ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಔಷಧಿ ಬೆಲೆ ಕಡಿತ ಅವಶ್ಯಕ- ಬಾಂಬೆ ಹೈಕೋರ್ಟ್
ಮುಂಬೈ, ಮೇ 21: ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣಗಳ ಹೆಚ್ಚಳವನ್ನು ಗಮನಿಸಿರುವ ಬಾಂಬೆ ಹೈಕೋರ್ಟ್, ಈ ಸೋಂಕಿನ ಚಿಕಿತ್ಸೆಗೆ ಬಳಸುವ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದೆ. ಇದಲ್ಲದೆ, ಸೋಂಕಿನ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಉತ್ಪಾದನೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಕೂಡಾ ತಿಳಿಸಿದೆ.
ನ್ಯಾಯಮೂರ್ತಿ ಅನಿಲ್ ಬಿ ಶುಕ್ರೆ ಮತ್ತು ಅವಿನಾಶ್ ಬಿ ಘರೋಟೆ ಅವರನ್ನೊಳಗೊಂಡ ನಾಗ್ಪುರ ವಿಭಾಗದ ನ್ಯಾಯಪೀಠವು, ಔಷಧಿಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ವಿತರಿಸುವ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಎನ್‌ಪಿಪಿಎ ಹಾಗೂ ಡಿಜಿಸಿಐಗೆ ನಿರ್ದೇಶಿಸಿದೆ.
ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯಡಿ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ಒಳಪಡಿಸಲು ಮಹಾರಾಷ್ಟ್ರ ಸರ್ಕಾರವು ಮೇ 18 ರ ನಿರ್ಣಯದ ನಕಲನ್ನು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿತ್ತು. ಹಾಗೆಯೇ ಬ್ಲ್ಯಾಕ್ ಫಂಗಸ್ ಸಂಬಂಧಿಸಿದ ಮಾರ್ಗಸೂಚಿಯನ್ನೂ ಸಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಈ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠವು, ಕೆಲವು ಔಷಧಿಗಳು ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಮೂತ್ರಪಿಂಡದಂತಹ ಅಂಗಗಳ ಮೇಲೆ ಪರಿಣಾಮ ಬೀರುತ್ತವೆ ಎಂಬ ಅಂಶವನ್ನು ಪರಿಗಣಿಸಿ, ಈ ಔಷಧಿಗಳ ಬಳಕೆಗೆ ಸೂಚಿಸುವ ಹಾಗೂ ಬಳಕೆ ಮಾಡುವ ಬಗ್ಗೆ ಬಹಳ ನಿರ್ದಿಷ್ಟವಾದ ಮಾರ್ಗಸೂಚಿಯನ್ನು ಹೊರಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹಾಗೆಯೇ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಬಳಸಲಾಗುವ ಔಷಧಿಗಳು ಸಾಕಷ್ಟು ದುಬಾರಿಯಾಗಿದೆ. ಹಾಗೆಯೇ ಈ ಔಷಧಿಯ ಪ್ರಮಾಣ ಹಾಗೂ ಡೋಸೇಜ್ ತುಂಬಾ ಹೆಚ್ಚಾಗಿದೆ. ಈ ಸ್ಥಿತಿ ಮುಂದುವರಿದರೆ ಈ ಔಷಧಿಯು ಎಲ್ಲಾ ರೋಗಿಗಳಿಗೂ ದೊರೆಯದು ಎಂದು ನ್ಯಾಯಾಲಯವು ಎಚ್ಚರಿಸಿದೆ.
ಪ್ರಸ್ತುತ ಈ ಸೋಂಕಿನ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆ ಔಷಧಿಯ ಬೆಲೆಯೂ ಕಡಿಮೆ ಮಾಡಬೇಕು. ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ತಲುಪುವಂತೆ ಮಾಡಲು ಸರ್ಕಾರ ಬೆಲೆ ಕಡಿತಗೊಳಿಸಲು ಗಮನ ಹರಿಸುವುದು ಅವಶ್ಯಕ ಎಂದು ಹೇಳಿದ್ದಾರೆ.
ಹಾಗೆಯೇ ಭವಿಷ್ಯದಲ್ಲಿ ಈ ಔಷಧಿಗಳ ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರವು ದೇಶದಾದ್ಯಂತ ಈ ಔಷಧಿಗಗಳ ಉತ್ಪಾದನೆ ಮತ್ತು ವಿತರಣೆಯನ್ನು ನಿಯಂತ್ರಿಸಿವುದು ಸೂಕ್ತ ಎಂದು ಕೂಡಾ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದೇಶದಲ್ಲಿ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕೂಡಾ ಕಾಣಿಸಿಕೊಳ್ಳುತ್ತಿದ್ದು ಸೋಂಕು ಪ್ರಕರಣಗಳ ಸಂಖ್ಯೆಯು ಅಧಿಕವಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications