾರಂಪರಿಕ ನಡಿಗೆ ಆಯೋಜಿಸಲಾಗುತ್ತಿದೆ. ಅದರಂತೆ ನ.೪ರಂದು ಕಾರ್ಯಕ್ರಮ ನಡೆಯಲಿದ್ದು, ಐದು ಮಾರ್ಗಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ತಿಂಗಳು ಒಂದೊಂದು ಮಾರ್ಗದಲ್ಲಿ ನಡಿಗೆ ಇರಲಿದ್ದು, ಆಸಕ್ತಿ ಇರುವವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಮೈಸೂರು ನಗರದಲ್ಲಿ 600ಕ್ಕೂ ಹೆಚ್ಚು ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು. ಈ ಪೈಕಿ ಕೆಲ ಕಟ್ಟಡಗಳು ಈಗಾಗಲೇ ಹಾಳಾಗಿವೆ. ನೂರು ವರ್ಷ ತುಂಬಿರುವ 100 ಕಟ್ಟಡ ಮೈಸೂರಿನಲ್ಲಿ ಇವೆ. ಹತ್ತಾರು ಅರಮನೆಗಳಿವೆ. ನೂರು ವರ್ಷ ತುಂಬಿರುವ ಅನೇಕ ಮನೆಗಳೂ ಇವೆ. ಉಳಿದ ಕಟ್ಟಡಗಳ ರಕ್ಷಣೆಗೆ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆ, ನಗರಪಾಲಿಕೆ, ಸರ್ಕಾರ ಹಾಗೂ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ವಹಿಸುತ್ತಿವೆ.
ಇದು ಪಾರಂಪರಿಕ ನಡಿಗೆಯ ಉದ್ದೇಶ
ಸಾರ್ವಜನಿಕರೂ ಪಾರಂಪರಿಕ ಕಟ್ಟಡಗಳ ಐತಿಹ್ಯದ ಅರಿತು, ಅವುಗಳನ್ನು ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಈ ಮೂಲಕ ಪಾರಂಪರಿಕ ನಗರಿ ಮೈಸೂರಿನ ಹೆಸರನ್ನು ಮುಂದಿನ ತಲೆಮಾರಿನವರೆಗೂ ಉಳಿಸಬೇಕಾಗಿದೆ ಎಂಬುದು ಪಾರಂಪರಿಕ ನಡಿಗೆಯ ಪ್ರಮುಖ ಉದ್ದೇಶವಾಗಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications