ಬಡವರೊಂದಿಗೆ ನಂಟು ಕಳೆದುಕೊಂಡ ಬಿಜೆಪಿ: ಶಿವಸೇನಾ ಆರೋಪ
ಮುಂಬೈ, ಜೂನ್ 25: ಬಡಜನರೊಂದಿಗಿನ ಸಂಪರ್ಕವನ್ನೇ ಬಿಜೆಪಿ ಕಳೆದುಕೊಂಡಿದೆ ಎಂದು ಶಿವಸೇನಾ ಆರೋಪಿಸಿದೆ.
ಬಿಜೆಪಿಯು ಕಳೆದ ತಿಂಗಳು ಆರಂಭಿಸಿರುವ 'ಸಂಪರ್ಕ್ ಸೇ ಸಮರ್ಥನ್' ಕಾರ್ಯಕ್ರಮ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಶಿವಸೇನಾ ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ.
ಬೆಂಬಲಕ್ಕಾಗಿ ಜನರು ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್ಮ ರತನ್ ಟಾಟಾ, ಅಂಬಾನಿ, ಅದಾನಿ ಮುಂತಾದವರನ್ನು ಸಂಪರ್ಕಿಸುತ್ತಿದ್ದಾರೆ. ಆದರೆ, ಬಡವರೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ ಎಂದು ಪಕ್ಷದ ಮುಖವಾಣಿ 'ಸಾಮ್ನಾ' ಪತ್ರಿಕೆಯಲ್ಲಿ ಶಿವಸೇನಾ ವ್ಯಂಗ್ಯವಾಡಿದೆ.

ಮಹಾರಾಷ್ಟ್ರದಾದ್ಯಂತ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಶಿವಸೇನಾ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳನ್ನು ಟೀಕಿಸಿದೆ.
ರಾಜ್ಯವು ಹಸಿವು ಮತ್ತು ಬಡತನದಿಂದ ನರಳುತ್ತಿದೆ. ಈ ಕಾರಣದಿಮದ ಬದುಕಿನ ದಾರಿ ತಿಳಿಯದೆ ಕಂಗೆಟ್ಟ ಜನರು ಕುಟುಂಬದವರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗಾಗಿ ಏನನ್ನಾದರೂ ಮಾಡುತ್ತಾರೆ ಎಂಬ ಭ್ರಮೆಯಿಂದ ನಾವು ಹೊರಗೆ ಬರಬೇಕಾಗಿದೆ ಎಂದು ಸೇನಾ ಹೇಳಿದೆ.
ಬಿಜೆಪಿಯು ಬುಲೆಟ್ ಟ್ರೇನ್, ಮೆಟ್ರೋ ಮತ್ತು ಹೈಪರ್ ಸಿಟಿಯಂತಹ ಐಷಾರಾಮಿ ಯೋಜನೆಗಳ ಮೇಲೆ ಗಮನ ಹರಿಸುವಾಗ ರೈತರ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ.
ವಿದೇಶಿ ಹೂಡಿಕೆದಾರರಿಂದ ಸಂಗ್ರಹಿಸಲಾದ ದೇಣಿಗೆ ರಾಜ್ಯದ ಬಡವರ ಪರಿಸ್ಥಿತಿಯನ್ನು ಇನ್ನಷ್ಟು ಹಾಳುಗೆಡವಿದೆ ಎಂದು ಶಿವಸೇನಾ ಆರೋಪಿಸಿದೆ.












Click it and Unblock the Notifications