ಕಿಂಗ್ ಖಾನ್ ಗೆ ಪಾತಕಿ ರವಿ ಪೂಜಾರಿ ಭೀತಿ
ಮುಂಬೈ, ಆ.26: ಬಾಲಿವುಡ್ ಜಗತ್ತಿನ ಕಿಂಗ್ ಖಾನ್ ಗೆ ಈಗ ಭೂಗತ ಪಾತಕಿ ರವಿ ಪೂಜಾರಿ ಭಯ ಶುರುವಾಗಿದೆ. ಇತ್ತೀಚೆಗೆ ಶಾರುಖ್ ಅವರ ಆಪ್ತರ ಮನೆ ಮೇಲೆ ಪೂಜಾರಿ ಗ್ಯಾಂಗ್ ಗುಂಡಿನ ಮಳೆಗೆರೆದಿದೆ. ಸಂಭಾವ್ಯ ದಾಳಿ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಶಾರುಖ್ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ಬಾಲಿವುಡ್'ನ ಖ್ಯಾತ ನಟ ಶಾರೂಖ್ ಖಾನ್ ಅವರ ಬಿಸಿನೆಸ್ ಪಾರ್ಟ್ನರ್ ಅಲಿ ಮೊರಾನಿ ಅವರ ಮನೆ ಮೇಲೆ ರವಿ ಪೂಜಾರಿ ಗ್ಯಾಂಗ್ ಗುಂಡಿನ ದಾಳಿ ನಡೆಸಿತ್ತು. ಮುಂಬೈನ ಜುಹುವಿನಲ್ಲಿರುವ ಅವರ ನಿವಾಸದ ಬಳಿ ಪೂಜಾರಿ ಗ್ಯಾಂಗ್ ದಾಳಿಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಗುಂಡಿನ ದಾಳಿಗೂ ಮುನ್ನ ಮೊದ ಮೊದಲು ಬೆದರಿಕೆ ಹಾಕಿದ್ದರು. ಶನಿವಾರ ಬೈಕಿನಲ್ಲಿ ಬಂದ ಅಪರಿಚಿತರು ಬಂಗಲೆ ಬಳಿ 4 ಸುತ್ತು ಗುಂಡಿನ ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾಕ್ರಮವಾಗಿ ಶಾರೂಖ್ ಖಾನ್ ಅವರಿಗೂ ಭದ್ರತೆ ಹೆಚ್ಚಿಸಲಾಗಿದೆ. ಸದ್ಯ ಶಾರೂಖ್ ಹ್ಯಾಪಿ ನ್ಯೂ ಇಯರ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿಲ್ಲ.
ರವಿ ಪೂಜಾರಿ ಗ್ಯಾಂಗಿನ ಮುಂದಿನ ಟಾರ್ಗೆಟ್ ಶಾರುಖ್ ಖಾನ್ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದಾಳಿಯ ನಂತರ ಮೊರಾನಿ ಅವರು ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತರ ಗುರುತು ಪತ್ತೆಗೆ ಶೋಧಕಾರ್ಯ ಅರಂಭಗೊಂಡಿದೆ. ಪೂಜಾರಿ ಅವರು ಈ ಮುಂಚೆ ಕೂಡಾ ಅನೇಕ ನಟ, ನಟೀಯರು ಹಾಗೂ ನಿರ್ಮಾಪಕರಿಗೆ ಬೆದರಿಕೆ ಕರೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications