ಮೈಸೂರಿನಲ್ಲಿ ಸಾಹಿತ್ಯ ಜಾತ್ರೆ, ಮೊದಲ ದಿನದ ಮುಖ್ಯಾಂಶಗಳು
ಮೈಸೂರು, ನವೆಂಬರ್ 24 : ಮೂರು ದಿನಗಳ ಕನ್ನಡ ಸಾಹಿತ್ಯ ಜಾತ್ರೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶುಕ್ರವಾರ ಚಾಲನೆ ಸಿಕ್ಕಿದೆ. ಸಮ್ಮೇಳನದ ಮೊದಲ ದಿನದ ಮುಖ್ಯಾಂಶಗಳು ಇಲ್ಲಿವೆ.
ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ
* 'ಕನ್ನಡ ಕುಲದೋಳ್ ಅಡಗಿದೆ ಮಾನವೀಯ ಧರ್ಮ' ಎಂಬುದಕ್ಕೆ ಸಾಕ್ಷಿಯಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಆಗಮಿಸಿದ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂಪಾ ಬಳಲಿಕೆಯಿಂದ ತಲೆಸುತ್ತು ಬಂದು ಸಂಘಟಕರಿಂದ ಮತ್ತು ತಮ್ಮ ಶ್ರೀಮತಿ ನೀಲಾ ಚಂಪಾ ಅವರಿಂದ ಉಪಚರಿಸಿಕೊಂಡರು.
* ಮುಖದಲ್ಲಿ ಬೆವರು ಮೂಡಿ ತಲೆ ಸುತ್ತು ಬಂದ ಕಾರಣ ಅವರನ್ನು ಸಂಘಟಕರು ಮುಖ್ಯ ವೇದಿಕೆ ಬಲಭಾಗಕ್ಕೆ ಕರೆತಂದು ಆಹ್ವಾನ ಪತ್ರಿಕೆಗಳ ಮೂಲಕ ಗಾಳಿ ಬೀಸಿದರು. ಶ್ರೀಮತಿ ನೀಲಾ ಚಂಪಾ ಅವರು ಸೆರಗಿನಿಂದ ಗಾಳಿ ಬೀಸಿದರು. ಸ್ವಲ್ಪ ನೀರು ಕುಡಿದು, ಚೇತರಿಸಿಕೋಂಡರು.

* ವೇದಿಕೆಯಲ್ಲಿ ಲವಲವಿಕೆಯಿಂದ ಇದ್ದರು. ಜೊತೆಗೆ ತಮ್ಮ ಮಾತಿನ ಸರದಿ ಬಂದಾಗ ಎಂದಿನ ಧಾರವಾಡದ ಜವಾರಿ ಧ್ವನಿಯಲ್ಲೇ ಮಾತನಾಡಿದರು. ಚಂಪಾ ಅವರು ವೇದಿಕೆಗೆ ಬಂದಾಗ ಮಧ್ಯಾಹ್ನವಾಗಿತ್ತು. ಇದರಿಂದಾಗಿ ಬಳಲಿದ್ದ ಪ್ರೊ. ಚಂಪಾ ವೇದಿಕೆಗೆ ಬಂದು ಆಸೀನರಾದ ಕೆಲವೇ ಕ್ಷಣಗಳಲ್ಲಿ ಸುಸ್ತಾದರು.
* ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೂರದ ಜಿಲ್ಲೆಗಳಿಂದ ಬಂದಿದ್ದ ನೋಂದಾಯಿತ ಪ್ರತಿನಿಧಿಗಳು, ತಮಗೆ ಸಿಗಬೇಕಾದ ಕಿಟ್‍ಬ್ಯಾಗ್, ಓಓಡಿ ರಸೀತಿ ಹಾಗೂ ಊಟದ ಕೂಪನ್ ಸಿಕ್ಕಿಲ್ಲ ಎಂಬ ಕಾರಣದಿಂದ ಸಮ್ಮೇಳನಾಧ್ಯಕ್ಷರ ಭಾಷಣದ ವೇಳೆ ಪ್ರತಿಭಟನೆ ನಡೆಸಿದರು.
* ಸಮ್ಮೇಳನದ ಆರಂಭಕ್ಕೂ ಮುನ್ನ ಜಿಲ್ಲಾವಾರು ತೆರೆಯಲಾಗಿದ್ದ ಶಾಖೆಗಳಲ್ಲಿ ಆಯಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ 250 ರೂಪಾಯಿ ಪಾವತಿಸಿ ರಸೀತಿ ಪಡೆದು ಬಂದಿದ್ದವರಿಗೆ ಒಂದು ಕಿಟ್‍ಬ್ಯಾಗ್ ನೀಡಲಾಗುತ್ತಿತ್ತು. ಆ ಬ್ಯಾಗಿನೊಳಗೆ ಊಟದ ಕೂಪನ್, ನೋಟ್‍ಪ್ಯಾಡ್ ಹಾಗೂ ಪೆನ್ ಇದ್ದವು. ಇದರೊಂದಿಗೆ ಓಓಡಿ ಮೇಲೆ ಬಂದಿದ್ದ ಸರ್ಕಾರಿ ನೌಕರರಿಗೆ ಓಓಡಿ ರಸೀತಿ ನೀಡಬೇಕಿತ್ತು. ಆರಂಭದಲ್ಲಿ ಈ ರಸೀತಿಗಳನ್ನು ನೀಡಲಾಯಿತು. ಆದರೆ ಮಧ್ಯಾಹ್ನದ ನಂತರ ಕೌಂಟರ್‌ಗಳಲ್ಲಿ ಯಾರೂ ಇರಲಿಲ್ಲ.

* ಇದರಿಂದ ಕೆರಳಿದ ಕೆಲವರು ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ ಪಾಟೀಲರು ಭಾಷಣ ಮಾಡುವಾಗಲೇ ವೇದಿಕೆ ಹತ್ತಿರ ಬಂದು ಘೋಷಣೆ ಕೂಗಿದರು. ಪರಿಸ್ಥಿತಿಯನ್ನು ಹೀಗೆ ಬಿಟ್ಟರೆ ಕಷ್ಟವಾಗುತ್ತದೆ ಎನ್ನುವುದನ್ನು ಅರಿತ ಪೊಲೀಸರು ಲಾಠಿ ಬೀಸುವ ಪ್ರಯತ್ನ ಮಾಡಿ ಗುಂಪನ್ನು ಚದುರಿಸಿದರು.
* ಸರ್ವಾಧ್ಯಕ್ಷರ ಮೆರವಣಿಗೆ ಇರ್ವಿನ್ ರಸ್ತೆಗೆ ಬಂದಾಗ ಎಲ್ಲಿಲ್ಲದ ಅತ್ಯುತ್ಸಾಹ ಕಾಣಿಸಿಕೊಂಡಿತು. ವಿವಿಧ ಜಿಲ್ಲೆಗಳು ಮತ್ತು ಹೊರನಾಡಿನ ಕನ್ನಡ ಸಂಸ್ಥೆಗಳ ಪ್ರತಿನಿಧಿಗಳನ್ನು ಹೊತ್ತು ತರುತ್ತಿದ್ದ ಶಾಹಿ ಟಾಂಗಾಗಳು ವೇಗವಾಗಿ ಹೋಗುವ ಭರದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡವು.
* ಟಾಂಗ ಎಳೆಯುತ್ತಿದ್ದ ಅಮಾಯಕ ಕುದುರೆಯೊಂದು ಈ ಸಮಯ ದಿಢೀರನೆ ಕುಸಿದು ಬಿದ್ದು ಆತಂಕ ಸೃಷ್ಟಿಸಿತು. ಈ ಮೂಕ ಪ್ರಾಣಿ ಬಿದ್ದ ರಭಸಕ್ಕೆ ಏಳಲಾಗದೇ ಗಾಬರಿಯಿಂದ ಒದ್ದಾಡಿತು. ಒಂದಷ್ಟು ಜನ ಸುತ್ತುವರೆದು ಕುದುರೆಯನ್ನು ಎತ್ತಿ ನಿಲ್ಲಿಸಿ, ಕತ್ತು ಬೆನ್ನು ಸವರಿ ಸಮಾಧಾನಿಸಿದ ನಂತರ ಮೆರವಣಿಗೆ ಮುಂದುವರೆಯಿತು.
* ಕನ್ನಡ ನಾಡು, ನುಡಿ, ಸಂಸ್ಕೃತಿ ಮೇಳೈಸಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿತ ವಾಣಿಜ್ಯ ಮೇಳ ದಿಂದ ಸಾಹಿತ್ಯಾಭಿಮಾನಿಗಳು ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದರು.
* ಪುಸ್ತಕ ಮಳಿಗೆಗಳಲ್ಲಿ ಗಿಜಿಗುಡುತ್ತಿದ್ದ ಕನ್ನಡಾಭಿಮಾನಿಗಳು ಅಲ್ಲೇ ಪಕ್ಕದಲ್ಲೇ ವ್ಯವಸ್ಥಿತವಾಗಿ ಆಯೋಜಿತವಾಗಿದ್ದ ವಾಣಿಜ್ಯ ಮೇಳದ ಮಳಿಗೆಗಳತ್ತ ಚಿತ್ತ ಹರಿಸಲಿಲ್ಲ. ಹೀಗಾಗಿ ವಾಣಿಜ್ಯ ಮಳಿಗೆಗಳು ಜನರಿಲ್ಲದೆ ಬಣಗುಡುತ್ತಿದ್ದ ದೃಶ್ಯ ಕಂಡು ಬಂದಿತು.
* ವಾಣಿಜ್ಯ ಮೇಳದಲ್ಲಿ 242 ಮಳಿಗೆಗಳು ತೆರೆದಿದ್ದು, ಸಾಕಷ್ಟು ಮಳಿಗೆಗಳು ಮಹಿಳೆಯರಿಗೆ ಸರ, ಸೀರೆ, ಬಟ್ಟೆಗಳಿಗೆ ಸೀಮಿತವಾಗಿದ್ದರೆ ಮತ್ತೆ ಹಲವಷ್ಟು ಮಳಿಗೆಗಳು ತಿಂಡಿ ತಿನಿಸುಗಳ ಮಾರಾಟಕ್ಕಷ್ಟೆ ಸೀಮಿತವಾಗಿತ್ತು.












Click it and Unblock the Notifications