ಮೈಸೂರಿನಲ್ಲಿ 150 ರೈಲ್ವೇ ಬೋಗಿಗಳಾಗುತ್ತಿವೆ ಐಸೊಲೇಶನ್ ವಾರ್ಡ್
ಮೈಸೂರು, ಏಪ್ರಿಲ್ 04: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಈಗಾಗಲೇ ಸ್ಥಗಿತಗೊಳಿಸಿರುವ ರೈಲು ಗಾಡಿಗಳನ್ನು ಕ್ವಾರಂಟೈನ್ ವಾರ್ಡ್ ಗಳನ್ನಾಗಿ ಪರಿವರ್ತಿಸುವಲ್ಲಿ ತೊಡಗಿದೆ. ಮುಂದಿನ 10 ದಿನಗಳಲ್ಲಿ ಮೈಸೂರಿನಲ್ಲಿ 150 ರೈಲ್ವೆ ಬೋಗಿಗಳು ಕ್ವಾರಂಟೈನ್ ವಾರ್ಡ್ ಗಳಾಗಿ ರೂಪುಗೊಳ್ಳಲಿವೆ.
ಮೈಸೂರಿನ ರೈಲ್ವೆ ನಿಲ್ದಾಣದಲ್ಲಿರುವ ಬಿಇಒ ಕಚೇರಿ ಬಳಿ 18 ಹಾಗೂ ವರ್ಕ್ ಶಾಪ್ ಆವರಣದಲ್ಲಿ 120 ಕೋಚ್ ಗಳನ್ನು ಐಸೊಲೇಶನ್ ವಾರ್ಡ್ ಗಳಾಗಿ ಪರಿವರ್ತಿಸಲಾಗುತ್ತಿದ್ದು, ಅಲ್ಲಿ ರೋಗಿಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಬೇಕಾದ ಗಾಳಿ, ಬೆಳಕು, ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಇರಲಿದೆ.
ರೈಲ್ವೆ ಮಂಡಳಿಯ ತೀರ್ಮಾನದಂತೆ ಕ್ವಾರೆಂಟೈನ್ ನಲ್ಲಿರಬೇಕಾದ ವ್ಯಕ್ತಿಗಳ ವಾಸ್ತವ್ಯಕ್ಕಾಗಿ ಮೈಸೂರಿನಲ್ಲಿ 138 ಕೋಚ್ ಗಳನ್ನು ಕೋವಿಡ್ -19 ಕ್ವಾರೆಂಟೈನ್ ಕೋಚ್ ಆಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗಿದ್ದು, ಮುಂದಿನ 10 ದಿನಗಳಲ್ಲಿ ರೈಲ್ವೆ ಕೋಚ್ ಗಳು ಕೋವಿಡ್ ಕ್ವಾರಂಟೈನ್ ಕೋಚ್ ಗಳಾಗಿ ಬದಲಾಗಲಿವೆ. ಸೀನಿಯರ್ ಡಿವಿಜನಲ್ ಮೆಕ್ಯಾನಿಕಲ್ ಇಂಜಿನಿಯರ್ ಶಾಂತಿ ಬಾಬು ಅವರು ಮಾಹಿತಿ ನೀಡಿ, "ಈಗಾಗಲೇ ಬೋಗಿಗಳಲ್ಲಿರುವ ವಸ್ತುಗಳನ್ನು ತೆರವುಗೊಳಿಸಿ, ವೈದ್ಯಕೀಯ ಸೇವೆಗೆ ಅಗತ್ಯವಿರುವಂತೆ ಕೋಚ್ ಬದಲಿಸುವ ಕಾರ್ಯ ಆರಂಭಿಸಲಾಗಿದೆ. ನಾನಾ ಹಂತಗಳಲ್ಲಿ ಹಲವು ಬದಲಾವಣೆ ಮೂಲಕ ಬೋಗಿಗಳನ್ನು ಐಸೊಲೇಶನ್ ವಾರ್ಡ್ ಆಗಿ ಪರಿವರ್ತಿಸಲಾಗುವುದು" ಎಂದು ತಿಳಿಸಿದ್ದಾರೆ.

ರೋಗಿಗಳಿಗೆ ಅಗತ್ಯವಾದ ವೆಂಟಿಲೇಟರ್ ಇರಿಸಲು ಸೂಕ್ತ ವ್ಯವಸ್ಥೆ ಮಾಡಲಾಗುತಿದ್ದು, ಸಂಪರ್ಕ ತಡೆಯಲ್ಲಿರುವವರಿಗೆ ಯಾವುದೇ ರೀತಿಯ ಅನನುಕೂಲವಾಗದಂತೆ ಪ್ರತಿ ಕೋಚ್ ನಲ್ಲಿ ಎರಡು ಸ್ನಾನದ ಕೋಣೆ, ಎರಡು ಶೌಚಾಲಯ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪ್ರತಿ ಕೋಚ್ ನಲ್ಲಿಯೂ 8 ಪ್ರತ್ಯೇಕ ಕ್ಯಾಬಿನ್ ನಿರ್ಮಾಣವಾಗಲಿದ್ದು, ಲ್ಯಾಪ್ ಟಾಪ್, ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಜಾಗ, ಚಿಕಿತ್ಸೆಗೆ ಬೇಕಾದ ವಸ್ತುಗಳನ್ನು ಇಡಲು, ವಾಟರ್ ಬಾಟಲ್ ಇಟ್ಟುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾರೂ ಒಳಗೆ ಹಾಗೂ ಹೊರಗೆ ಹೋಗಲು ಸಾಧ್ಯವಾಗದಂತೆ ಕೋಚ್ ನ ಪ್ರವೇಶ ಹಾಗೂ ನಿರ್ಗಮನ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಮುಂದೆ ಎದುರಾಗಲಿರುವ ಯಾವುದೇ ರೀತಿಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.












Click it and Unblock the Notifications