ಸಿದ್ದರಾಮೋತ್ಸವಕ್ಕೆ 495 ಬಸ್, 600 ಇತರ ವಾಹನಗಳ ವ್ಯವಸ್ಥೆ!
ಮೈಸೂರು, ಜುಲೈ, 30: ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯುವ ಸಿದ್ದರಾಮಯ್ಯ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವಕ್ಕೆ ಮೈಸೂರು ಜಿಲ್ಲೆಯಿಂದ ಹೊರಡುವವರಿಗೆ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. 495 ಬಸ್, 600ಕ್ಕೂ ಹೆಚ್ಚು ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಹೋತ್ಸವ ಸಮಿತಿ, ಜಿಲ್ಲಾ ಸಮಿತಿ ಮುಖ್ಯ ಸಂಚಾಲಕ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಈ ಕುರಿತು ಸಮಿತಿ ಸಭೆಗಳನ್ನು ಮಾಡಿ ಅಗತ್ಯ ಸೌಕರ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯಿಂದ 25,000 ಜನ ಪಾಲ್ಗೊಳ್ಳಲಿದ್ದು, ಒಟ್ಟಾರೆ ಎಲ್ಲಾ ಜಿಲ್ಲೆಗಳಿಂದ 6 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು. ರಾಜ್ಯದ ಜನತೆಯೇ ಸ್ವಯಂಪ್ರೇರಿತವಾಗಿ ಆಚರಿಸುತ್ತಿರುವ ಕಾರ್ಯಕ್ರಮವಾಗಿದ್ದು, ಇದು ರಾಜಕೀಯ ಶಕ್ತಿ ಪ್ರದರ್ಶನವಲ್ಲ ಎಂದರು. 75 ವರ್ಷ ಪೂರೈಸಿರುವ ಸಿದ್ದರಾಮಯ್ಯ ಅವರು ಹುಟ್ಟುಹಬ್ಬ ಆಚರಣೆಗೆ ಪ್ರಾಮುಖ್ಯತೆ ನೀಡುವುದಿಲ್ಲ. ಜನರು ಹಿಂದಿನಿಂದಲೂ ಸ್ವಯಂ ಪ್ರೇರಿತವಾಗಿ ನಾನಾ ಸೇವಾ ಕಾರ್ಯ ಹಮ್ಮಿಕೊಳ್ಳುತ್ತಿದ್ದಾರೆ. ಅದೇ ಮಾದರಿಯಲ್ಲಿ ಅಮೃತ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಭವಿಷ್ಯದ ಹೊಸತಲೆಮಾರಿನ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಮತ್ತು ರಾಜಕೀಯ ಬದುಕು ಮಾದರಿಯಾಗಿದೆ ಎಂದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಸಿದ್ಧತಾ ಸಭೆಯ ನೇತೃತ್ವ ವಹಿಸಿರುವ ಜಿಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ, ನಮ್ಮ ಕ್ಷೇತ್ರದಿಂದ ಪ್ರತಿ ಪಂಚಾಯಿತಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ತಮ್ಮ ರಾಜಕೀಯ ಜೀವನ ಕಂಡುಕೊಂಡರು. ಕ್ಷೇತ್ರದ ಪ್ರತಿಯೊಬ್ಬರಿಗೂ ಈ ಸಮಾರಂಭವನ್ನು ಕಣ್ತುಂಬಿಕೊಳ್ಳಬೇಕು ಎಂಬ ಹಂಬಲವಿದೆ. ನನ್ನಂತಹ ಸಾವಿರಾರು ಮುಖಂಡರನ್ನು ರಾಜಕಾರಣದಲ್ಲಿ ಬೆಳೆಸಿದ ಸಿದ್ದರಾಮಯ್ಯ ಅವರ ಅಮೃತಮಹೋತ್ಸವ ಹೊಸ ರಾಜಕಾರಣಿಗಳಿಗೆ ದಾರಿ ದೀಪವಾಗಲಿದೆ ಎಂದರು.

ಸಭೆಯಲ್ಲಿ ಕೆಪಿಸಿಸಿ ಸದಸ್ಯ ನರಸೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಾದೇವ, ತಾಪಂ ಮಾಜಿ ಸದಸ್ಯ ಸಿದ್ದಲಿಂಗಪುರ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ್, ಗುರುಸ್ವಾಮಿ, ಮಾಜಿ ಅಧ್ಯಕ್ಷರಾದ ಸಿದ್ದರಾಜು, ಉಮಾಶಂಕರ್, ಮಾಜಿ ಸಿಂಡಿಕೇಟ್ ಸದಸ್ಯರಾದ ಕುಮಾರ್, ಕಾಂಗ್ರೆಸ್ ಮುಖಂಡ ಕೋಟೆ ಹುಂಡಿ ಮಾದೇವ, ಕೃಷ್ಣಕುಮಾರ್ ಸಾಗರ್ ಸೇರದಂತೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications