ಸಾಲದ ಹಣಕ್ಕೆ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದವರ ಬಂಧನ
ಮೈಸೂರು, ಜೂನ್ 13 : ಸಾಲ ವಾಪಸ್ ನೀಡದಿದ್ದಕ್ಕೆ ವ್ಯಕ್ತಿಯೊಬ್ಬ 15 ವರ್ಷದ ಹುಡುಗಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆ ಕುರಿತಂತೆ ಇಬ್ಬರು ಆರೋಪಿಗಳನ್ನು ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.
ಪದ್ಮಾ ಮತ್ತು ಪ್ರಸನ್ನಕುಮಾರ್ ಬಂಧಿತರು. ಇವರು ಬಾಲಕಿಯ ತಂದೆಗೆ ಮೀಟರ್ ಬಡ್ಡಿಗೆ ಸಾಲ ನೀಡಿದ್ದರು. ಆದರೆ, ಬಡ್ಡಿ ಹಾಗೂ ಸಾಲ ವಾಪಸ್ ಬಂದಿರಲಿಲ್ಲ. ಹೀಗಾಗಿ, ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಒಡನಾಡಿ ಸೇವಾ ಸಂಸ್ಥೆಯ ನೆರವಿನಿಂದ ಸಂತ್ರಸ್ತ ಬಾಲಕಿಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಜೂನ್ 6 ರಂದು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಮುಖ್ಯಸ್ಥರ ನೆರವಿನಿಂದ ಪೊಲೀಸರು ಈ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯನ್ನು ವೇಶ್ಯಾವಟಿಕೆಗೆ ತಳ್ಳಿದ ಮನೆ ಮಾಲೀಕ, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಬಂಧಿಸಿರುವ ಪೊಲೀಸರು, ಈ ಜಾಲದಲ್ಲಿ ತೊಡಗಿಕೊಂಡಿರುವ ಉಳಿದ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇತ್ತೀಚೆಗಷ್ಟೆ ಉತ್ತರ ಪ್ರದೇಶದ ಅಲಿಘರ್ ನಲ್ಲೂ ಕೇವಲ 10 ಸಾವಿರ ರುಪಾಯಿ ಸಾಲ ತೀರಿಸದಿದ್ದಕ್ಕಾಗಿ ಮೂರು ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ತುಂಡುತುಂಡು ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದನ್ನು ನೆನಪಿಸಿಕೊಳ್ಳಬಹುದು. ಈ ಹತ್ಯೆಯನ್ನು ಮೊಹಮ್ಮದ್ ಜಾಹಿದ್ ಎಂಬ ಮುಸಲ್ಮಾನ ಯುವಕ ಮಾಡಿದ್ದಾನೆಂದು ತಿಳಿದುಬಂದಿತ್ತು. ಬಾಲಕಿಯ ಪೋಷಕರು ಜಾಹಿದ್ ನಿಂದ 10 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಅದನ್ನು ತೀರಿಸಲು ಸಾಧ್ಯವಾಗದ ಕಾರಣ, ಆತ ಬಾಲಕಿಯನ್ನೇ ಅಪಹರಿಸಿ, ಅತ್ಯಾಚಾರ ಮಾಡಿ ಪೈಶಾಚಿಕ ಕೃತ್ಯ ಎಸಗಿದ್ದ.












Click it and Unblock the Notifications