ಖಾಸಗಿ ವೈದ್ಯರನ್ನೇ ಬೆಚ್ಚಿ ಬೀಳಿಸುತ್ತೆ ಮಹಾರಾಷ್ಟ್ರದ ಹೊಸ ರೂಲ್ಸ್!
ಮುಂಬೈ, ಮೇ.06: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರ ನಡುವೆಯೇ ಮಹಾರಾಷ್ಟ್ರದಲ್ಲಿ ವೈದ್ಯರನ್ನು ಬೆಚ್ಚಿ ಬೀಳಿಸುವ ಕಟ್ಟಿನಿಟ್ಟಿನ ನಿಯಮವನ್ನು ಜಾರಿಗೊಳಿಸಲಾಗಿದೆ.
ಕೊರೊನಾ ವೈರಸ್ ಹಾಗೂ ಭಾರತ ಲಾಕ್ ಡೌನ್ ನಿಂದ ಬೆದರಿ ಆಸ್ಪತ್ರೆ ಬಾಗಿಲು ಹಾಕಿದ ಖಾಸಗಿ ವೈದ್ಯರು ಇದೀಗ ಮತ್ತೆ ಸೇವೆ ಆರಂಭಿಸುವ ಅನಿವಾರ್ಯತೆ ಎದುರಾಗಿದೆ. ಮುಂಬೈನಲ್ಲಿ ಪ್ರತಿಯೊಬ್ಬ ವೈದ್ಯರು ಕನಿಷ್ಠ 15 ದಿನ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಮುಂಬೈನಲ್ಲೇ ಕೊರೊನಾ ವೈರಸ್ ನಿಂದ 10,000 ಮಂದಿ ಸಾವು!
ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ನಿರಾಕರಿಸಿದರೆ ಸರ್ಕಾರವು ನೀಡಿರುವ ವೈದ್ಯಕೀಯ ಪರವಾನಗಿಯನ್ನೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಹೃದಯ ಸಂಬಂಧಿ ಕಾಯಿಲೆ, ಡಯಾಬಿಟಿಸ್ ಹಾಗೂ ರಕ್ತದೊತ್ತಡವನ್ನು ಹೊಂದಿರುವ ವೈದ್ಯರು ಹಾಗೂ 55 ವರ್ಷಕ್ಕಿಂತ ಮೇಲ್ಪಟ್ಟ ವೈದ್ಯರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಎಲ್ಲ ಖಾಸಗಿ ವೈದ್ಯರು ಕೂಡಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಕಡ್ಡಾಯವಾಗಿದೆ.

ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯರ ಸೇವೆ
ಮಹಾರಾಷ್ಟ್ರದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಖಾಸಗಿ ವೈದ್ಯರನ್ನು ಕೂಡಾ ಬಳಸಿಕೊಂಡು ಕೊರೊನಾ ವೈರಸ್ ವಿರುದ್ಧ ಪ್ರಬಲವಾಗಿ ಹೋರಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಮುಂಬೈನ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಯ ನಿರ್ದೇಶಕ ಡಾ.ಟಿ.ಪಿ.ಲಹಾನೆ ಎಲ್ಲ ಖಾಸಗಿ ವೈದ್ಯರಿಗೆ ಪತ್ರ ಬರೆದಿದ್ದಾರೆ.

ಕಡ್ಡಾಯ ವೈದ್ಯಕೀಯ ಸೇವೆ ಒದಗಿಸುವಂತೆ ಸೂಚನೆ
ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯದಲ್ಲಿನ ಎಲ್ಲ ವೈದ್ಯರಿಗೆ ಒಂದು ಅರ್ಜಿಯನ್ನು ರವಾನಿಸಲಾಗಿದೆ. ಈ ಅರ್ಜಿಯಲ್ಲಿ ವೈದ್ಯರು ತಮ್ಮ ಅರ್ಹತೆ, ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್ ನಲ್ಲಿ ದಾಖಲಾಗಿರುವ ತಮ್ಮ ವೈದ್ಯಕೀಯ ಪರವಾನಗಿ ಸಂಖ್ಯೆ, ಪ್ರಸ್ತುತ ವೈದ್ಯರು ಸೇವೆ ಸಲ್ಲಿಸುತ್ತಿರುವ ಸ್ಥಳದ ವಿವರವನ್ನು ತುಂಬಿ ಈ ಮೇಲ್ ಮೂಲಕ ಬಿಎಂಸಿ(BMC)ಗೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ.

15 ದಿನ ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ
ಭಾರತ ಲಾಕ್ ಡೌನ್ ನಿಂದ ಮುಚ್ಚಿದ್ದ ಖಾಸಗಿ ಆಸ್ಪತ್ರೆ ಮತ್ತು ವೈದ್ಯರೂ ಕೂಡಾ ಸೇವೆ ಆರಂಭಿಸಬೇಕು. ಕನಿಷ್ಠ 15 ದಿನಗಳ ಕಾಲ ಕೊರೊನಾ ವೈರಸ್ ಸೋಂಕಿತರ ತಪಾಸಣೆ ನಡೆಸುವುದು ಹಾಗೂ ಚಿಕಿತ್ಸೆ ನೀಡುವುದು ಸೇರಿದಂತೆ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಯ ನಿರ್ದೇಶಕ ಡಾ.ಟಿ.ಪಿ.ಲಹಾನೆ ತಿಳಿಸಿದ್ದಾರೆ.

ಸೂಚನೆಯನ್ನು ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ
ವೈದ್ಯರು ಸರ್ಕಾರದ ಆದೇಶವನ್ನು ತಿರಸ್ಕರಿಸಿದ್ದಲ್ಲಿ ಅಥವಾ ಪಾಲನೆ ಮಾಡದಿದ್ದರೆ ಎಂಸಿಐ ಕೋಡ್ ಆಫ್ ಎಡಿಕ್ಸ್ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಸಾಂಕ್ರಾಮಿಕ ರೋಗ ಕಾಯ್ದೆ 1897ರ ಅಡಿಯಲ್ಲಿ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.