Breaking: ಸಂಜಯ್ ರಾವುತ್‌ಗೆ ಸೆ. 5ರ ವರೆಗೆ ನ್ಯಾಯಾಂಗ ಬಂಧನ
ಮುಂಬೈ, ಆಗಸ್ಟ್ 22: ಮುಂಬೈ ಪಾತ್ರ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಿವಸೇನಾ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಲಾಗಿದೆ.
ಆಗಸ್ಟ್ 8 ರಂದು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಅದು ಸೋಮವಾರ ಕೊನೆಗೊಂಡಿದೆ. ಈ ಹಿನ್ನೆಲೆ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಕಸ್ಟಡಿಯನ್ನು ಸೆಪ್ಟೆಂಬರ್ 5ರ ವರೆಗೆ ವಿಸ್ತರಿಸಿದೆ .ಪ್ರಸ್ತುತ, ಶಿವಸೇನೆ ಸಂಸದರನ್ನು ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ.
ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸಂಜಯ್ ರಾವುತ್ ಅವರನ್ನು ಬಂಧಿಸಿ, ಮುಂಬೈ ಕೋರ್ಟ್‌ಗೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಕೋರ್ಟ್ ಆಗಸ್ಟ್ 4ರ ತನಕ ಇಡಿ ವಶಕ್ಕೆ ನೀಡಿತ್ತು. ಬಳಿಕ ಮತ್ತಷ್ಟು ವಿಚಾರಣೆ ನಡೆಸುವುದಕ್ಕಾಗಿ ಆಗಸ್ಟ್ 08 ರ ವರೆಗೆ ಇಡಿ ಕಸ್ಟಡಿಗೆ ನೀಡಿತ್ತು.

ಪತ್ರಾ ಚಾಲ್ ಪುನರಾಭಿವೃದ್ಧಿ ಹಗರಣದಲ್ಲಿ, ರಿಯಲ್ ಎಸ್ಟೇಟ್ ಕಂಪನಿ ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ ಪ್ರವೀಣ್ ರಾವುತ್ ಪಡೆದ 112 ಕೋಟಿ ರೂಪಾಯಿಯಲ್ಲಿ ಸಂಜಯ್ ರಾವುತ್ ಮತ್ತು ಅವರ ಕುಟುಂಬ 1.06 ಕೋಟಿಯ ನೇರ ಫಲಾನುಭವಿಗಳು ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.
ಬಂಧನಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ನೀಡಿದ್ದ ಎರಡು ಸಮನ್ಸ್ ತಪ್ಪಿಸಿದ್ದ ಕಾರಣ, ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಆಗಸ್ಟ್ 1 ರಂದು ಅವರನ್ನು ಬಂಧಿಸಿತ್ತು.
ಜೈಲಿನಲ್ಲಿ ಸಂಜಯ್ ರಾವುತ್‌ಗೆ ಮನೆಯ ಊಟಕ್ಕೆ ಅವಕಾಶ ನೀಡಲಾಗಿದೆ. ಸಂಜಯ್ ರಾವುತ್ ಬಂಧನದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ವರ್ಷಾ ರಾವುತ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.












Click it and Unblock the Notifications