ತುಂಬಿದ ಬಾತ್ ಟಬ್ ನಲ್ಲಿ ನಿಶ್ಚಲವಾಗಿ ಬಿದ್ದಿದ್ದ ಶ್ರೀದೇವಿ!
Recommended Video

ಮುಂಬೈ, ಫೆಬ್ರವರಿ 26 : ಶ್ರೀದೇವಿಯನ್ನು ಅವರ ಗಂಡ ಬೋನಿ ಕಪೂರ್ ಎಷ್ಟೊಂದು ಪ್ರೀತಿಸುತ್ತಿದ್ದರೆಂದರೆ, ಕ್ಷಣವೂ ಅವರನ್ನು ಬಿಟ್ಟು ಇರುತ್ತಿರಲಿಲ್ಲ. ಸಂಬಂಧಿಯ ಮದುವೆಯ ನಂತರ ದುಬೈನಲ್ಲಿಯೇ ಶಾಪಿಂಗ್ ಮಾಡಲೆಂದು ಉಳಿದುಕೊಂಡಿದ್ದ ಶ್ರೀದೇವಿಗೆ ಸರ್ಪ್ರೈಸ್ ನೀಡಲೆಂದೇ ಬೋನಿ ಅವರು ದುಬೈಗೆ ಭಾರತದಿಂದ ಮರಳಿದ್ದರು.
ಜುಮೈರಾ ಎಮಿರೇಟ್ಸ್ ಟವರ್ಸ್ ಹೋಟೆಲಿನಲ್ಲಿ ಉಳಿದುಕೊಂಡಿದ್ದ 54 ವರ್ಷದ ಶ್ರೀದೇವಿಗೆ 62 ವರ್ಷದ ಗಂಡ ಬೋನಿ ಕಪೂರ್ ಅವರು ಸದ್ದಿಲ್ಲದೆ ಮುಂಬೈನಿಂದ ತಮಗಾಗಿ ವಾಪಸ್ ಬಂದಿದ್ದು ಭಾರೀ ಖುಷಿಯನ್ನು ತಂದಿತ್ತು. ಇಬ್ಬರೂ ಒಟ್ಟಿಗೆ ರಾತ್ರಿಯೂಟ ಮಾಡೋಣವೆಂದು ಬೋನಿ ಅವರು ಶ್ರೀದೇವಿಗೆ ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಸಂಜೆ 5.30ರ ಸುಮಾರಿಗೆ, ತಯಾರಾಗಿ ಬರುತ್ತೇನೆಂದು ಶ್ರೀದೇವಿಯವರು ಬಾತ್ ರೂಮಿಗೆ ತೆರಳಿದ್ದಾರೆ. ಆದರೆ, ಎಷ್ಟು ಹೊತ್ತಾದರೂ ಶ್ರೀದೇವಿಯವರು ಬಚ್ಚಲುಮನೆಯಿಂದ ಮರಳಿಲ್ಲ. ಅನುಮಾನಗೊಂಡ ಬೋನಿ, ಬಲವಂತವಾಗಿ ಬಾಗಿಲು ತೆರೆದಾಗ ಊಹಿಸದಂಥ ದೃಶ್ಯ ಅವರ ಕಣ್ಣಿಗೆ ಬಿದ್ದಿದೆ.

ಶ್ರೀದೇವಿಯವರು ನಿಶ್ಚಲರಾಗಿ ಪೂರ್ತಿಯಾಗಿ ನೀರು ತುಂಬಿದ್ದ ಬಾತ್ ಟಬ್ ನಲ್ಲಿ ಬಿದ್ದಿದ್ದರು. ಇದನ್ನು ನೋಡುತ್ತಿದ್ದಂತೆ ಬೋನಿ ಕಪೂರ್ ಅವರು ಕಂಗಾಲಾಗಿದ್ದಾರೆ. ಆದರೆ ವಿವೇಚನೆ ಕಳೆದುಕೊಳ್ಳದೆ, ಅವರಿಗೆ ಕೃತಕ ಉಸಿರಾಟ ನೀಡಲು ಯತ್ನಿಸಿದ್ದಾರೆ. ಅವರ ಎಲ್ಲ ಪ್ರಯತ್ನಗಳು ವಿಫಲವಾದಾಗ ಸ್ನೇಹಿತರಿಗೆ ಫೋನ್ ಮಾಡಿದ್ದಾರೆ.
ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಕೋಟ್ಯಂತರ ಅಭಿಮಾನಿಗಳ 'ಚಾಂದನಿ' ಇಡೀ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿ ಪರಮೇಶ್ವರನ ಪಾದ ಸೇರಿದ್ದಾರೆ. ಮುಂಬೈಗೆ ಸೋಮವಾರ ಅವರ ಪಾರ್ಥಿವ ಶರೀರ ಬರಲಿದ್ದು, ನಂತರ ಅಂತಿಮ ಸಂಸ್ಕಾರ ನೆರವೇರಲಿದೆ.












Click it and Unblock the Notifications