ಚೆಂದುಳ್ಳಿ ಚೆಲುವೆ ರೂಪದರ್ಶಿಯ ಭೀಕರ ಕೊಲೆ, ನಡುಗಿತು ಮುಂಬೈ
ಮುಂಬೈ, ಅಕ್ಟೋಬರ್ 16: ಆಗಷ್ಟೇ ಫ್ಯಾಷನ್ ಲೋಕದಲ್ಲಿ ತನ್ನ ಭವಿಷ್ಯ ಕಂಡುಕೊಳ್ಳುತ್ತಿದ್ದ ರೂಪದರ್ಶಿ ಮಾನ್ಸಿ ದೀಕ್ಷಿತ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ!
ವಾಣಿಜ್ಯನಗರಿಯ ಮಲಾಡ್ ಪ್ರದೇಶದಲ್ಲಿ ಬಿದ್ದಿದ್ದ ಬೃಹತ್ ಸೂಟ್ ಕೇಸೊಂದರಲ್ಲಿ ಇಪ್ಪತ್ತು ವರ್ಷ ವಯಸ್ಸಿನ ಚಂದುಳ್ಳಿ ಚಲುವೆಯ ರಕ್ತಸಿಕ್ತ ಕಳೇಬರ ಸಿಕ್ಕಿದ್ದು ಮುಂಬೈಯನ್ನು ಬೆಚ್ಚಿಬೀಳಿಸಿದೆ.
ಕೊಲೆ ಪ್ರಕರಣವನ್ನುಕೊಲೆಯಾದ ದಿನವೇ ಭೇದಿಸಿರುವ ಪೊಲಿಸರು, 19 ವರ್ಷ ವಯಸ್ಸಿನ ಮುಜಾಮಿಲ್ ಸಯ್ಯದ್ ಎಂಬುವವನನ್ನು ಬಂಧಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದು ವಿಚಾರಣೆಯ ನಂತರವೇ ತಿಳಿಯಬೇಕಿದೆ.(ಚಿತ್ರಕೃಪೆ: ಫೇಸ್ಬುಕ್)

ಪ್ರಕರಣ ಭೇದಿಸುವಲ್ಲಿ ಮುಖ್ಯಪಾತ್ರ ವಹಿಸಿದ ಓಲಾ ಡ್ರೈವರ್!
ಸೋಮವಾರ ಮಧ್ಯಾಹ್ನದ ಸುಮಾರಿಗೆ ಮುಜಾಮಿಲ್ ಎಂಬಾತ ಓಲಾ ಕ್ಯಾಬ್ ಅನ್ನು ಬುಕ್ ಮಾಡಿದ್ದ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಛತ್ರಪತಿ ಶಿವಾಜಿ ಏರ್ಪೋರ್ಟ್ ) ರಸ್ತೆಯ ಕಡೆಗೆ ಹೋಗಬೇಕು ಎಂದ ಪ್ರಯಾಣಿಕ, ತನ್ನ ಕೈಯಲ್ಲಿ ಬೃಹತ್ ಸೂಟ್ ಕೇಸ್ ವೊಂದನ್ನು ಹಿಡಿದಿದ್ದ. ವಿಮಾನ ನಿಲ್ದಾಣದ ಕಡೆ ಎಂದಿದ್ದರಿಂದ ಚಾಲಕನಿಗೂ ಅನುಮಾನ ಬರಲಿಲ್ಲ. ಆದರೆ ವಿಮಾನ ನಿಲ್ದಾಣಕ್ಕೂ ಮೊದಲೇ ನಿರ್ಜನ ಪ್ರದೇಶವೊಂದರಲ್ಲಿ ಕ್ಯಾಬ್ ಅನ್ನು ನಿಲ್ಲಿಸುವುದಕ್ಕೆ ಹೇಳಿದ ಮುಜಾಮಿಲ್, ಓಲಾದವನನ್ನು ಹೋಗುವಂತೆ ಹೇಳಿದೆ. ಬಹುಶಃ ಯಾರಿಗಾದರೂ ಕಾಯುತ್ತಿರಬೇಕು ಎಂದುಕೊಂಡು ಓಲಾ ಡ್ರೈವರ್ ಹೊಸದೊಂದು ಪ್ರಯಾಣಿಕರನ್ನು ಹುಡುಕುತ್ತ ಹೊರಟರು.

ಸೂಟ್ ಕೇಸಿನಲ್ಲಿತ್ತು ಶವ!
ಅದೇನು ಕಾಕತಾಳೀಯವೋ ಏನೋ, ಓಲಾ ಡ್ರೈವರ್ ಅಂದು ಕೆಲವೇ ಸಮಯದಲ್ಲಿ ಮತ್ತದೇ ದಾರಿಯಲ್ಲಿ ವಾಪಸ್ ಬಂದರು. ಆಗ ದಾರಿಬದಿಯಲ್ಲಿ ಆ ಸೂಟ್ ಕೇಸನ್ನು ಕಂಡ ಡ್ರೈವರ್ ಗೆ ಏನೋ ಅಚಾತುರ್ಯವಾಗಿದೆ ಎಂಬ ಅನುಮಾನ ಬಂತು. ನನಗ್ಯಾಕೆ ಉಸಾಬರಿ ಎಂದುಕೊಂಡು ಸುಮ್ಮನಾಗದೆ, ಧೈರ್ಯ ಮಾಡಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಪೊಲೀಸರು ಬಂಡು ಸೂಟ್ ಕೇಸ್ ತೆರೆದು ನೋಡಿದರೆ ಅದರಲ್ಲಿ ಕೈಕಾಲುಗಳನ್ನು ಕಟ್ಟಿ, ಮುದುಡಿದ ಸ್ಥಿತಿಯಲ್ಲಿ ಯುವತಿಯೊಬ್ಬರ ಶವ ಪತ್ತೆಯಾಗಿತ್ತು.

ಜಗಳವೇ ತಾರಕ್ಕೇರಿ ಕೃತ್ಯ ನಡೆದಿತ್ತು!
ವಿಚಾರಣೆಯ ವೇಳೆ ಪೊಲೀಸರಿಗೆ ಇದು ರೂಪದರ್ಶಿ ಮಾನ್ಸಿ ದೀಕ್ಷಿತ್ ಅವರದೇ ಶವ ಎಂಬುದು ತಿಳಿಯಿತು. ಓಲಾ ಡ್ರೈವರ್ ಮೂಲಕ ಮುಜಾಮಿಲ್ ನನ್ನು ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದರು. ಹೈದರಾಬಾದಿನ ಮುಜಾಮಿಲ್ ಸಯ್ಯದ್ ಮುಂಬೈಯಲ್ಲೇ ವಾಸವಿದ್ದ. ಕೆಲವು ಮೂಲಗಳ ಪ್ರಕಾರ ಆತ ಮಾನ್ಸಿಯನ್ನು ಇಷ್ಟಪಡುತ್ತಿದ್ದ. ಸೋಮವಾರ ತಾನಿರುವ ಫ್ಲ್ಯಾಟ್ ಗೆ ಮಾನಸಿಯನ್ನು ಕರೆಸಿಕೊಂಡಿದ್ದ. ಈ ಸಮಯದಲ್ಲಿ ಇಬ್ಬರ ನಡುವೆಯೂ ವಾಗ್ವಾದ ನಡೆದಿತ್ತು. ಅದು ಯಾವ ಕಾರಣಕ್ಕೆ ಎಂಬುದು ತಿಳಿದಿಲ್ಲ. ನಂತರ ಆಕೆಯನ್ನು ಕೊಂದು ಸೂಟ್ ಕೇಸಿನಲ್ಲಿ ತುಂಬಿ, ರಸ್ತೆ ಬದಿಯಲ್ಲಿ ಎಸೆದಿದ್ದ.

ರೂಪದರ್ಶಿ ಮಾನ್ಸಿ ದೀಕ್ಷಿತ್
ಕೇವಲ 20 ವರ್ಷ ವಯಸ್ಸಿನ ಮಾನ್ಸಿ ದೀಕ್ಷಿತ್ ರೂಪದರ್ಶಿಯಾಗಿ ಮಾತ್ರವಲ್ಲದೆ, ಹಲವು ಬೇರೆ ಬೇರೆ ವೃತ್ತಿಗಳನ್ನು, ಪ್ರವೃತ್ತಿಗಳನ್ನು ರೂಡಿಸಿಕೊಂಡವರಾಗಿದ್ದರು. ಮಾಡೆಲಿಂಗ್ ಜೊತೆಗೆ ಫ್ಯಾಶನ್ ಡಿಸೈನಿಂಗ್, ಈವೆಂಟ್ ಮ್ಯಾನೇಜ್ ಮೆಂಟ್ ಇತ್ಯಾದಿ ಹಲವು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂದಿದ್ದ ಮಾನ್ಸಿ ಮುಂಬೈಯ ಅಂಧೇರಿಯ ಇನ್ಫಿನಿಟಿ ಮಾಲ್ ಬಳಿ ಒಂದು ಆಫೀಸನ್ನೂ ತೆರೆದಿದ್ದರು. ಅತ್ಯುತ್ತಮ ಉದ್ಯಮಿಯಾಗಬೇಕು ಎಂಬುದು ಅವರ ಕನಸಾಗಿತ್ತು.












Click it and Unblock the Notifications