ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಮುಂಬೈಯಲ್ಲಿ ಮತ ಚಲಾಯಿಸಿದ ಸೋನಾಲಿ ಬೇಂದ್ರೆ
ಮುಂಬೈ, ಏಪ್ರಿಲ್ 29: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರು ಇಂದು ಮತಚಲಾಯಿಸುವ ಮೂಲಕ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದರು. ಮುಂಬೈಯ ವೈಲ್ ಪಾರ್ಲೆ ಕ್ಷೇತ್ರದಲ್ಲಿ ಅವರು ಮತ ಚಲಾಯಿಸಿದರು.
ಕಳೆದ ವರ್ಷ ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಪತ್ತೆಯಾಗುತ್ತಿದ್ದಂತೆಯೇ ಹಲವು ತಿಗಳ ಕಾಲ ಅಮೆರಿಕದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಡಿಸೆಂಬರ್ ನಲ್ಲಿ ಮುಂಬೈಗೆ ವಾಪಸ್ಸಾದ ಸೋನಾಲಿ ಬೇಂದ್ರೆ ಅವರು ಇಲ್ಲಿಯೂ ನಿಯಮಿತವಾಗಿ ತಪಾಸಣೆ ಮಾಡಿಸುತ್ತಲೇ ಇದ್ದಾರೆ.
ತಮಗೆ ಕ್ಯಾನ್ಸರ್ ಇದೆ ಎಂಬುದು ತಿಳಿಯುತ್ತಿದ್ದಂತೆಯೇ ಸ್ವಲ್ಪವೂ ಎದೆಗುಂದದ ಸೋನಾಲಿ ಬೇಂದ್ರೆ ಅವರು, "ನಾನು ಈ ರೋಗವನ್ನು ಗೆಲ್ಲುತ್ತೇನೆ" ಎಂಬ ಮನೋಬಲ ಬೆಳೆಸಿಕೊಂಡರು. ನಂತರ ಅದರೊಟ್ಟಿಗೆ ನಿರಂತರ ಹೋರಾಟ ನಡೆಸುತ್ತಲೇ ಇದ್ದಾರೆ.

ಇದೀಗ ತಾವು ಅನಾರೋಗ್ಯದ ನಡುವೆಯೂ ಮತಚಲಾಯಿಸುವ ಮೂಲಕ ಮತದಾನದ ಮಹತ್ವವನ್ನು ಸಾರಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ನಾಲ್ಕನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಮಹಾರಾಷ್ಟ್ರದ 17 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಮುಂಬೈಯ ಆರು ಲೋಕಸಭಾ ಕ್ಷೇತ್ರಗಳಲ್ಲೂ ಇಂದೇ ಮತದಾನ ನಡೆಯುತ್ತಿರುವುದರಿಂದ ಹಲವು ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ.
ಲೋಕಸಬಾ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರಬೀಳಲಿದೆ.












Click it and Unblock the Notifications