ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಕೊನೆಯುಸಿರು
ಮೈಸೂರು, ಮೇ 7: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ (67) ಆನೆ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ.
ಬಲರಾಮ ಆನೆ ಮೈಸೂರು ದಸರಾದ ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದ ಬಲರಾಮ ಎಲ್ಲರ ಅಚ್ಚುಮೆಚ್ಚಿನ ಆನೆಯಾಗಿತ್ತು. ಸೌಮ್ಯ ಸ್ವಭಾವದ ಆನೆ ಬಲರಾಮ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿತ್ತು.

ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮ ಆನೆಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ, ಬಲರಾಮನ ಬಾಯಿಯಲ್ಲಿ ಹುಣ್ಣಾದ ಕಾರಣ ಆಹಾರ ಸೇವಿಸಲು ಮತ್ತು ನೀರು ಕುಡಿಯಲು ಆಗದಂತೆ ಅಸ್ವಸ್ಥಗೊಂಡಿತ್ತು. ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ ಬಲರಾಮ ಆನೆ ಕೊನೆಯುಸಿರೆಳೆದಿದೆ.
ಬಾಯಿಯಲ್ಲಿ ಹುಣ್ಣಾಗಿ ನಿತ್ರಾಣಗೊಂಡಿದ್ದ ಬಲರಾಮ
ಬಾಯಿಯಲ್ಲಿ ಹುಣ್ಣಾದ ಕಾರಣ ಆನೆಗೆ ಆಹಾರ ಸೇವಿಸಲು, ನೀರು ಕುಡಿಯಲು ಆಗದಂತಹ ಸ್ಥಿತಿ ಉಂಟಾಗಿತ್ತು. ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಸ್ಥಳದಲ್ಲೇ ಇದ್ದು ಚಿಕಿತ್ಸೆ ನೀಡುತ್ತಿದ್ದರು. ಇವರ ಜೊತೆ ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ರತ್ನಾಕರ್, ಡಿಆರ್‌ಎಫ್‌ಒ ಸಿದ್ದರಾಜು ನೇತೃತ್ವದ ತಂಡ ಹಾಗೂ ಬಲರಾಮನ ಮಾವುತ ತಿಮ್ಮ, ಕಾವಾಡಿ ಮಂಜನಾಥ ಬಲರಾಮ ಆನೆಯ ಆರೈಕೆಯಲ್ಲಿ ತೊಡಗಿದ್ದರು.
ಟಿಬಿ ಖಾಯಿಲೆ ಇರುವ ಶಂಕೆ
ಆನೆಯನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಚಿಕಿತ್ಸೆಗೆ ಸ್ಪಂದಿಸದೆ ಬಲರಾಮ ಸಾವನ್ನಪ್ಪಿದ್ದಾನೆ. ಬಲರಾಮ ಆನೆಯ ಅಗಲಿಕೆಯಿಂದ ಭೀಮನಕಟ್ಟೆ ಆನೆ ಶಿಬಿರದ ಅಧಿಕಾರಿಗಳು ಮತ್ತು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಆನೆಯ ಸಾವಿಗೆ ಟಿಬಿ ಕಾರಣವಿರಬಹುದೆಂದು ಶಂಕಿಸಲಾಗಿದ್ದರೂ, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಗುಂಡು ಹೊಡೆದಿದ್ದ ಜಮೀನು ಮಾಲೀಕ
ಕಳೆದ ಡಿಸೆಂಬರ್ 22ರಂದು ಬಲರಾಮ ಆನೆಗೆ ವ್ಯಕ್ತಿಯೊಬ್ಬ ಗುಂಡು ಹೊಡೆದ್ದನು. ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪದ ಜಮೀನೊಂದಕ್ಕೆ ಬಲರಾಮ ನುಗ್ಗಿದ್ದ. ಇದರಿಂದ ಕೋಪಗೊಂಡ ಜಮೀನಿನ ಮಾಲೀಕ ಸುರೇಶ್ ಎಂಬಾತ ಬಲರಾಮ ಆನೆಗೆ ಗುಂಡು ಹಾರಿಸಿದ್ದ.
ಆಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿ ಡಾ. ರಮೇಶ್ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದರು. ಆದಾದ ಬಳಿಕ ಬಲರಾಮ ಆನೆ ಚೇತರಿಸಿಕೊಂಡಿತ್ತು. ಗುಂಡು ಹಾರಿಸಿದ್ದ ಆರೋಪಿ ಸುರೇಶ್‌ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು.

ಜಮೀನಿನ ಮಾಲೀಕ ಸುರೇಶ್‌ನಿಂದ ಒಂಟಿ ನಳಿಕೆಯ ಕೋವಿಯನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.












Click it and Unblock the Notifications