ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿವಿಧ ಯೋಜನೆಗಳಿಗೆ ₹600 ಕೋಟಿ ಹೂಡಿಕೆ-ಮಾಹಿತಿ ಇಲ್ಲಿದೆ
ಮೈಸೂರು, ಆಗಸ್ಟ್, 06: ರಾಜ್ಯ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಹಾಗೆಯೇ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿವಿಧ ಯೋಜನೆಗಳಿಗೆ 600 ಕೋಟಿ ರೂಪಾಯಿ ಹೂಡಿಕೆ ಬಂದಿಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಹಾಗಾದರೆ ಯಾವೆಲ್ಲ ಯೋಜನೆಗಳಿಗೆ ಎಷ್ಟು ಹೂಡಿಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೈಸೂರಿನಲ್ಲಿ ಇಂದು (ಆಗಸ್ಟ್ 6) ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್ಎ) ಸಹಯೋಗದಲ್ಲಿ 4ನೆ ಆವೃತ್ತಿ ಅನಾವರಣಗೊಳಿಸಲಾಯಿತು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ.

ಎಲೆಕ್ಟ್ರಾನಿಕ್ಸ್ ಸಿಸ್ಟಂಸ್ ಡಿಸೈನ್ ಮತ್ತು ತಯಾರಿಕೆ (ESDM) ವಲಯದಲ್ಲಿ ರಾಜ್ಯವನ್ನು ಜಾಗತಿಕ ನಾಯಕನನ್ನಾಗಿಸುವ ಗುರಿ ಹೊಂದಲಾಗಿದ್ದು, ವಿಶ್ವ ಮಟ್ಟದಲ್ಲಿ ಹೂಡಿಕೆಗಳ ಹರಿವು ಹೆಚ್ಚಿಸುವುದು, ಹೊಸ ಉದ್ಯಮ ಆರಂಭಿಸಲು ಉತ್ತೇಜನ ನೀಡುವುದು ಮತ್ತು ಈಗಾಗಲೇ ಆರಂಭಿಸಿರುವ ಉದ್ಯಮಗಳನ್ನು ಉಳಿಸಿಕೊಳ್ಳುವ ಉದ್ದೇಶ ರಾಜ್ಯ ಸರ್ಕಾರದ್ದಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸೆಮಿಕಂಡಕ್ಟರ್, ಎಲಿಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ ಮತ್ತು ಘಟಕ ಗೋದಾಮುಗಳು ಸೇರಿ 20ಕ್ಕೂ ಹೆಚ್ಚು ಇಎಸ್‌ಡಿಎಂ ಕಂಪನಿಗಳು ಕ್ಲಸ್ಟರ್‌ಗೆ ಸೇರ್ಪಡೆ ಮಾಡುತ್ತಿದ್ದು, ಸುಮಾರು 600 ಕೋಟಿ ರೂಪಾಯಿಗಳ ಹೊಸ ಹೂಡಿಕೆ ಹರಿದು ಬಂದಿದೆ ಎಂದು ತಿಳಿಸಿದ್ದಾರೆ. ಇನ್ನು ಹೆಚ್ಚುವರಿಯಾಗಿ, 150 ಹೆಕ್ಟೇರ್‌ಗಳಷ್ಟು ಪಿಸಿಬಿ ಕ್ಲಸ್ಟರ್ ಅನ್ನು ಸ್ಥಾಪಿಸುವ ಉದ್ದೇಶದಿಂದ ಪ್ರಸ್ತುತ ಪರೀಕ್ಷಾ ಸೌಲಭ್ಯವನ್ನು ವಿಸ್ತರಿಸಲು, ಮಲ್ಟಿಟೆನೆನ್ಸಿ ಕ್ಲೀನ್ ರೂಂ ಅನ್ನು ಸೇರಿಸಲು ಉದ್ದೇಶಿಸಲಾಗಿದ್ದು, ಇದು 5000 ಹೊಸ ಉದ್ಯೋಗಗಳಿಗೆ ಚಾಲನೆ ನೀಡಲಿದೆ ಎಂದು ಹೇಳಿದರು.
ಅಲ್ಲದೆ, ಮಹಿಳಾ ಉದ್ಯೋಗಿಗಳನ್ನು ಸಬಲೀಕರಣಗೊಳಿಸಲು ಸಹಕಾರ ಆಗಲಿದ್ದು, ಈ ಎಲ್ಲಾ ಬೆಳವಣಿಗೆಯಿಂದ ಜಾಗತಿಕ ಕಂಪನಿಗಳು ಮೈಸೂರಿನಲ್ಲಿ ಅಭಿವೃದ್ಧಿ ಹೊಂದಲು ಇದು ಉತ್ತಮ ಸಮಯ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮನೆ ಹಾನಿ ಸಂಸ್ತ್ರಸ್ತರಿಗೆ ಪರಿಹಾರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದು ರೈತರ ಬೆಳೆಗಳನ್ನೆಲ್ಲ ನುಂಗಿಬಿಟ್ಟಿದ್ದಾನೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಹಲವೆಡೆ ಬೆಳಗಳೆಲ್ಲ ನಾಶವಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಹಲವುರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇದೀಗ ಮನೆ ಹಾನಿ ಸಂಸ್ತ್ರಸ್ತರಿಗೆ ಪರಿಹಾರದ ಜೊತೆಗೆ ಮನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ 1.2 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ಮನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಇಂದು (ಆಗಸ್ಟ್ 05) ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿಯು ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು, ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಈ ನೆರವಿನ ದುರುಪಯೋಗವಾಯಿತು. ಹಲವರಿಗೆ ಮೊದಲನೇ ಕಂತು ಮಾತ್ರ ಬಿಡುಗಡೆಯಾಗಿ, ಎರಡು ಹಾಗೂ ಮೂರನೇ ಕಂತಿನ ಈವರೆಗೂ ದೊರೆತಿಲ್ಲ.
ಈ ಹಿನ್ನೆಲೆ ನಮ್ಮ ಸರ್ಕಾರ 1.2 ಲಕ್ಷ ರೂಪಾಯಿ ಪರಿಹಾರ ಹಾಗೂ ಮನೆ ನೀಡುವ ನಿರ್ಧಾರ ಮಾಡಿದೆ ಎಂದರು.
ಜನರ ಸಹಕಾರ ಇದ್ದರೆ ಪದೇ ಪದೇ ಮುಳುಗಡೆ ಆಗುವ ಹಳ್ಳಿಗಳ ಸ್ಥಳಾಂತರ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಲು ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು. ಇನ್ನು ರಾಜ್ಯದ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಎಲ್ಲ ಕಡೆ ಪರಿಹಾರ ಕೆಲಸಗಳನ್ನು ಪ್ರಾರಂಭಿಸಲಾಗಿದೆ ಎಂದರು.












Click it and Unblock the Notifications