ಶಿವಸೇನೆ ಶಾಸಕರು ಹೊಟೇಲ್ ಗೆ ಹೋಗಿಲ್ಲ: ಸಂಜಯ್ ರಾವತ್ ಸ್ಪಷ್ಟನೆ
ಮುಂಬೈ, ನವೆಂಬರ್ 07: ಶಿವಸೇನೆಯ ಹಲವು ಶಾಸಕರನ್ನು ಹೊಟೇಲ್ ನಲ್ಲಿ ತಂಗುವಂತೆ ಆದೇಶಿಸಲಾಗಿದೆ ಎಂಬ ವರದಿಯನ್ನು ಪಕ್ಷದ ಮುಖಂಡ ಸಂಜಯ್ ರಾವತ್ ತಳ್ಳಿಹಾಕಿದ್ದಾರೆ.
"ನಮ್ಮ ಶಾಸಕರ್ಯಾರನ್ನೂ ನಾವು ಹೊಟೇಲ್ ಗೆ ಕಳಿಸಿಲ್ಲ. ಎಲ್ಲರೂ ನಮ್ಮೊಂದಿಗೆ ಇದ್ದಾರೆ" ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಒಮ್ಮತ ಏರ್ಪಡದ ಕಾರಣ ಬಿಜೆಪಿ ಶಿವಸೇನೆಯ ಶಾಸಕರನ್ನು ಸೆಳೆಯಲು ಪ್ರತ್ನಿಸುತ್ತಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಶಾಸಕರ್ಯಾರೂ ಬಿಜೆಪಿ ಆಮಿಷಕ್ಕೊಳಗಾಗಿ ಪಕ್ಷ ಬಿಡುವವರಲ್ಲ. ಅವರ ಮೇಲೆ ನಮಗೆ ನಂಬಿಕೆ ಇದೆ. ಅವರನ್ನು ಹೊಟೇಲ್ ಗೆ ಕಳಿಸುವ ಅಗತ್ಯ ನಮಗಿಲ್ಲ ಎಂದರು.

ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ.
ನವೆಂಬರ್ 08 ರ ಒಳಗೆ ಸರ್ಕಾರ ರಚಿಸಲು ಯಾವ ಪಕ್ಷವೂ ಮುಂದೆ ಬಾರದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆ.












Click it and Unblock the Notifications