ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಬಗ್ಗೆ ಆದಿತ್ಯ ಠಾಕ್ರೆ ಹೇಳಿದ್ದೇನು?
ಮುಂಬೈ, ಜುಲೈ 19: 'ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಬಗ್ಗೆ ಏನು ಹೇಳುತ್ತೀರಿ? ಯಾರಾಗಬಹುದು ಮುಖ್ಯಮಂತ್ರಿ?' ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಿವಸೇನಾ ನಾಯಕ ಆದಿತ್ಯ ಠಾಕ್ರೆ, 'ಈ ಯಾತ್ರೆ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುವುದಕ್ಕಲ್ಲ,ಜನರೊಂದಿಗೆ ಸಂಪರ್ಕ ಸಾಧಿಸುವುದಕ್ಕೆ, ಅವರಿಗೆ ಧನ್ಯವಾದ ಅರ್ಪಿಸುವುದಕ್ಕೆ' ಎಂದು ಜಾಣತನದ ಉತ್ತರ ನೀಡಿದರು.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯವರೇ, ಠಾಕ್ರೆ ಕುಟುಂಬಕ್ಕೆ ಉಪಮುಖ್ಯಮಂತ್ರಿಯ ಪಟ್ಟ ಪಡೆದು ಗೊತ್ತಿಲ್ಲ, ಏನಿದ್ದರೂ ಮುಖ್ಯಮಂತ್ರಿಯ ಪಟ್ಟ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಇತ್ತೀಚೆಗೆ ಹೇಳಿದ್ದರು. ಅದೂ ಅಲ್ಲದೆ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನು ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು. ಆದರೆ ಈ ಬಗ್ಗೆ ಕೇಳಿದ ಪ್ರಶ್ನೆಗಳನ್ನು ಜಾಣತನದಿಂದ ತೇಲಿಸಿದ ಆದಿತ್ಯ ಠಾಕ್ರೆ, 'ಚುನಾವಣೆಗೆ ಇನ್ನೂ ಕನಿಷ್ಠ ಮೂರು ತಿಂಗಳು ಬಾಕಿ ಇದೆ. ಆ ಬಗ್ಗೆ ಯೋಚಿಸೋದಕ್ಕೆ ಸಮಯವಿದೆ' ಎಂದರು.

ಲೋಕಸಭೆ ಚುನಾವಣೆಯಲ್ಲಿ ಶಿವಸೇನೆಯನ್ನು ಅಶಿರ್ವದಿಸಿದ ಜನರಿಗೆ ಕೃತಜ್ಞತೆ ಅರ್ಪಿಸುವ ಜೊತೆಗೆ, ವಿಧಾನಸಭೆ ಚುನಾವಣೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದಕ್ಕೆ ಶಿವಸೇನೆ 5 ದಿನಗಳ ಜನ ಆಶೀರ್ವಾದ ಯಾತ್ರೆ ಕೈಗೊಂಡಿದೆ. ಈ ಯಾತ್ರೆಯ ಸಂದರ್ಭದಲ್ಲಿ ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಆದಿತ್ಯ ಠಾಕ್ರೆ ತಾವು ಚುನಾವಣೆಗೆ ನಿಲ್ಲುವ ಬಗ್ಗೆ ಮಾತನಾಡಿದರು.
"ಜನರು ಇಷ್ಟಪಟ್ಟರೆ ನಾನು ಚುನಾವಣೆಗೆ ನಿಲ್ಲುತ್ತೇನೆ. ಠಾಕ್ರೆ ಕುಟುಂಬದ ಸಾಮಾಜಿಕ ಸೇವೆಯ ಕನಸು ಈಡೇರಿಸಲು ಪ್ರಯತ್ನಿಸುತ್ತೇನೆ" ಎಂದು ಆದಿತ್ಯ ಠಾಕ್ರೆ ಹೇಳಿದರು. ಆದಿತ್ಯ ಠಾಕ್ರೆ ಚುನಾವಣೆಗೆ ಸ್ಪರ್ಧಿಸಿದರೆ ಠಾಕ್ರೆ ಕುಟುಂಬದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಅಭ್ಯರ್ಥಿಯಾಗಲಿದ್ದಾರೆ.












Click it and Unblock the Notifications