ಚೀರನಹಳ್ಳಿಯಲ್ಲಿ ಖಾಸಗಿ ಶಾಲಾ ಬಸ್ ಹರಿದು 9 ವರ್ಷದ ಬಾಲಕಿ ದುರ್ಮರಣ
ಮೈಸೂರು, ಸೆಪ್ಟೆಂಬರ್.8 : ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಸರ್ಕಾರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಸ್ಥಳದಲ್ಲೇ ಅಸುನೀಗಿದ ದಾರುಣ ಘಟನೆ ಕೆ. ಆರ್.ನಗರ ಸಮೀಪದ ಚೀರನಹಳ್ಳಿಯಲ್ಲಿ ನಡೆದಿದೆ.
ಚೀರನಹಳ್ಳಿ ನಿವಾಸಿ ಶಿವಣ್ಣ ಅವರ ಮಗಳು ಪಲ್ಲವಿ (9) ದುರ್ಮರಣಕ್ಕೀಡಾದ ಬಾಲಕಿ. ಪಲ್ಲವಿ ಗ್ರಾಮದ ಸರ್ಕಾರಿ ಶಾಲೆಗೆ ತೆರಳುತ್ತಿದ್ದಾಗ ಕೆ.ಆರ್.ನಗರದ ಬಳೆ ವಿದ್ಯಾ ಸಂಸ್ಥೆ'ಗೆ ಸೇರಿದ ಶಾಲಾ ಬಸ್(ಕೆಎ 45-4466) ಡಿಕ್ಕಿ ಹೊಡೆದಿದೆ. ಸುದ್ದಿ ತಿಳಿದ ಪಟ್ಟಣದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.
ಬಾಲಕಿಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಒಯ್ದು, ಶವಪರೀಕ್ಷೆ ಬಳಿಕ ಪೋಷಕರಿಗೆ ಒಪ್ಪಿಸಿದರು. ಮಗಳನ್ನು ಕಳೆದುಕೊಂಡ ತಾಯಿ-ತಂದೆ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ದೃಶ್ಯ ಎಂಥವರ ಮನಸ್ಸನ್ನೂ ಕಲುಕುವಂತೆ ಮಾಡಿತು.

ಅಪಘಾತ ಪ್ರಕರಣ ದಾಖಲಿಸಿಕೊಂಡು ಶಾಲಾ ವಾಹನದ ಚಾಲಕ ರವಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ವಾಹನವನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications